ಸಾಲ ಕೊಡಿಸುವ ನೆಪದಲ್ಲಿ ಕೋಟಿ ಕೋಟಿ ಪಂಗನಾಮ ; ಸಿಐಡಿ ಪೊಲೀಸರ ದಾಳಿ
x

ಆರೋಪಿ ಪೀಟರ್ ಕ್ಯಾಡಿ

ಸಾಲ ಕೊಡಿಸುವ ನೆಪದಲ್ಲಿ ಕೋಟಿ ಕೋಟಿ ಪಂಗನಾಮ ; ಸಿಐಡಿ ಪೊಲೀಸರ ದಾಳಿ

ಸುಮಾರು ಹದಿನೈದು ವರ್ಷಗಳಿಂದ ಉದ್ಯಮಿಗಳಿಗೆ ವಂಚಿಸುತ್ತಿದ್ದ ಆರೋಪಿ ಪೀಟರ್ ಕ್ಯಾಡಿ, ವಂಚನೆಗೆ ಓಳಗಾದವರ ವಿರುದ್ಧವೇ ಸುಳ್ಳು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿ ನಾಟಕವಾಡುತ್ತಿದ್ದ.


Click the Play button to hear this message in audio format

ಸಾಲ ಕೊಡಿಸುವ ನೆಪದಲ್ಲಿ ನೂರಾರು ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಆರೋಪದ ಹಿನ್ನೆಲೆಯಲ್ಲಿ, ಕುಖ್ಯಾತ ವಂಚಕ ಪೀಟರ್ ಕ್ಯಾಡಿ ಮನೆ ಮೇಲೆ ಸಿಐಡಿ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ದಿಢೀರ್ ದಾಳಿ ನಡೆಸಿದ್ದಾರೆ.

ಪುಲಿಕೇಶಿನಗರದ ಕೋಲ್ಸ್ ಪಾರ್ಕ್ ಸಮೀಪವಿರುವ ಪೀಟರ್ ಕ್ಯಾಡಿ ನಿವಾಸದಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದ 15 ವರ್ಷಗಳಿಂದ ಸುಮಾರು 500ಕ್ಕೂ ಹೆಚ್ಚು ಜನರಿಗೆ ವಂಚಿಸಿರುವ ಈ ಜಾಲದ ಕರಾಳ ಮುಖ ತನಿಖೆಯ ವೇಳೆ ಬಯಲಿಗೆ ಬಂದಿದೆ.

ವಂಚನೆಯ ಜಾಲ ಹೇಗೆ?

ಬ್ಯಾಂಕ್ ಬಡ್ಡಿಗಿಂತ ಕಡಿಮೆ ಬಡ್ಡಿದರದಲ್ಲಿ ಕೋಟ್ಯಂತರ ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸಿ ಪೀಟರ್ ಕ್ಯಾಡಿ ಉದ್ಯಮಿಗಳಿಗೆ ಗಾಳ ಹಾಕುತ್ತಿದ್ದನು. ರಂಭದಲ್ಲಿ ಉದ್ಯಮಿಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೊತ್ತದ ಡಿ.ಡಿ (Demand Draft) ತೆಗೆದು ತೋರಿಸಿ ನಂಬಿಕೆ ಹುಟ್ಟಿಸುತ್ತಿದ್ದನು. ಇದನ್ನು ನಂಬಿದವರಿಂದ ಖಾಲಿ ಚೆಕ್ ಹಾಳೆಗಳು ಮತ್ತು ಆಸ್ತಿ ಪತ್ರಗಳನ್ನು ಪಡೆದುಕೊಳ್ಳುತ್ತಿದ್ದನು. ಸಾಲ ಮಂಜೂರು ಮಾಡುವ ನೆಪದಲ್ಲಿ 'ಪ್ರೊಸೆಸಿಂಗ್ ಶುಲ್ಕ' ಮತ್ತು 'ಕಮಿಷನ್' ರೂಪದಲ್ಲಿ ಕೋಟ್ಯಂತರ ಹಣ ಪಡೆದು, ಕೊನೆಗೆ ಸಾಲವನ್ನೂ ನೀಡದೆ ಮೋಸ ಮಾಡುತ್ತಿದ್ದನು.

ದೂರುದಾರರ ಮೇಲೆಯೇ ಪ್ರತಿದೂರು!

ಹಣ ಕಳೆದುಕೊಂಡವರು ವಾಪಸ್ ಕೇಳಲು ಬಂದರೆ, ಅವರ ವಿರುದ್ಧವೇ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಬೆದರಿಸುವುದು ಈ ಗ್ಯಾಂಗ್‌ನ ತಂತ್ರವಾಗಿತ್ತು. ಸಂತ್ರಸ್ತರು ನೀಡಿದ್ದ ಖಾಲಿ ಚೆಕ್‌ಗಳನ್ನು ಬಳಸಿ, ಅವರ ವಿರುದ್ಧವೇ ಸುಳ್ಳು ಚೆಕ್ ಬೌನ್ಸ್ ಕೇಸ್ ದಾಖಲಿಸಿ ಹಿಂಸೆ ನೀಡುತ್ತಿದ್ದನು. ಸುಮಾರು 300ಕ್ಕೂ ಹೆಚ್ಚು ಇಂತಹ ಸುಳ್ಳು ಪ್ರಕರಣಗಳು ದಾಖಲಾಗಿವೆ. ಯಾರಾದರೂ ಕಚೇರಿಗೆ ಬಂದು ಗಲಾಟೆ ಮಾಡಿದರೆ, ಗ್ಯಾಂಗ್‌ನ ಸದಸ್ಯೆಯಾದ ಅಶ್ವಿನಿ ಎಂಬಾಕೆಯ ಮೂಲಕ ಸುಳ್ಳು ಲೈಂಗಿಕ ದೌರ್ಜನ್ಯ ದೂರು ದಾಖಲಿಸಲಾಗುತ್ತಿತ್ತು. ಇಂತಹ 15ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

ಸುಬ್ಬರಾವ್ ಪ್ರಕರಣ ಮತ್ತು ತನಿಖೆ

ಕಳೆದ ವರ್ಷ ಸುಬ್ಬರಾವ್ ಎಂಬುವವರಿಗೆ ಜಮೀನು ಮಾರಾಟ ಮಾಡಿಕೊಡುವುದಾಗಿ ನಂಬಿಸಿ ಪೀಟರ್ ಕ್ಯಾಡಿ 96 ಲಕ್ಷ ರೂ. ಕಮಿಷನ್ ಪಡೆದು ವಂಚಿಸಿದ್ದನು. ಹಣ ವಾಪಸ್ ಕೇಳಿದ್ದಕ್ಕೆ ಸುಬ್ಬರಾವ್ ವಿರುದ್ಧವೇ ಚೆಕ್ ಬೌನ್ಸ್ ಕೇಸ್ ಹಾಕಲಾಗಿತ್ತು. ಈ ಬಗ್ಗೆ ಪುಲಿಕೇಶಿನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಐಡಿ ಆರ್ಥಿಕ ಅಪರಾಧ ದಳಕ್ಕೆ ವರ್ಗಾಯಿಸಲಾಗಿತ್ತು.

ಆರೋಪಿಗಳ ಪಟ್ಟಿ

ಪೀಟರ್ ಕ್ಯಾಡಿ ನೇತೃತ್ವದ ಈ ವಂಚನೆ ಜಾಲದಲ್ಲಿ ಅಮಿತ್ ಕ್ಯಾಡಿ, ಅಶ್ವಿನಿ, ಹರಿಮೋಹನ್ ನಾಯ್ಡು, ಅಲ್ತಾಫ್ ಮತ್ತು ಚಾರಿ ಮುರಳಿ ಶಾಮೀಲಾಗಿದ್ದಾರೆ. ಈ ಜಾಲದಿಂದ ವಂಚನೆಗೆ ಒಳಗಾದವರು ತಕ್ಷಣವೇ ಸಿಐಡಿ ಆರ್ಥಿಕ ಅಪರಾಧ ದಳವನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Read More
Next Story