
ಬೆಂಗಳೂರಿನಲ್ಲಿ ಐಪಿಎಲ್ ಟಿಕೆಟ್‌ಗಳ ಕಾಳಸಂತೆ ಜಾಲ ಭೇದಿಸಿದ ಸಿಸಿಬಿ, 11 ಮಂದಿ ಸೆರೆ
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಮಾಹಿತಿ ನೀಡಿರುವಂತೆ, ಕಬ್ಬನ್ ಪಾರ್ಕ್ ಮತ್ತು ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು ಏಳು ಪ್ರಕರಣಗಳನ್ನು ದಾಖಲಿಸಲಾಗಿದೆ.
ಐಪಿಎಲ್ ಕ್ರೇಜ್ ಅನ್ನು ಬಂಡವಾಳ ಮಾಡಿಕೊಂಡು ಟಿಕೆಟ್‌ಗಳನ್ನು ದುಬಾರಿ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವೊಂದನ್ನು ಬೆಂಗಳೂರು ಪೊಲೀಸರ ಸಿಸಿಬಿ ವಿಶೇಷ ತನಿಖಾ ದಳ ಭೇದಿಸುವಲ್ಲಿ ಯಶಸ್ವಿಯಾಗಿದೆ. ಏಪ್ರಿಲ್ 5ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹೈ-ವೋಲ್ಟೇಜ್ ಪಂದ್ಯದ ವೇಳೆ ಕಾರ್ಯಾಚರಣೆ ನಡೆಸಿದ ಸಿಸಿಬಿ, 11 ಮಂದಿ ಆರೋಪಿಗಳನ್ನು ಬಂಧಿಸಿದೆ.
4.53 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳ ಜಪ್ತಿ
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಮಾಹಿತಿ ನೀಡಿರುವಂತೆ, ಕಬ್ಬನ್ ಪಾರ್ಕ್ ಮತ್ತು ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು ಏಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಬಂಧಿತರಿಂದ ವಿವಿಧ ಮುಖಬೆಲೆಯ 28 ಐಪಿಎಲ್ ಟಿಕೆಟ್‌ಗಳು, ಎಂಟು ಮೊಬೈಲ್ ಫೋನ್‌ಗಳು ಹಾಗೂ ಅಕ್ರಮವಾಗಿ ಆನ್‌ಲೈನ್ ಮೂಲಕ ಟಿಕೆಟ್ ಮಾರಾಟ ಮಾಡಲು ಬಳಸಿದ್ದ ವಾಟ್ಸಾಪ್ ಸ್ಕ್ರೀನ್‌ಶಾಟ್‌ಗಳ ಪ್ರಿಂಟ್‌ಔಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜಪ್ತಿಯಾಗಿರುವ ಟಿಕೆಟ್ ಮತ್ತು ವಸ್ತುಗಳ ಒಟ್ಟು ಮೌಲ್ಯ ಅಂದಾಜು 4.53 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಕ್ರೀಡಾಂಗಣದ ಸುತ್ತಮುತ್ತ ಕಾರ್ಯಾಚರಣೆ ನಡೆಸಿದ ಸಿಸಿಬಿ ಅಧಿಕಾರಿಗಳು, ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ಜನರನ್ನು ಬಂಧಿಸಿದ್ದಾರೆ. ಇವರಿಂದ 18 ಐಪಿಎಲ್ ಟಿಕೆಟ್‌ಗಳು, ಏಳು ಮೊಬೈಲ್ ಫೋನ್‌ಗಳು ಮತ್ತು ಡಿಜಿಟಲ್ ಪಾವತಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ವಶಕ್ಕೆ ಪಡೆಯಲಾಗಿದೆ.
ಚಾಮರಾಜಪೇಟೆ ಠಾಣಾ ವ್ಯಾಪ್ತಿಯಲ್ಲಿ ಒಬ್ಬನನ್ನು ಬಂಧಿಸಿರುವ ಪೊಲೀಸರು, ಆತನಿಂದ 10 ಟಿಕೆಟ್‌ಗಳು, ಒಂದು ಮೊಬೈಲ್ ಫೋನ್ ಹಾಗೂ ಟಿಕೆಟ್ ಮಾರಾಟಕ್ಕೆ ಬಳಸಿದ್ದ ವಾಟ್ಸಾಪ್ ಸ್ಕ್ರೀನ್‌ಶಾಟ್‌ಗಳನ್ನು ಜಪ್ತಿ ಮಾಡಿದ್ದಾರೆ.
ವ್ಯಾಪಕ ತನಿಖೆ ಚುರುಕು
ಸಾಮಾನ್ಯ ಅಭಿಮಾನಿಗಳಿಗೆ ಟಿಕೆಟ್ ಸಿಗದೆ ಪರದಾಡುತ್ತಿರುವಾಗ, ಕಾಳಸಂತೆಕೋರರ ಕೈಗೆ ಇಷ್ಟೊಂದು ಟಿಕೆಟ್‌ಗಳು ಹೇಗೆ ಸಿಗುತ್ತಿವೆ ಎಂಬುದರ ಬಗ್ಗೆ ಸಿಸಿಬಿ ಅಧಿಕಾರಿಗಳು ತೀವ್ರ ತನಿಖೆ ಕೈಗೊಂಡಿದ್ದಾರೆ. ಈ ಜಾಲದ ಹಿಂದೆ ಕ್ರೀಡಾಂಗಣದ ಸಿಬ್ಬಂದಿ ಅಥವಾ ಇನ್ನಾವುದೇ ಪ್ರಭಾವಿಗಳ ಕೈವಾಡವಿದೆಯೇ ಎಂಬುದನ್ನು ಪತ್ತೆಹಚ್ಚಲು ವಿಚಾರಣೆ ಮುಂದುವರಿಸಿದ್ದಾರೆ.

