
ಮೃತ ಯುವತಿ ರಂಜಿತಾ
ಚಿಕ್ಕಮಗಳೂರು ಹೋಂಸ್ಟೇನಲ್ಲಿ ಬೆಂಗಳೂರು ಟೆಕ್ಕಿ ನಿಗೂಢ ಸಾವು: 4 ತಿಂಗಳ ಬಳಿಕ ಬಯಲಾಯ್ತು ಅಸಲಿ ಕಾರಣ!
ಆರಂಭದಲ್ಲಿ ಈ ಸಾವಿನ ಕುರಿತು ಹಲವು ಅನುಮಾನಗಳು, ಹೃದಯಾಘಾತದ ಶಂಕೆಗಳು ವ್ಯಕ್ತವಾಗಿದ್ದವು. ಆದರೆ, ಇತ್ತೀಚೆಗೆ ಬಂದ ಮರಣೋತ್ತರ ಪರೀಕ್ಷೆಯ ವರದಿಯು ಸಾವಿನ ಹಿಂದಿನ ನೈಜ ಕಾರಣವನ್ನು ಬಿಚ್ಚಿಟ್ಟಿದೆ.
ನಾಲ್ಕು ತಿಂಗಳ ಹಿಂದೆ ಚಿಕ್ಕಮಗಳೂರಿನ ಹೋಂಸ್ಟೇಯೊಂದರಲ್ಲಿ ಬೆಂಗಳೂರಿನ ಐಟಿ ಉದ್ಯೋಗಿ ನಿಗೂಢವಾಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಯುವತಿಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆಯ ಸಾವಿಗೆ 'ಕಾರ್ಬನ್ ಮಾನಾಕ್ಸೈಡ್' ಎಂಬ ವಿಷಕಾರಿ ಅನಿಲವೇ ಕಾರಣ ಎಂಬ ಆಘಾತಕಾರಿ ಸತ್ಯ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಹೋಂಸ್ಟೇ ಮಾಲೀಕನ ನಿರ್ಲಕ್ಷ್ಯವೇ ಸಾವಿಗೆ ನೇರ ಕಾರಣ ಎಂದು ಆಲ್ದೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಿಸಲಾಗಿದೆ.
ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಂಜಿತಾ ಎಂಬ ಯುವತಿ, ಕಳೆದ ವರ್ಷ ಅಕ್ಟೋಬರ್ 25ರಂದು ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಹಾಂದಿ ಮಾಚಗೊಂಡನಹಳ್ಳಿಯಲ್ಲಿರುವ ‘ಹಿಪ್ಲಾ ಹೋಂ ಸ್ಟೇ’ಗೆ ಬಂದಿದ್ದರು. ಸ್ನೇಹಿತೆಯೊಬ್ಬರ ನಿಶ್ಚಿತಾರ್ಥದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಅದೇ ಹೋಂಸ್ಟೇನಲ್ಲಿ ತಂಗಿದ್ದರು.
ಬೆಳಗ್ಗೆ ಸ್ನಾನಕ್ಕಾಗಿ ಬಾತ್‌ರೂಮ್‌ಗೆ ಹೋದ ರಂಜಿತಾ ದೀರ್ಘಕಾಲದವರೆಗೆ ಹೊರಗೆ ಬಾರದಿದ್ದಾಗ ಸಂಶಯಗೊಂಡ ಸ್ನೇಹಿತರು, ಬಾಗಿಲು ಮುರಿದು ನೋಡಿದಾಗ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅದಾಗಲೇ ಆಕೆ ಮೃತಪಟ್ಟಿದ್ದರು.
ಮರಣೋತ್ತರ ಪರೀಕ್ಷೆಯಲ್ಲಿ ಬಯಲಾದ ಕರಾಳ ಸತ್ಯ
ಆರಂಭದಲ್ಲಿ ಈ ಸಾವಿನ ಕುರಿತು ಹಲವು ಅನುಮಾನಗಳು, ಹೃದಯಾಘಾತದ ಶಂಕೆಗಳು ವ್ಯಕ್ತವಾಗಿದ್ದವು. ಆದರೆ, ಇತ್ತೀಚೆಗೆ ಬಂದ ಮರಣೋತ್ತರ ಪರೀಕ್ಷೆಯ ವರದಿಯು ಸಾವಿನ ಹಿಂದಿನ ನೈಜ ಕಾರಣವನ್ನು ಬಿಚ್ಚಿಟ್ಟಿದೆ. ರಂಜಿತಾ ಅವರು ಸ್ನಾನ ಮಾಡುತ್ತಿದ್ದ ಬಾತ್‌ರೂಮ್‌ನಲ್ಲಿ ಅಳವಡಿಸಲಾಗಿದ್ದ ಗ್ಯಾಸ್ ಗೀಸರ್‌ನಿಂದ (Gas Geyser) 'ಕಾರ್ಬನ್ ಮಾನಾಕ್ಸೈಡ್' ಅನಿಲ ಸೋರಿಕೆಯಾಗಿದೆ. ಬಾತ್‌ರೂಮ್‌ನಲ್ಲಿ ಸರಿಯಾದ ವೆಂಟಿಲೇಶನ್ (ಗಾಳಿ-ಬೆಳಕಿನ ವ್ಯವಸ್ಥೆ) ಇಲ್ಲದ ಕಾರಣ, ವಾಸನೆ ರಹಿತವಾದ ಈ ವಿಷಕಾರಿ ಅನಿಲವನ್ನು ಸೇವಿಸಿ ಆಕೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಮೃತ ಯುವತಿ ರಂಜಿತಾ
ಮಾಲೀಕನ ವಿರುದ್ಧ ಎಫ್‌ಐಆರ್
ಯುವತಿಯ ಸಾವಿಗೆ ಹೋಂಸ್ಟೇ ಮಾಲೀಕರ ನಿರ್ಲಕ್ಷ್ಯವೇ ನೇರ ಕಾರಣ ಎಂದು ರಂಜಿತಾ ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ. ಗ್ಯಾಸ್ ಗೀಸರ್ ಅಳವಡಿಸುವಾಗ ಕಡ್ಡಾಯವಾಗಿ ಪಾಲಿಸಬೇಕಾದ ಸುರಕ್ಷತಾ ಕ್ರಮಗಳನ್ನು ಮಾಲೀಕರು ಗಾಳಿಗೆ ತೂರಿದ್ದರು ಎಂಬುದು ತನಿಖೆಯಲ್ಲಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಹೋಂಸ್ಟೇ ಮಾಲೀಕ ಸುಧಾಕರ್ ಎಂಬುವವರ ವಿರುದ್ಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

