
ರಾಯ್ ಸಿ.ಜೆ. ಆತ್ಮಹತ್ಯೆ: ತನಿಖೆಗೆ ವಿಶೇಷ ತಂಡ, ಐಟಿ ಅಧಿಕಾರಿಗಳನ್ನು ಸಂಪರ್ಕಿಸಲು ಪೊಲೀಸರ ನಿರ್ಧಾರ
ರಾಯ್ ಅವರನ್ನು ಕಳೆದ ಮೂರು ದಿನಗಳಿಂದ ವಿಚಾರಣೆಗೆ ಒಳಪಡಿಸಿದ್ದ ಐಟಿ ಅಧಿಕಾರಿಗಳನ್ನು ಕರೆಸಿ ಹೇಳಿಕೆ ಪಡೆದು, ಮುಂದಿನ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಉನ್ನತ ಮೂಲಗಳು ತಿಳಿಸಿವೆ.
ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಸಂಸ್ಥೆಯ ಅಧ್ಯಕ್ಷ ಸಿ.ಜೆ. ರಾಯ್ ತಮ್ಮ ಬಂಗಲೆ ಕಮ್ ಕಚೇರಿಯಲ್ಲಿ ಶುಕ್ರವಾರ ಅಪರಾಹ್ನ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ, ಆ ವೇಳೆ ಅಲ್ಲೇ ಇದ್ದರೆನ್ನಲಾದ ಆದಾಯ ತೆರಿಗೆ ಅಧಿಕಾರಿಗಳ ವಿಚಾರಿಸಿ ಮಾಹಿತಿ ಪಡೆಯಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ.
ಈ ಸಂಬಂಧ ಬೆಂಗಳೂರು ಪೊಲೀಸ್ ಅಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ವಿಶೇಷ ತನಿಖಾ ತಂಡ ರಚಿಸಿದ್ದು ರಾಯ್ ಅವರನ್ನು ಕಳೆದ ಮೂರು ದಿನಗಳಿಂದ ವಿಚಾರಣೆಗೆ ಒಳಪಡಿಸಿದ್ದ ಐಟಿ ಅಧಿಕಾರಿಗಳನ್ನು ಕರೆಸಿ ಹೇಳಿಕೆ ಪಡೆದು, ಮುಂದಿನ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಉನ್ನತ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್, "ಘಟನೆ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ಕಳೆದ ಮೂರು ದಿನಗಳಿಂದ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಯಾವ ಪ್ರಕರಣ ಸಂಬಂಧ ಪರಿಶೀಲನೆ ಕಾರ್ಯ ಕೈಗೊಂಡಿದ್ದರು ಎಂಬುದು ತಿಳಿದುಬಂದಿಲ್ಲ. ಪೊಲೀಸ್ ತಂಡವು ಐಟಿ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಲಾಗುವುದು," ಎಂದು ಹೇಳಿದ್ದಾರೆ.
ಘಟನಾ ಸ್ಥಳದಲ್ಲಿ ಪೊಲೀಸ್ ಅಯುಕ್ತ ಸೀಮಂತ್ ಕುಮಾರ್ ಸಿಂಗ್
ಕಾನ್ಫಿಡೆಂಟ್ ಗ್ರೂಪ್‌ನ ರಾಯ್ ಸಿ. ಜೆ. ಅವರು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸಂಬಂಧಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ಹಂಚಿಕೊಂಡಿದ್ದು, "ಕಳೆದ ಮೂರು ದಿನಗಳಿಂದ ಆದಾಯ ತೆರಿಗೆ (ಐಟಿ) ಇಲಾಖೆಯ ಅಧಿಕಾರಿಗಳು ಕಾನ್ಫಿಡೆಂಟ್ ಗ್ರೂಪ್‌ನ ಕಚೇರಿಯಲ್ಲಿ ತನಿಖೆ ನಡೆಸುತ್ತಿದ್ದರು," ಎಂದು ಹೇಳಿದ್ದಾರೆ. ಅವರು ಸ್ಥಳೀಯ ಮಾಧ್ಯಮವೊಂದಕ್ಕೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಅವರು, ಥಾಯ್ಲೆಂಡ್ನ ಫುಕೆಟ್‌ನಿಂದ ಬರುತ್ತಿದ್ದು, ಸದ್ಯ ಎಮಿಗ್ರೇಷನ್ ಮೂಲಕ ಬೆಂಗಳೂರಿಗೆ ಧಾವಿಸುತ್ತಿದ್ದಾರೆ.
ರಾಯ್ ಸಿ ಜೆ ಅವರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಆ ಸಂಬಂಧಿ ಖಚಿತಪಡಿಸಿದ್ದು, "ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಐಟಿ ತನಿಖೆಯ ನೇತೃತ್ವವನ್ನು ಕೇರಳ ಮೂಲದ ಅಡಿಷನಲ್ ಕಮಿಷನರ್ ಕೃಷ್ಣಪ್ರಸಾದ್ ಎಂಬುವವರು ವಹಿಸಿದ್ದರು," ಎಂದು ಅವರು ಉಲ್ಲೇಖಿಸಿದ್ದಾರೆ.
ಒಂದು ತಿಂಗಳ ಹಿಂದೆಯೂ ನಡೆದಿತ್ತು ದಾಳಿ
ಕೇವಲ ಕಳೆದ ಮೂರು ದಿನಗಳಿಂದ ಮಾತ್ರವಲ್ಲದೇ, ಸುಮಾರು ಒಂದು ತಿಂಗಳ ಹಿಂದೆಯೂ ಇವರ ಮೇಲೆ ಐಟಿ ದಾಳಿ ನಡೆದಿತ್ತು ಎಂಬ ಮಾಹಿತಿಯನ್ನೂ ರಾಯ್ ಅವರ ಸಂಬಂಧಿ ಬಹಿರಂಗಪಡಿಸಿದ್ದಾರೆ. ಆದರೆ, ರಾಯ್ ಅವರಿಗೆ ನಿರ್ದಿಷ್ಟವಾಗಿ ಯಾವ ಸಮಸ್ಯೆ ಇತ್ತು ಅಥವಾ ಅಧಿಕಾರಿಗಳು ತನಿಖೆಯ ವೇಳೆ ಏನನ್ನು ಪ್ರಶ್ನಿಸುತ್ತಿದ್ದರು ಎಂಬ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಉದ್ಯಮ ವಲಯದಲ್ಲಿ ತಲ್ಲಣ
ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್ ಸಂಸ್ಥೆಯ ಅಧ್ಯಕ್ಷ ಸಿ.ಜೆ. ರಾಯ್ ತಮ್ಮ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ತಲ್ಲಣ ಮೂಡಿಸಿದೆ.
ನಗರದ ಲ್ಯಾಂಗ್‌ಫೋರ್ಡ್ ಟೌನ್‌ನಲ್ಲಿರುವ (ರಿಚ್ಮಂಡ್ ಸರ್ಕಲ್ ಬಳಿ) ಕಾನ್ಫಿಡೆಂಟ್ ಗ್ರೂಪ್‌ನ ಪ್ರಧಾನ ಕಚೇರಿಯಲ್ಲಿ ಈ ದುರ್ಘಟನೆ ನಡೆದಿದೆ. ಶುಕ್ರವಾರ ಬೆಳಗ್ಗೆಯಿಂದಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಚೇರಿಯ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದರು ಎನ್ನಲಾಗಿದೆ.
ಮಧ್ಯಾಹ್ನದ ವೇಳೆಗೆ ಕಚೇರಿಗೆ ಆಗಮಿಸಿದ್ದ ಸಿ.ಜೆ. ರಾಯ್ ಅವರನ್ನು ಅಧಿಕಾರಿಗಳು ಸುಮಾರು ಒಂದು ಗಂಟೆ ಕಾಲ ವಿಚಾರಣೆ ನಡೆಸಿದ್ದಾರೆ. ಈ ವೇಳೆ ರಾಯ್ ಅವರು ಕೆಲವು ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿದ್ದರು. ನಂತರ, ಮತ್ತಷ್ಟು ದಾಖಲೆಗಳನ್ನು ತರುವುದಾಗಿ ಹೇಳಿ ತಮ್ಮ ಕೊಠಡಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅಲ್ಲಿ ತಮ್ಮ ಬಳಿಯಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಾರ್ಗಮಧ್ಯೆ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಅಶೋಕ್ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ರಾಯ್ ಕಂಗಾಲಾಗಿದ್ದರೆ?
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಪದೇ ಪದೇ ನಡೆಯುತ್ತಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯಿಂದ ಸಿ.ಜೆ. ರಾಯ್ ಕಂಗಾಲಾಗಿದ್ದರು ಎನ್ನಲಾಗಿದೆ. ಶುಕ್ರವಾರವೂ ಸಹ 10 ಅಧಿಕಾರಿಗಳ ತಂಡ ಎರಡು ಕಾರುಗಳಲ್ಲಿ ಬಂದು ದಾಳಿ ನಡೆಸಿತ್ತು. ತೆರಿಗೆ ವಂಚನೆಯ ಆರೋಪದ ಮೇಲೆ ನಡೆಯುತ್ತಿದ್ದ ಈ ತನಿಖೆ ಮತ್ತು ಮಾನಸಿಕ ಒತ್ತಡಕ್ಕೆ ಹೆದರಿ ಅವರು ಈ ತೀವ್ರ ನಿರ್ಧಾರ ಕೈಗೊಂಡಿರಬಹುದು ಎಂದು ಪೊಲೀಸರು ಶಂಕೆಯಾಗಿದೆ.
ಆತ್ಮಹತ್ಯೆಗೆ ಬಳಸಿದ ಪಿಸ್ತೂಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಚೇರಿಯಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಅಲ್ಲದೆ, ಸಾವಿಗೂ ಮುನ್ನ ಅವರು ಯಾವುದಾದರೂ ಡೆತ್ ನೋಟ್ ಬರೆದಿದ್ದಾರೆಯೇ? ಅಥವಾ ಯಾರಿಗಾದರೂ ಸಂದೇಶ ಕಳುಹಿಸಿದ್ದಾರೆಯೇ? ಎಂಬ ಬಗ್ಗೆ ಮೊಬೈಲ್ ಫೋನ್ ಮತ್ತು ಕಚೇರಿಯ ದಾಖಲೆಗಳನ್ನು ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಮೂಲತಃ ಕೇರಳದ ಉದ್ಯಮಿ
ಮೂಲತಃ ಕೇರಳದವರಾದ ಸಿ.ಜೆ. ರಾಯ್ ಅವರ ಜೀವನಗಾಥೆ ಅತ್ಯಂತ ರೋಚಕಗಿದೆ. 1997ರಲ್ಲಿ ಹೆಚ್‌ಪಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಅವರು, ನಂತರ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಕಾಲಿಟ್ಟರು. ಕೇವಲ 30-40 ನಿವೇಶನಗಳಿಂದ ಆರಂಭವಾದ ಉದ್ಯಮ, ನಂತರ 'ಕಾನ್ಫಿಡೆಂಟ್ ಗ್ರೂಪ್' ಎಂಬ ಬೃಹತ್ ಸಾಮ್ರಾಜ್ಯವಾಗಿ ಬೆಳೆಯಿತು. ಈ ಸಂಸ್ಥೆಯು ಸುಮಾರು ಒಂದು ಸಾವಿರಕ್ಕೂ ಎಕರೆಗೂ ಹೆಚ್ಚು ಭೂಮಿಯನ್ನು ಹೊಂದಿದೆ. ರಿಯಲ್ ಎಸ್ಟೇಟ್ ಮಾತ್ರವಲ್ಲದೆ ಹೋಟೆಲ್, ರೆಸಾರ್ಟ್, ಗಾಲ್ಫ್ ಕೋರ್ಸ್ ಮತ್ತು ಶಿಕ್ಷಣ ಸಂಸ್ಥೆಗಳಲ್ಲೂ ಅವರು ಬಂಡವಾಳ ಹೂಡಿದ್ದರು.
ಸಾವಿರಾರು ಕೋಟಿ ಒಡೆಯರಾಗಿದ್ದ ಸಿ.ಜೆ. ರಾಯ್ ಅತ್ಯಂತ ಐಷಾರಾಮಿ ಜೀವನ ನಡೆಸುತ್ತಿದ್ದರು. ಅವರ ಬಳಿ ಸುಮಾರು 12 ರೋಲ್ಸ್ ರಾಯ್ಸ್ ಕಾರುಗಳಿದ್ದವು. ಇತ್ತೀಚೆಗಷ್ಟೇ ಅವರು 10 ಕೋಟಿ ರೂಪಾಯಿ ಬೆಲೆಬಾಳುವ 'ಫ್ಯಾಂಟಮ್-8' ಕಾರನ್ನು ಖರೀದಿಸಿ ಸುದ್ದಿಯಾಗಿದ್ದರು. ಕೇವಲ ಶ್ರೀಮಂತಿಕೆಯಷ್ಟೇ ಅಲ್ಲದೆ, ಅವರು ದಾನ ಮಾಡುವಲ್ಲಿಯೂ ಹೆಸರಾಗಿದ್ದರು.
ಇತ್ತೀಚೆಗೆ 201 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿದ್ದರು. ಅಲ್ಲದೆ, ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ವಿಜೇತರಿಗೆ ನೀಡಲಾಗುವ 50 ಲಕ್ಷ ರೂಪಾಯಿ ಬಹುಮಾನಕ್ಕೆ ಇವರ ಸಂಸ್ಥೆಯೇ ಪ್ರಾಯೋಜಕತ್ವ ನೀಡುತ್ತಿತ್ತು. ಇಂತಹ ಯಶಸ್ವಿ ಉದ್ಯಮಿ ಐಟಿ ದಾಳಿಯ ಭೀತಿಯಿಂದ ಪ್ರಾಣ ಕಳೆದುಕೊಂಡಿರುವುದು ಎಲ್ಲರಲ್ಲಿಯೂ ಆಶ್ಚರ್ಯ ಮೂಡಿಸಿದೆ. ಘಟನೆ ಬಳಿಕ ಐಟಿ ಅಧಿಕಾರಿಗಳು ದಾಳಿ ಪ್ರಕ್ರಿಯೆಯನ್ನು ಮೊಟಕುಗೊಳಿಸಿ ಕಚೇರಿಯಿಂದ ವಾಪಸ್ ತೆರಳಿದಿದ್ದಾರೆ.
(ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆ ಸಹಾಯವಾಣಿಗಳನ್ನು ಸಂಪರ್ಕಿಸಿ:1ಲೈಫ್: 7893078930; ಲೈಫ್‌ಲೈನ್ +91-9163940404 , +91-9088030303; ಸುಮೈತ್ರಿ - 011-23389090 , +91-9315767849 ; ನೇಹಾ ಆತ್ಮಹತ್ಯೆ ತಡೆ ಕೇಂದ್ರ : 044-24640050; ಆಸರಾ ಸಹಾಯವಾಣಿ ಆತ್ಮಹತ್ಯೆ ತಡೆ, ಭಾವನಾತ್ಮಕ ಬೆಂಬಲ ಮತ್ತು ಆಘಾತ ನೆರವು ಕೇಂದ್ರ: 91-9820466726; ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ: 1800-599-0019; ದಿಶಾ: 0471-2552056; ಮೈತ್ರಿ: 0484-2540530; ಮತ್ತು ಸ್ನೇಹಾ ಆತ್ಮಹತ್ಯೆ ತಡೆ ಸಹಾಯವಾಣಿ: 044-24640050)

