
ಬೀಗ ಹಾಕಿದ್ದ ಮನೆಗಳೇ ಈತನ ಟಾರ್ಗೆಟ್: ರಾಮಮೂರ್ತಿ ನಗರ ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಕಳ್ಳ!
ಬೇರೊಂದು ಪ್ರಕರಣದಲ್ಲಿ ಜೈಲಿನಲ್ಲಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗೋವಾದಲ್ಲಿ ಚಿನ್ನ ಮಾರಾಟ ಮಾಡಿರುವ ಸತ್ಯ ಬಾಯ್ಬಿಟ್ಟಿದ್ದು, ಪೊಲೀಸರು ಗೋವಾಕ್ಕೆ ತೆರಳಿ ನಗದು ಹಾಗೂ ಚಿನ್ನಾಭರಣ ವಶ ಪಡಿಸಿಕೊಂಡಿದ್ದಾರೆ.
ಬೀಗ ಹಾಕಿರುವ ಮನೆಗಳನ್ನೇ ಗುರಿಯಾಗಿಸಿಕೊಂಡು ಕನ್ನ ಹಾಕುತ್ತಿದ್ದ ಖತರ್ನಾಕ್ ಕಳ್ಳನೊಬ್ಬನನ್ನು ರಾಮಮೂರ್ತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈತನ ಬಂಧನದಿಂದ ಬರೋಬ್ಬರಿ 79 ಲಕ್ಷ ರೂ. ಮೌಲ್ಯದ 527 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ನಗರದಲ್ಲಿ ನಡೆದಿದ್ದ ಆರು ಪ್ರತ್ಯೇಕ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ.
ತಮಿಳುನಾಡಿಗೆ ಹೋಗಿದ್ದಾಗ ಕನ್ನ
ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಯ್ಸಳ ನಗರದಲ್ಲಿ ಈ ಕಳ್ಳತನ ನಡೆದಿತ್ತು. ದೂರುದಾರರ ಮಗ ಮತ್ತು ಸೊಸೆ 2024ರ ಅಕ್ಟೋಬರ್ 11ರಂದು ತಮ್ಮ ಮನೆಗೆ ಬೀಗ ಹಾಕಿ ತಮಿಳುನಾಡಿಗೆ ತೆರಳಿದ್ದರು. ಈ ವಿಚಾರ ತಿಳಿದಿದ್ದ ಖದೀಮ, ಮನೆಯ ಮುಂಬಾಗಿಲಿನ ಬೀಗ ಮುರಿದು ಒಳನುಗ್ಗಿ, ಕೊಠಡಿಯ ಬೀರುವಿನಲ್ಲಿದ್ದ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ.
ದೂರುದಾರರು ಮಗನ ಮನೆಯ ಬಳಿ ಬಂದು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದ್ದು, 2024ರ ಅ. 12ರಂದು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ, ಬೇರೊಂದು ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಯೊಬ್ಬನ ಮೇಲೆ ಅನುಮಾನ ಮೂಡಿತ್ತು. ಬೈಯಪ್ಪನಹಳ್ಳಿ ಠಾಣೆಯ ಪ್ರಕರಣವೊಂದರಲ್ಲಿ ಬಂಧಿತನಾಗಿ ಕೇಂದ್ರ ಕಾರಾಗೃಹದಲ್ಲಿದ್ದ ಈತನನ್ನು, 2026ರ ಮಾರ್ಚ್ 3ರಂದು ನ್ಯಾಯಾಲಯದ ಆದೇಶದ ಮೇರೆಗೆ 'ಬಾಡಿ ವಾರೆಂಟ್' ಮೂಲಕ 22 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಯಿತು. ಹೊಯ್ಸಳ ನಗರದ ಮನೆಯಲ್ಲಿ ತಾನೇ ಕಳ್ಳತನ ಮಾಡಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ.
ಗೋವಾ ಲಿಂಕ್
ವಿಚಾರಣೆ ವೇಳೆ ಆತ ನೀಡಿದ ಮಾಹಿತಿ ಪೊಲೀಸರನ್ನೇ ಬೆಚ್ಚಿಬೀಳಿಸಿತ್ತು. ಬೆಂಗಳೂರಿನಲ್ಲಿ ಕದ್ದ ಚಿನ್ನಾಭರಣಗಳನ್ನು ಆತ ನೆರೆಯ ಗೋವಾ ರಾಜ್ಯದ ಎರಡು ಜ್ಯುವೆಲ್ಲರಿ ಅಂಗಡಿಗಳಲ್ಲಿ ಮಾರಾಟ ಮಾಡಿದ್ದನು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರ ತಂಡ, ಗೋವಾಕ್ಕೆ ತೆರಳಿ 2026ರ ಮಾರ್ಚ್ 11ರಿಂದ ಮಾರ್ಚ್ 17ರ ನಡುವೆ ಕಾರ್ಯಾಚರಣೆ ನಡೆಸಿ, ಆ ಎರಡು ಜ್ಯುವೆಲ್ಲರಿಗಳಿಂದ ಬರೋಬ್ಬರಿ 79 ಲಕ್ಷ ರೂ. ಮೌಲ್ಯದ 527 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಆರು ಪ್ರಕರಣಗಳು ಇತ್ಯರ್ಥ
ಈ ಒಬ್ಬ ಆರೋಪಿಯ ಬಂಧನದಿಂದ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಬರೋಬ್ಬರಿ ಆರು ಕಳವು ಪ್ರಕರಣಗಳು ಪತ್ತೆಯಾದಂತಾಗಿದ್ದು, ಪೊಲೀಸರ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಈ ಭರ್ಜರಿ ಕಾರ್ಯಾಚರಣೆಯನ್ನು ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ. ವಿಕ್ರಮ್ ಆಮಟೆ ಅವರ ಮಾರ್ಗದರ್ಶನದಲ್ಲಿ, ಬಾಣಸವಾಡಿ ಉಪವಿಭಾಗದ ಎಸಿಪಿ ಉಮಾಶಂಕರ್ ಎಂ.ಎಚ್. ಅವರ ನೇತೃತ್ವದಲ್ಲಿ ರಾಮಮೂರ್ತಿ ನಗರ ಠಾಣೆಯ ಇನ್ಸ್‌ಪೆಕ್ಟರ್ ಸತೀಶ್ ಜಿ.ಜೆ. ಮತ್ತು ಅವರ ತಂಡ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

