
ಸಾಂದರ್ಭಿಕ ಚಿತ್ರ
ಮಾದಕ ದ್ರವ್ಯ ನಿಗ್ರಹ ದಳದ ಭರ್ಜರಿ ಬೇಟೆ: 7.12 ಲಕ್ಷ ರೂ. ಮೌಲ್ಯದ 285 ಕೆ.ಜಿ. ರಕ್ತ ಚಂದನ ಜಪ್ತಿ
ಆರೋಪಿ ನೀಡಿದ ಮಾಹಿತಿ ಆಧಾರದ ಮೇಲೆ ಮಾರ್ಚ್ 16 ರಂದು ಆತ ತಿಳಿಸಿದ ಸ್ಥಳದಿಂದ 275 ಕೆ.ಜಿ. ರಕ್ತ ಚಂದನದ 13 ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮವಾಗಿ ರಕ್ತ ಚಂದನದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 285 ಕೆ.ಜಿ. ರಕ್ತ ಚಂದನದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ 7.12 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಮಾರ್ಚ್ 11ರಂದು ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಹಳೆ ವಿಮಾನ ನಿಲ್ದಾಣ ರಸ್ತೆಯ ಸಿಲ್ಕ್ ಬೋರ್ಡ್ ಬಸ್ ನಿಲ್ದಾಣದ ಬಳಿ ಅರಣ್ಯ ಸರ್ವೀಸ್ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಟಾಟಾ ಏಸ್ ವಾಹನದಲ್ಲಿ ರಕ್ತ ಚಂದನದ ತುಂಡುಗಳನ್ನು ಮಾರಾಟ ಮಾಡಲು ಬರುತ್ತಾನೆ ಎಂಬುದು ಆ ಮಾಹಿತಿಯ ಸಾರಾಂಶವಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ವ್ಯಕ್ತಿಯ ಬಳಿ ಇದ್ದ ಟಾಟಾ ಏಸ್ ವಾಹನವನ್ನು ಪರಿಶೀಲಿಸಿದಾಗ ರಕ್ತ ಚಂದನದ ತುಂಡುಗಳು ಪತ್ತೆಯಾಗಿವೆ. ವಿಚಾರಣೆಯ ವೇಳೆ ಆತ ಸರಿಯಾದ ಉತ್ತರ ನೀಡದ ಕಾರಣ, ಆತನನ್ನು ಆತನ ವಶದಲ್ಲಿದ್ದ 10 ಕೆ.ಜಿ. ತೂಕದ 3 ರಕ್ತ ಚಂದನದ ತುಂಡುಗಳ ಸಮೇತ ಠಾಣೆಗೆ ಕರೆದೊಯ್ಯಲಾಯಿತು. ಆತನ ವಿರುದ್ಧ ಕೆ.ಎಫ್. ಕಾಯ್ದೆ (ಕರ್ನಾಟಕ ಅರಣ್ಯ ಕಾಯ್ದೆ) ಮತ್ತು ಕಳ್ಳತನ ಪ್ರಕರಣ ದಾಖಲಿಸಲಾಗಿದೆ.
275 ಕೆ.ಜಿ. ತೂಕದ ರಕ್ತ ಚಂದನ
ಮಾರ್ಚ್ 12ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ, ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ರಕ್ತ ಚಂದನದ ಮರದ ತುಂಡುಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ, ಮಾರಾಟ ಮಾಡುವ ಸಲುವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಶ್ಯಾನುಭೋಗನಹಳ್ಳಿ ಬಳಿಯ ಮಸೀದಿ ಪಕ್ಕದ ಖಾಲಿ ಜಾಗದಲ್ಲಿ 275 ಕೆ.ಜಿ. ತೂಕದ 13 ರಕ್ತ ಚಂದನದ ತುಂಡುಗಳನ್ನು ಇಟ್ಟಿರುವುದಾಗಿ ಮಾಹಿತಿ ನೀಡಿದ್ದ.
ಆರೋಪಿಗಳ ಪತ್ತೆಗೆ ಪೊಲೀಸ್ ಬಲೆ
ಆರೋಪಿ ನೀಡಿದ ಮಾಹಿತಿ ಆಧಾರದ ಮೇಲೆ ಮಾರ್ಚ್ 16ರಂದು ಆತ ತಿಳಿಸಿದ ಸ್ಥಳದಿಂದ 275 ಕೆ.ಜಿ. ರಕ್ತ ಚಂದನದ 13 ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಒಟ್ಟು ಮೌಲ್ಯ 7.12 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮಾರ್ಚ್ 18ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಈ ಕಾರ್ಯಾಚರಣೆಯನ್ನು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತೆ ಮೊಹಮ್ಮದ್ ಸುಜೀತಾ ಎಂ.ಎ. ಅವರ ಮಾರ್ಗದರ್ಶನದಲ್ಲಿ, ಮಾದಕ ದ್ರವ್ಯ ನಿಗ್ರಹ ದಳದ ಸಹಾಯಕ ಪೊಲೀಸ್ ಆಯುಕ್ತ ವಾಸುದೇವ್ ವಿ.ಕೆ. ಅವರ ನೇತೃತ್ವದಲ್ಲಿ, ಮಾದಕ ದ್ರವ್ಯ ನಿಗ್ರಹ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮೊಹಮ್ಮದ್ ಎ.ಜೆ. ಮತ್ತು ಇತರ ಅಧಿಕಾರಿ ಹಾಗೂ ಸಿಬ್ಬಂದಿಯ ತಂಡವು ಯಶಸ್ವಿಯಾಗಿ ಭೇದಿಸಿದೆ.

