
ಪಲಮನೇರು ಬಳಿ ಭೀಕರ ಅಪಘಾತ
Chittoor Accident| ಭೀಕರ ಅಪಘಾತ; ತಿಮ್ಮಪ್ಪನ ದರ್ಶನಕ್ಕೆ ಹೊರಟ ಬೆಂಗಳೂರಿನ ಐವರು ಸಾವು
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರು ಮೂಲದ ಐವರು ಯಾತ್ರಿಕರು ದುರ್ಮರಣಕ್ಕೀಡಾಗಿದ್ದಾರೆ.
ಬೆಂಗಳೂರಿನಿಂದ ತಿರುಪತಿಗೆ ಕಾರಿನಲ್ಲಿ ತೆರಳುತ್ತಿದ್ದ ಭಕ್ತರ ತಂಡವು ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಐದು ಜನ ಮೃತಪಟ್ಟಿಟರುವ ಘಟನೆ ಇಂದು ಬೆಳಗ್ಗೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತರನ್ನು ಬೆಂಗಳೂರಿನ ರಾಜಾಜಿನಗರ ನಿವಾಸಿಗಳಾದ ಮೋಹನ್ ದಾಸ್ (71), ನಾಗರಾಜ ರಾವ್ (61), ಕುಸುಮಾ (61), ಜಯಂತಿ (59) ಮತ್ತು ಪೂಜಾ (33) ಎಂದು ಗುರುತಿಸಲಾಗಿದೆ. ಮೃತರಲ್ಲಿ ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಲಾರಿಯ ಅಡಿಯಲ್ಲಿ ಸಿಲುಕಿಕೊಂಡಿತ್ತು. ಸ್ಥಳೀಯರ ನೆರವಿನೊಂದಿಗೆ ಪೊಲೀಸರು ಕಾರಿನಲ್ಲಿದ್ದ ಮೃತದೇಹಗಳನ್ನು ಹರಸಾಹಸ ಪಟ್ಟು ಹೊರತೆಗೆದಿದ್ದಾರೆ.
ಕಾರು ಅತೀ ವೇಗದಲ್ಲಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಚಾಲಕನ ನಿದ್ರೆ ಮಂಪರು ಕೂಡ ಈ ಅಪಘಾತಕ್ಕೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪಲಮನೇರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ಇತ್ತೀಚೆಗೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಫಣಸಮಾಕನಹಳ್ಳಿ ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪೊಲೀಸ್ ಪೇದೆಯೊಬ್ಬರು ಮೃತಪಟ್ಟಿದ್ದರು. ಬೈಕ್‌ಗೆ ವೇಗವಾಗಿ ಬಂದ ಬೊಲೆರೊ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿತ್ತು. ಅಪಘಾತದಲ್ಲಿ ಮೃತಪಟ್ಟವರನ್ನು ಆನಂದ್ ಬಾಬು (40) ಎಂದು ಗುರುತಿಸಲಾಗಿದೆ. ಇವರು ಶ್ರೀನಿವಾಸಪುರ ತಾಲೂಕಿನ ಯಲ್ದೂರು ಪೊಲೀಸ್ ಹೊರ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಘಟನೆಯ ದಿನದಂದು ಅವರು ಠಾಣೆಯಲ್ಲಿ ತಮ್ಮ ಕೆಲಸ ಮುಗಿಸಿ, ಕೋಲಾರದಲ್ಲಿರುವ ತಮ್ಮ ನಿವಾಸಕ್ಕೆ ಬೈಕ್‌ನಲ್ಲಿ ವಾಪಸ್ಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು.
ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸಮೀಪದ ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿತ್ತು. ಅತೀ ವೇಗವಾಗಿ ಬಂದ ಎಕ್ಸ್‌ಯುವಿ ಕಾರು ಮೊದಲು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು, ನಂತರ ಮತ್ತೊಂದು ಕಾರು ಹಾಗೂ ಕ್ಯಾಂಟರ್ ಲಾರಿಗೆ ಢಿಕ್ಕಿಯಾಗಿತ್ತು. ಈ ಘಟನೆಯಲ್ಲಿ ಓರ್ವ ಬೈಕ್ ಸವಾರ ಸೇರಿದಂತೆ ಒಟ್ಟು ಏಳು ಮಂದಿ ಮೃತಪಟ್ಟಿದ್ದರು.

