
ದೊಡ್ಡಬಳ್ಳಾಪುರದಲ್ಲಿ ಬೇಲಿ ಇಲ್ಲದ ಕೃಷಿ ಹೊಂಡಕ್ಕೆ ಬಿದ್ದು 11 ಹಾಗೂ 4 ವರ್ಷದ ಇಬ್ಬರು ಮಕ್ಕಳು ದಾರುಣ ಸಾವು
ದೊಡ್ಡಬಳ್ಳಾಪುರ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ದಾರುಣ ಸಾವು
ದೊಡ್ಡಬಳ್ಳಾಪುರದಲ್ಲಿ ಬೇಲಿ ಇಲ್ಲದ ಕೃಷಿ ಹೊಂಡಕ್ಕೆ ಬಿದ್ದು 11 ಹಾಗೂ 4 ವರ್ಷದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ರೈತನ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೊಗರಿಘಟ್ಟ ಗ್ರಾಮದಲ್ಲಿ ಆಟವಾಡುವಾಗ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಪೋಷಕರು ಮನೆಯಲ್ಲಿ ಇಲ್ಲದಿದ್ದ ಸಮಯದಲ್ಲಿ ಆಟ ಆಡಲು ಹೋಗಿದ್ದ 11ವರ್ಷದ ದಕ್ಷಾ ಹಾಗೂ 4 ವರ್ಷದ ಧನುಷ್ ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ದುರಂತ ಸಂಭವಿಸಿದ ಕೃಷಿ ಹೊಂಡವು ರೈತ ಗುರುಮೂರ್ತಿ ಎಂಬುವವರಿಗೆ ಸೇರಿದ್ದಾಗಿದ್ದು, ಹೊಂಡದ ಸುತ್ತಲೂ ಕನಿಷ್ಠ ಸುರಕ್ಷತಾ ಬೇಲಿಯನ್ನೂ ಅಳವಡಿಸಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಿರ್ಲಕ್ಷ್ಯದ ಆರೋಪದಡಿ ರೈತ ಗುರುಮೂರ್ತಿ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ರಾಜ್ಯದಲ್ಲಿ ಕೃಷಿ ಹೊಂಡ, ಕೆರೆ ಹಾಗೂ ನೀರಿನ ಸಂಪ್‌ಗಳಿಗೆ ಬಿದ್ದು ಮಕ್ಕಳು ಬಲಿಯಾಗುತ್ತಿರುವ ಸರಣಿ ದುರಂತಗಳು ಇತ್ತೀಚೆಗೆ ಹೆಚ್ಚುತ್ತಲೇ ಇವೆ. ಕಳೆದ ಜೂನ್ 13 ರಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರದಲ್ಲಿ ಮನೆ ಮುಂದಿನ ನೀರಿನ ಸಂಪ್‌ಗೆ ಬಿದ್ದು ಎರಡು ವರ್ಷದ ಮಗು ಮೃತಪಟ್ಟಿತ್ತು. ಅದಕ್ಕೂ ಮುನ್ನ ಜೂನ್ 8 ರಂದು ಬಾಗಲಕೋಟೆಯಲ್ಲಿ ನೀರಿನ ಟ್ಯಾಂಕ್‌ನಲ್ಲಿ ಮುಳುಗಿ 12 ತಿಂಗಳ ಹೆಣ್ಣು ಮಗು ದಾರುಣವಾಗಿ ಅಂತ್ಯ ಕಂಡಿತ್ತು. ಈ ಘಟನೆಗಳು ಮಾಸುವ ಮುನ್ನವೇ ದೊಡ್ಡಬಳ್ಳಾಪುರದಲ್ಲಿ ಮತ್ತೊಂದು ಭೀಕರ ದುರಂತ ನಡೆದಿದೆ.

