
ಬೆಂಗಳೂರಿನ ಗಾಯತ್ರಿ ನಗರದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ ಸಂಭವಿಸಿದೆ.
ಅಕ್ರಮ ಸಂಬಂಧದ ಕಿಚ್ಚಿಗೆ ಒಂದು ಕುಟುಂಬವೇ ಆಹುತಿ: ಪ್ರಿಯತಮೆ ಹಾಗೂ ಪೋಷಕರಿಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ!
Crime News| ಇನ್‌ಸ್ಟಾಗ್ರಾಮ್ ಸ್ನೇಹದಿಂದ ಅಕ್ರಮ ಸಂಬಂಧ ಬೆಳೆಸಿದ್ದ ವಿವಾಹಿತ ಯುವಕ, ಬೈಕ್ ನೀಡದ ಕ್ಷುಲ್ಲಕ ಕಾರಣಕ್ಕೆ ತನ್ನ ಪ್ರಿಯತಮೆ ಹಾಗೂ ಆಕೆಯ ಪೋಷಕರ ಮೇಲೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿದ್ದಾನೆ.
ಅಕ್ರಮ ಸಂಬಂಧದ ಅಮಲಿನಲ್ಲಿ ಯುವಕನೋರ್ವ ರಾಕ್ಷಸನಾಗಿದ್ದಾನೆ. ಬೆಂಗಳೂರಿನ ತರಬನಹಳ್ಳಿಯಲ್ಲಿ ಭಾನುವಾರ ತಡರಾತ್ರಿ ತನ್ನ ಪ್ರಿಯತಮೆ ಹಾಗೂ ಆಕೆಯ ತಂದೆ-ತಾಯಿಯ ಮೇಲೆ ಪೆಟ್ರೋಲ್ ಸುರಿದು ಜೀವಂತವಾಗಿ ದಹಿಸಲು ಯತ್ನಿಸಿದ ಘಟನೆ ಬೆಂಗಳೂರು ನಗರವನ್ನೇ ನಡುಗಿಸಿದೆ. ಬೆಂಕಿಯ ಕೆನ್ನಾಲಿಗೆ ಸಿಲುಕಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಮತ್ತೊಂದೆಡೆ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಏನಿದು ಘಟನೆ?
ಆರೋಪಿ ಪಾಂಡು ಅಲಿಯಾಸ್ ಚಂದು ಹಾಗೂ ಸುಮಲತಾ ಎಂಬುವವರ ನಡುವೆ ಇನ್‌ಸ್ಟಾಗ್ರಾಮ್ ಮೂಲಕ ಚಿಗುರಿದ್ದ ಸ್ನೇಹವು ಕಳೆದ ಆರು ವರ್ಷಗಳಿಂದ ಸಂಬಂಧವಾಗಿ ಮುಂದುವರಿದಿತ್ತು. ಇಬ್ಬರೂ ಈಗಾಗಲೇ ವಿವಾಹಿತರಾಗಿದ್ದು, ಸಂಸಾರ ಮತ್ತು ಮಕ್ಕಳನ್ನು ಹೊಂದಿದ್ದರೂ ಈ ಅಕ್ರಮ ಸಂಬಂಧವನ್ನು ಮುಂದುವರಿಸಿದ್ದರು. ಆದರೆ, ಚಂದು ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಎನ್ನಲಾದ ವಿಚಾರವಾಗಿ ಇವರ ನಡುವೆ ಬಿರುಕು ಮೂಡಿತ್ತು. ತನ್ನ ಮನೆಯಲ್ಲೇ ಮತ್ತೊಬ್ಬ ಮಹಿಳೆಯನ್ನು ಇರಿಸಿಕೊಂಡಿದ್ದ ಚಂದುವಿನ ನಡೆಯನ್ನು ಸುಮಲತಾ ಪ್ರಶ್ನಿಸಿದ್ದೇ ಈ ಘಟನೆಗೆ ಕಾರಣವಾಗಿದೆ.
ಬೈಕ್ ವಿಚಾರವಾಗಿ ಹತ್ತಿದ ಕಿಚ್ಚು
ಈ ಮನಸ್ತಾಪದ ನಡುವೆಯೇ ಬೈಕ್ ನೀಡುವ ವಿಚಾರವಾಗಿ ನಡೆದ ಸಣ್ಣ ಜಗಳವು ಅಂತಿಮವಾಗಿ ಈ ದುರಂತಕ್ಕೆ ನಾಂದಿ ಹಾಡಿದೆ. ಬೈಕ್ ಕೇಳಲೆಂದು ಸುಮಲತಾ ಅವರ ಮನೆಗೆ ಬಂದಿದ್ದ ಚಂದುವಿಗೆ, ಸುಮಲತಾ ಮತ್ತು ಆಕೆಯ ಪೋಷಕರು ಬೈಕ್ ನೀಡಲು ನಿರಾಕರಿಸಿದ್ದಾರೆ. ಇದರಿಂದ ಕೆರಳಿದ ಚಂದು, ತನ್ನೊಂದಿಗೆ ತಂದಿದ್ದ ಪೆಟ್ರೋಲ್ ಅನ್ನು ಮೊದಲು ಸುಮಲತಾ ಅವರ ತಾಯಿ ಮಂಜಮ್ಮನ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ. ಅದನ್ನು ತಡೆಯಲು ಬಂದ ತಂದೆ ಶ್ರೀರಾಮ್ ಮತ್ತು ಸುಮಲತಾ ಅವರ ಮೇಲೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ.
ಪ್ರಸ್ತುತ ಮೂವರೂ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಜಮ್ಮ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಚಂದುವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅನೈತಿಕ ಸಂಬಂಧದ ಸಂಘರ್ಷ ಮತ್ತು ಕ್ಷಣಿಕ ಆವೇಶ ಹೇಗೆ ಒಂದು ಕುಟುಂಬವನ್ನೇ ಆಸ್ಪತ್ರೆ ಪಾಲು ಮಾಡಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

