Seven Indians Rescued from Myanmar
x

ಫೇಸ್‌ಬುಕ್ ಟ್ರೇಡಿಂಗ್ ಜಾಹೀರಾತು ನಂಬಿದ ಬೆಂಗಳೂರಿನ ಟೆಕ್ಕಿಗೆ 1.9 ಕೋಟಿ ರೂ. ವಂಚನೆಯಾಗಿದೆ.

ಫೇಸ್‌ಬುಕ್ ಜಾಹೀರಾತು ನಂಬಿ ಹೂಡಿಕೆ ಮಾಡಿದ ಟೆಕ್ಕಿಗೆ 1.9 ಕೋಟಿ ರೂ. ಪಂಗನಾಮ

ಫೇಸ್‌ಬುಕ್ ಬಳಸುತ್ತಿದ್ದ ವೇಳೆ ಟೆಕ್ಕಿಯ ಕಣ್ಣಿಗೆ ಆನ್‌ಲೈನ್ ಟ್ರೇಡಿಂಗ್‌ಗೆ ಸಂಬಂಧಿಸಿದ ಜಾಹೀರಾತು ಬಿದ್ದಿದೆ. ಜಾಹೀರಾತಿನಲ್ಲಿದ್ದ ಲಿಂಕ್ ತೆರೆಯುತ್ತಿದ್ದಂತೆ ಕೆಲವರು ಹೂಡಿಕೆ ಸಲಹೆಗಾರರು ಹಾಗೂ ಕಂಪನಿ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡು ಸಂತ್ರಸ್ತ ಟೆಕ್ಕಿಯನ್ನು ಸಂಪರ್ಕಿಸಿದ್ದಾರೆ.


Click the Play button to hear this message in audio format

ಬೆಂಗಳೂರಿನಲ್ಲಿ ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಟೆಕ್ಕಿಯೊಬ್ಬರಿಗೆ ಬರೋಬ್ಬರಿ 1.9 ಕೋಟಿ ರೂ. ವಂಚಿಸಿರುವ ಆರೋಪ ಕೇಳಿಬಂದಿದೆ. ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡ ಜಾಹೀರಾತಿನ ಮೂಲಕ ಟೆಕ್ಕಿಯನ್ನು ಸಂಪರ್ಕಿಸಿದ ಸೈಬರ್ ವಂಚಕರು, ನಕಲಿ ಹೂಡಿಕೆ ಪ್ಲಾಟ್‌ಫಾರ್ಮ್‌ ಒಂದರಲ್ಲಿ ಹಣ ಹೂಡಿಕೆ ಮಾಡುವಂತೆ ನಂಬಿಸಿ ವಂಚಿಸಿದ್ದಾರೆ. ಈ ಕುರಿತು ಈಸ್ಟ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಫೆಬ್ರವರಿಯಿಂದ ಘಟನೆ ನಡೆಯುತ್ತಿದ್ದು, ಫೇಸ್‌ಬುಕ್ ಬಳಸುತ್ತಿದ್ದ ವೇಳೆ ಟೆಕ್ಕಿಯ ಕಣ್ಣಿಗೆ ಆನ್‌ಲೈನ್ ಟ್ರೇಡಿಂಗ್‌ಗೆ ಸಂಬಂಧಿಸಿದ ಜಾಹೀರಾತು ಬಿದ್ದಿದೆ. ಜಾಹೀರಾತಿನಲ್ಲಿದ್ದ ಲಿಂಕ್ ತೆರೆಯುತ್ತಿದ್ದಂತೆ ಕೆಲವರು ಹೂಡಿಕೆ ಸಲಹೆಗಾರರು ಹಾಗೂ ಕಂಪನಿ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡು ಸಂತ್ರಸ್ತರನ್ನು ಸಂಪರ್ಕಿಸಿದ್ದಾರೆ. ‘ಪ್ರಾಕ್ಸ್‌ಟ್ರೆಂಡ್’ ಎಂಬ ಹೂಡಿಕೆ ವೇದಿಕೆಯ ಮೂಲಕ ಟ್ರೇಡಿಂಗ್ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಅವರು ಭರವಸೆ ನೀಡಿದ್ದರು. ಇದನ್ನು ನಂಬಿದ ಟೆಕ್ಕಿ, ವಂಚಕರು ನೀಡಿದ ನಕಲಿ ವೆಬ್‌ಸೈಟ್‌ನಲ್ಲಿ ಖಾತೆ ತೆರೆದಿದ್ದಾರೆ.

ನಕಲಿ ಲಾಭ ತೋರಿಸಿ ನಂಬಿಕೆ ಗಳಿಕೆ

ಸಂತ್ರಸ್ತರ ವಿಶ್ವಾಸ ಗಳಿಸಲು ವಂಚಕರು ಆರಂಭದಲ್ಲಿ ಆನ್‌ಲೈನ್ ಖಾತೆಯಲ್ಲಿ ಲಾಭವಾಗುತ್ತಿರುವಂತೆ ನಕಲಿ ಮಾಹಿತಿಯನ್ನು ಪ್ರದರ್ಶಿಸಿದ್ದರು. ಬಳಿಕ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಕರೆ ಮಾಡುತ್ತಿದ್ದ ಅಕೌಂಟ್ ಮ್ಯಾನೇಜರ್‌ಗಳು ನಿರಂತರವಾಗಿ ಹೂಡಿಕೆ ಸಲಹೆ ನೀಡುತ್ತಿದ್ದರು. ಫೆಬ್ರವರಿ 27ರಿಂದ ಸೆಪ್ಟೆಂಬರ್ 9ರವರೆಗೆ ಹಂತ ಹಂತವಾಗಿ ಹಣ ಹೂಡಿಕೆ ಮಾಡುವಂತೆ ಸಂತ್ರಸ್ತರಿಗೆ ಒತ್ತಡ ಹೇರಲಾಗಿದೆ. ವಂಚಕರ ಸೂಚನೆಯಂತೆ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿದ ಟೆಕ್ಕಿ, ಒಟ್ಟು 1.9 ಕೋಟಿ ರೂ. ಕಳೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಹಣ ವಾಪಸ್ ಕೇಳಿದಾಗ ಮತ್ತಷ್ಟು ಹಣಕ್ಕೆ ಬೇಡಿಕೆ

ಖಾತೆಯಲ್ಲಿ ದೊಡ್ಡ ಮೊತ್ತದ ಲಾಭ ಇದೆ ಎಂದು ತೋರಿಸಿದ್ದರಿಂದ ಸಂತ್ರಸ್ತರು ತಮ್ಮ ಹಣವನ್ನು ಹಿಂಪಡೆಯಲು ಮುಂದಾಗಿದ್ದಾರೆ. ಆರಂಭದಲ್ಲಿ ಸಣ್ಣ ಮೊತ್ತವನ್ನು ಹಿಂಪಡೆಯಲು ಅವಕಾಶ ನೀಡಿದ್ದ ವಂಚಕರು, ಸಂಪೂರ್ಣ ಹಣವನ್ನು ಪಡೆಯಲು ಮುಂದಾದಾಗ ಹಲವು ಕಾರಣಗಳನ್ನು ನೀಡಿದ್ದಾರೆ.

ಸೆಪ್ಟೆಂಬರ್ 9ರಂದು ಹಣ ವಿತ್‌ಡ್ರಾ ಮಾಡಲು ಪ್ರಯತ್ನಿಸಿದಾಗ ಪ್ರಕ್ರಿಯೆ ಪೂರ್ಣಗೊಳಿಸಲು ಹೆಚ್ಚುವರಿ ಹಣ ಪಾವತಿಸಬೇಕು ಎಂದು ವಂಚಕರು ಹೇಳಿದ್ದಾರೆ. 50 ಲಕ್ಷ ರೂ. ಮತ್ತು 20 ಲಕ್ಷ ರೂ. ಹೆಚ್ಚುವರಿಯಾಗಿ ನೀಡುವಂತೆ ಒತ್ತಾಯಿಸಿದ ಬಳಿಕ ಟೆಕ್ಕಿಗೆ ತಾವು ಸೈಬರ್ ವಂಚನೆಗೆ ಒಳಗಾಗಿರುವುದು ಅರಿವಾಗಿದೆ.

1930ಕ್ಕೆ ಕರೆ ಮಾಡಿ ದೂರು

ವಂಚನೆ ನಡೆದಿರುವುದು ತಿಳಿಯುತ್ತಿದ್ದಂತೆ ಸಂತ್ರಸ್ತರು ಸೈಬರ್ ಕ್ರೈಮ್ ಸಹಾಯವಾಣಿ 1930ಕ್ಕೆ ಮಾಹಿತಿ ನೀಡಿದ್ದಾರೆ. ನಂತರ ಬೆಂಗಳೂರಿನ ಈಸ್ಟ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳ ವಿವರಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳು ಬಳಸಿರುವ ಖಾತೆಗಳನ್ನು ಫ್ರೀಜ್ ಮಾಡುವ ಪ್ರಕ್ರಿಯೆ ಆರಂಭಿಸಿದ್ದಾರೆ. ವಂಚಕರ ಗುರುತು ಹಾಗೂ ಹಣದ ವರ್ಗಾವಣೆಯ ಮಾರ್ಗದ ಕುರಿತು ತನಿಖೆ ಮುಂದುವರಿದಿದೆ.

Read More
Next Story