Chikkamagaluru Girl Missing|ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶವವಾಗಿ ಪತ್ತೆ
x

Chikkamagaluru Girl Missing|ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶವವಾಗಿ ಪತ್ತೆ

ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರೀನಂದಾ 2000 ಅಡಿ ಆಳದ ಪ್ರಪಾತದಲ್ಲಿ ಶವವಾಗಿ ಪತ್ತೆಯಾಗಿದೆ.


Click the Play button to hear this message in audio format

ಚಿಕ್ಕಮಂಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ ಶುಕ್ರವಾರ ಹೆಣವಾಗಿ ಪತ್ತೆಯಾಗಿದ್ದಾರೆ. ಪೋಷಕರು ಹಾಗೂ ಸಂಬಂಧಿಕರ ಜೊತೆಗೂಡಿ ಪ್ರವಾಸಕ್ಕೆ ಬಂದಿದ್ದ 14 ವರ್ಷದ ಈ ಬಾಲಕಿ, ತನ್ನ ಸಹೋದರ-ಸಹೋದರಿಯರೊಂದಿಗೆ ವಿಡಿಯೋ ಮಾಡುತ್ತಾ ಬೆಟ್ಟ ಹತ್ತುತ್ತಿದ್ದ ವೇಳೆ ನಿಗೂಢವಾಗಿ ನಾಪತ್ತೆಯಾಗಿದ್ದಳು.

ಕಳೆದ ಮಂಗಳವಾರ ಸಂಜೆ ಸುಮಾರು 6 ಗಂಟೆಯ ವೇಳೆಗೆ ಮಾಣಿಕ್ಯಧಾರಾ ಜಲಪಾತದ ಬಳಿ ಶ್ರೀನಂದಾ ಕಾಣೆಯಾಗಿದ್ದು, ಸುಮಾರು 40 ಜನರ ತಂಡದೊಂದಿಗೆ ಆಕೆ ಟ್ರಕ್ಕಿಂಗ್‌ಗೆ ತೆರಳಿದ್ದಳು. ಈ ಕುರಿತು ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದ ತಂಡ, ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಬೃಹತ್ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.

ದಟ್ಟವಾದ ಮಂಜು ಮತ್ತು ಗುಡ್ಡಗಾಡು ಪ್ರದೇಶದ ಕಡಿದಾದ ಹಾದಿಗಳಿಂದಾಗಿ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದ್ದು, ಪೊಲೀಸರು ರಾತ್ರಿಯಿಡೀ ಥರ್ಮಲ್ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಹುಡುಕಾಟ ನಡೆಸಿದ್ದರು. ಆತಂಕದಲ್ಲಿದ್ದ ಕುಟುಂಬಸ್ಥರು ಹಾಗೂ ಸ್ಥಳೀಯ ಆಡಳಿತ ತೀವ್ರ ಶೋಧ ಕಾರ್ಯ ಕೈಗೊಂಡಿದ್ದರು. ಆದರೆ, ಮೂರು ದಿನಗಳ ಸತತ ಹುಡುಕಾಟದ ನಂತರ ಸುಮಾರು 2000 ಅಡಿ ಆಳದ ಪ್ರಪಾತದಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.

ಸರಿಸುಮಾರು 4000 ಅಡಿ ಎತ್ತರದ ಕಡಿದಾದ ಬೆಟ್ಟವನ್ನು ಏರುತ್ತಿದ್ದ ಸಂದರ್ಭದಲ್ಲಿ ಶ್ರೀನಂದಾ ಆಕಸ್ಮಿಕವಾಗಿ ಕಾಲು ಜಾರಿ ಪ್ರಪಾತಕ್ಕೆ ಬಿದ್ದಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಇಷ್ಟು ದೊಡ್ಡ ಪ್ರಪಾತಕ್ಕೆ ಬೀಳುವಾಗ ಆಕೆ ಕಿರುಚಿದ ಸದ್ದು ಯಾರಿಗೂ ಕೇಳಿಸಲಿಲ್ಲವೇ ಅಥವಾ ಅಲ್ಲಿ ಅಸಲಿಗೆ ನಡೆದಿದ್ದೇನು ಎಂಬ ಬಗ್ಗೆ ಹತ್ತಾರು ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಬಾಲಕಿಯ ಸಾವು ಸಂಭವಿಸಿದ್ದು ಹೇಗೆ ಎಂಬ ಬಗ್ಗೆ ಪೊಲೀಸರು ಈಗಾಗಲೇ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಕಾಲು ಜಾರಿ ಬಿದ್ದಿದ್ದೇ ಈ ದುರಂತಕ್ಕೆ ಕಾರಣವೇ ಅಥವಾ ಬೇರೆ ಯಾವುದಾದರೂ ಅನಾಹುತ ಸಂಭವಿಸಿದೆಯೇ ಎಂಬ ನಿಖರ ಮಾಹಿತಿ ಮರಣೋತ್ತರ ಪರೀಕ್ಷೆ ಹಾಗೂ ಪೊಲೀಸ್ ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ.

Read More
Next Story