
ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲು; ಕಳಸದ ಬಳಿ ದುರಂತ
ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ. ಘಟನೆಯ ಸುದ್ದಿ ತಿಳಿದು ಕುಟುಂಬಸ್ಥರಲ್ಲಿ ಶೋಕದ ವಾತಾವರಣ ತುಂಬಿದೆ.
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಬಾಳೆಹೊಳೆ ಸಮೀಪದ ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಶನಿವಾರ (ಫೆಬ್ರವರಿ 14) ಸಂಜೆ ನಡೆದಿದೆ. ಅಭಿಷೇಕ್ (27) ಮತ್ತು ಯೋಗೀಶ್ (17) ಎಂಬ ಇಬ್ಬರು ದುರ್ದೈವಿಗಳು.
ಕೊಡಗು ಜಿಲ್ಲೆಯ ಮೂಲದವರಾದ ಮೃತರು, ಕಳಸದಲ್ಲಿ ಕೆಲಸ ಮಾಡುತ್ತಿದ್ದರು. ಅಭಿಷೇಕ್ ಅಕ್ಕ ಕಳಸದ ಕಾಫಿ ತೋಟದಲ್ಲಿ ಕೆಲಸದಲ್ಲಿದ್ದು, ರಜೆಯಂದು ಮನೆಗೆ ಬಂದಿದ್ದರು. ಅಲ್ಲಿಂದ ಯೋಗೀಶ್ ಸಹಿತ ಇಬ್ಬರು ನದಿಯಲ್ಲಿ ಈಜಲು ತೆರಳಿದ್ದರು. ಆದರೂ ನದಿಯ ಆಳವನ್ನು ತಿಳಿಯದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೋಧ ಕಾರ್ಯ ಜಾರಿಯಲ್ಲಿದೆ
ಘಟನೆ ತಿಳಿದು ಸ್ಥಳಕ್ಕೆ ಕಳಸ ಪೊಲೀಸ್ ಠಾಣೆಯ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯ ಈಜು ತಜ್ಞರು ತೆರಳಿದ್ದಾರೆ. ಮೃತದೇಹಗಳ ಶೋಧ ಕಾರ್ಯ ಆರಂಭಿಸಲಾಗಿದ್ದು, ಸಂಜೆಯಾಗುವ ಕಾರಣ ಶನಿವಾರ ರಾತ್ರಿ ಶೋಧ ನಿಲ್ಲಿಸಲಾಗಿದೆ. ಭಾನುವಾರ (ಫೆಬ್ರವರಿ 15) ಬೆಳಗ್ಗೆ ಮತ್ತೆ ತೀವ್ರ ಶೋಧ ಕಾರ್ಯ ಆರಂಭಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ. ಘಟನೆಯ ಸುದ್ದಿ ತಿಳಿದು ಕುಟುಂಬಸ್ಥರಲ್ಲಿ ಶೋಕದ ವಾತಾವರಣ ಹರಡಿದೆ.

