ಮಹಿಳೆಯರನ್ನು ವಂಚಿಸಿ ಚಿನ್ನ ದೋಚುತ್ತಿದ್ದ ಖದೀಮರು ಪೊಲೀಸರ ಬಲೆಗೆ
x

ಮಹಿಳೆಯರಿಗೆ ಸುಳ್ಳು ಭರವಸೆ ನೀಡಿ ಚಿನ್ನ ಕಳವು ಮಾಡುತ್ತಿದ್ದ ಇಬ್ಬರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯರನ್ನು ವಂಚಿಸಿ ಚಿನ್ನ ದೋಚುತ್ತಿದ್ದ ಖದೀಮರು ಪೊಲೀಸರ ಬಲೆಗೆ

ಬಂಧಿತರಿಂದ 130 ಗ್ರಾಂ ಚಿನ್ನಾಭರಣ ಹಾಗೂ ಚಿನ್ನದ ಗಟ್ಟಿ ಮತ್ತು ಒಂದು ಮೊಬೈಲ್ ಫೋನ್‌ ಸೇರಿ ಒಟ್ಟು 19 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.


Click the Play button to hear this message in audio format

ಮಹಿಳೆಯರೊಂದಿಗೆ ಸ್ನೇಹ ಬೆಳೆಸಿಕೊಂಡು, ಸುಳ್ಳು ಭರವಸೆ ನೀಡಿ ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪದ ಮೇಲೆ ಯಶವಂತಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 130 ಗ್ರಾಂ ಚಿನ್ನಾಭರಣ ಹಾಗೂ ಚಿನ್ನದ ಗಟ್ಟಿ ಮತ್ತು ಒಂದು ಮೊಬೈಲ್ ಫೋನ್‌ ಸೇರಿ ಒಟ್ಟು 19 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜುಲೈ 11ರಂದು ಗೊಲ್ಲರಹಟ್ಟಿಯ ಮಹಿಳೆಯೊಬ್ಬರನ್ನು ಆರೋಪಿ ಸಂಪರ್ಕಿಸಿದ್ದ. ತಾನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಚಿತ್ರರಂಗದ ಖ್ಯಾತ ನಿರ್ಮಾಪಕರ ಪರಿಚಯ ಹೊಂದಿರುವುದಾಗಿ ಹೇಳಿಕೊಂಡಿದ್ದ. ಮಹಿಳೆಯ ಜಮೀನು ಸಂಬಂಧಿತ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿ, ಯಶವಂತಪುರ ರೈಲು ನಿಲ್ದಾಣದ ಸಮೀಪದ ಲಾಡ್ಜ್‌ಗೆ ಚರ್ಚೆಗೆ ಬರುವಂತೆ ತಿಳಿಸಿದ್ದ.

ಲಾಡ್ಜ್‌ನಲ್ಲಿ ಚಿನ್ನದ ಸರ ಕದ್ದು ಪರಾರಿ

ಆರೋಪಿಯ ಮಾತನ್ನು ನಂಬಿದ ಮಹಿಳೆ ಲಾಡ್ಜ್‌ಗೆ ತೆರಳಿದ್ದರು. ಈ ವೇಳೆ ತನ್ನ ಚಿನ್ನದ ಮಾಂಗಲ್ಯ ಸರವನ್ನು ತೆಗೆದು ಹ್ಯಾಂಡ್‌ಬ್ಯಾಗ್‌ನಲ್ಲಿ ಇಟ್ಟಿದ್ದರು. ಮಹಿಳೆಯ ಗಮನ ಬೇರೆಡೆ ಇದ್ದಾಗ ಆರೋಪಿ ಚಿನ್ನದ ಸರವನ್ನು ಕದ್ದು ಅಲ್ಲಿಂದ ಪರಾರಿಯಾಗಿದ್ದಾನೆ. ಈ ಕುರಿತು ಜುಲೈ 12ರಂದು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಮೆಜೆಸ್ಟಿಕ್‌ನಲ್ಲಿ ಇಬ್ಬರ ಬಂಧನ

ಪ್ರಕರಣದ ತನಿಖೆ ಕೈಗೊಂಡ ಯಶವಂತಪುರ ಪೊಲೀಸರು ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸಿ, ಮಾಹಿತಿ ಕಲೆಹಾಕಿದ್ದರು. ಖಚಿತ ಮಾಹಿತಿ ಆಧರಿಸಿ ಆಗಸ್ಟ್ 9ರಂದು ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಆರೋಪಿಗಳು ಮಹಿಳೆಯ ಚಿನ್ನದ ಮಾಂಗಲ್ಯ ಸರ ಕದ್ದಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಇದೇ ರೀತಿಯಲ್ಲಿ ಇತರ ಮಹಿಳೆಯರಿಂದಲೂ ಚಿನ್ನದ ಸರಗಳನ್ನು ಕಳವು ಮಾಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ದಾವಣಗೆರೆ, ಸುಮನಹಳ್ಳಿಯಲ್ಲಿ ಚಿನ್ನ ವಶ

ಆಗಸ್ಟ್ 10ರಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ 8 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದಿದ್ದರು. ವಿಚಾರಣೆ ವೇಳೆ ಕದ್ದ ಚಿನ್ನವನ್ನು ದಾವಣಗೆರೆಯ ಆಭರಣ ಮಳಿಗೆ ಹಾಗೂ ಸುಮನಹಳ್ಳಿಯಲ್ಲಿರುವ ಲಾಡ್ಜ್‌ನಲ್ಲಿ ಇಟ್ಟಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ.

ಆರೋಪಿಗಳ ಮಾಹಿತಿ ಆಧರಿಸಿ ಆಗಸ್ಟ್ 10ರಿಂದ 14ರವರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ದಾವಣಗೆರೆಯ ಆಭರಣ ಮಳಿಗೆಯಿಂದ ಚಿನ್ನದ ಗಟ್ಟಿ ಹಾಗೂ ಸುಮನಹಳ್ಳಿಯ ಲಾಡ್ಜ್‌ನಿಂದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 130 ಗ್ರಾಂ ಚಿನ್ನಾಭರಣ ಮತ್ತು ಚಿನ್ನದ ಗಟ್ಟಿ, ಒಂದು ಮೊಬೈಲ್ ಫೋನ್‌ ಸೇರಿ 19 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ

ಇಬ್ಬರ ಬಂಧನದೊಂದಿಗೆ ಯಶವಂತಪುರ, ಕೆಂಗೇರಿ ಮತ್ತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ. ಆಗಸ್ಟ್ 17ರಂದು ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ ಅವರ ಮಾರ್ಗದರ್ಶನದಲ್ಲಿ ಹಾಗೂ ಯಶವಂತಪುರ ಉಪವಿಭಾಗದ ಎಸಿಪಿ ಬಿ.ವೈ. ರೇಣುಕಾ ಪ್ರಸಾದ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಯಶವಂತಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್ ವಿ. ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Read More
Next Story