
ಕೊಲೆ ಆರೋಪಿಗಳಾದ ತಂದೆ ಶೇಕಪ್ಪ ಮತ್ತು ತಾಯಿ ವಿಜಯಲಕ್ಷ್ಮಿ
ದಂಪತಿ ಜಗಳಕ್ಕೆ ಬಲಿಯಾದ 11 ತಿಂಗಳ ಕಂದಮ್ಮ: ನೆಲಕ್ಕೆ ಬಡಿದು ಕೊಂದ ಪಾಪಿ ಪೋಷಕರ ಬಂಧನ
ವೈದ್ಯಕೀಯ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ತಂದೆ ಶೇಕಪ್ಪ ಮತ್ತು ತಾಯಿ ವಿಜಯಲಕ್ಷ್ಮಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 103(1) ಮತ್ತು ಸೆಕ್ಷನ್ 3(5) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ.
ಕೇವಲ 11 ತಿಂಗಳ ಹಸುಗೂಸನ್ನು ಹೆತ್ತ ಪೋಷಕರೇ ಕ್ರೂರವಾಗಿ ಕೊಲೆ ಮಾಡಿ, ಬಳಿಕ ಅದೊಂದು ಆಕಸ್ಮಿಕ ಅಪಘಾತ ಎಂದು ಬಿಂಬಿಸಲು ಹೋಗಿ ಪೊಲೀಸರ ಅತಿಥಿಯಾಗಿರುವ ಘಟನೆ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಪೂರ್ವ ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಮಾನವೀಯ ಕೃತ್ಯ ನಡೆದಿದ್ದು, ಮಗುವಿನ ತಂದೆ ಶೇಕಪ್ಪ ಮತ್ತು ತಾಯಿ ವಿಜಯಲಕ್ಷ್ಮಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಹಾಸಿಗೆಯಿಂದ ಬಿದ್ದಿದ್ದಾಗಿ ನಾಟಕವಾಡಿದ್ದ ತಂದೆ
ಜೂ. 9 ರಂದು ಕಿಟಗನೂರು ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಮಗು ಮೃತಪಟ್ಟ ತಕ್ಷಣ ತಂದೆ ಶೇಕಪ್ಪ ಪೊಲೀಸರನ್ನು ಸಂಪರ್ಕಿಸಿ, ನನ್ನ ಪತ್ನಿ ವಿಜಯಲಕ್ಷ್ಮಿ ಮಗುವಿಗೆ ಹಾಲುಣಿಸುವಾಗ ಆಕಸ್ಮಿಕವಾಗಿ ನಿದ್ರೆಗೆ ಜಾರಿದ್ದಾಳೆ. ಈ ವೇಳೆ ಮಗು ಹಾಸಿಗೆಯಿಂದ ಕೆಳಗೆ ಬಿದ್ದು ಮೃತಪಟ್ಟಿದೆ ಎಂದು ಕಥೆ ಕಟ್ಟಿದ್ದ. ಆರಂಭದಲ್ಲಿ ಪೊಲೀಸರು ಇದನ್ನು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು.
ವರದಿಯಿಂದ ಬಯಲಾಯ್ತು ಅಸಲಿ ಸತ್ಯ!
ಜೂ. 22 ರಂದು ಬಂದ ಮಗುವಿನ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ವರದಿಯಲ್ಲಿ ಮಗುವಿನ ಸಾವು ಸಾಮಾನ್ಯ ತರಹದ್ದಲ್ಲ, ಬದಲಾಗಿ ಅತಿಯಾದ ಆಂತರಿಕ ರಕ್ತಸ್ರಾವ ಮತ್ತು ಆಂತರಿಕ ಗಾಯಗಳಿಂದ ಉಂಟಾದ ಉಸಿರಾಟದ ತೊಂದರೆಯಿಂದ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಕಂದಮ್ಮನ ಮುಖ, ಎದೆ, ಕಾಲುಗಳು ಹಾಗೂ ಖಾಸಗಿ ಅಂಗಗಳ ಮೇಲೆಯೂ ತೀವ್ರ ಗಾಯಗಳಾಗಿರುವುದು ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ತನಿಖಾಧಿಕಾರಿಗಳು ಹಾಸಿಗೆಯ ಎತ್ತರ ಕೇವಲ ಎರಡು ಅಡಿ ಇರುವುದನ್ನು ಗಮನಿಸಿದ್ದಾರೆ. ಕೇವಲ ಎರಡು ಅಡಿ ಎತ್ತರದಿಂದ ಬಿದ್ದರೆ ಮಗುವಿನ ದೇಹದ ಮೇಲೆ ಈ ಮಟ್ಟಿನ ಗಾಯಗಳು ಮತ್ತು ಆಂತರಿಕ ರಕ್ತಸ್ರಾವ ಆಗಲು ಸಾಧ್ಯವೇ ಇಲ್ಲ ಎಂದು ತೀರ್ಮಾನಿಸಿದ ಪೊಲೀಸರು, ಪೋಷಕರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ.
ದಂಪತಿ ಜಗಳಕ್ಕೆ ಬಲಿಯಾಯ್ತು ಕಂದಮ್ಮ
ಪೊಲೀಸ್ ತನಿಖೆಯ ಪ್ರಕಾರ, ಜೂ. 9 ರ ಮಧ್ಯಾಹ್ನ ಶೇಕಪ್ಪ ಊಟಕ್ಕೆ ಮನೆಗೆ ಬಂದಾಗ ದಂಪತಿ ನಡುವೆ ವಿಪರೀತ ವಾಗ್ವಾದ ನಡೆದಿತ್ತು. ಗಂಡ-ಹೆಂಡತಿ ಜಗಳವಾಡುತ್ತಿದ್ದಾಗ ಮಗು ಜೋರಾಗಿ ಅಳಲು ಪ್ರಾರಂಭಿಸಿದೆ. ಇದರಿಂದ ಕೋಪಗೊಂಡ ತಾಯಿ ವಿಜಯಲಕ್ಷ್ಮಿ ಮೊದಲು ಮಗುವಿಗೆ ಕಾಲಿನಿಂದ ಒದ್ದಿದ್ದಾಳೆ. ಇದರ ಬೆನ್ನಲ್ಲೇ ತೀವ್ರ ಆಕ್ರೋಶಗೊಂಡ ತಂದೆ ಶೇಕಪ್ಪ, ಅಳುತ್ತಿದ್ದ ಮಗುವನ್ನು ಎತ್ತಿ ನೆಲಕ್ಕೆ ಬಡಿದು ಕೊಂದಿದ್ದಾನೆ. ನೆಲಕ್ಕೆ ಬಿದ್ದ ರಭಸಕ್ಕೆ ಮಗುವಿನ ಆಂತರಿಕ ಅಂಗಾಂಗಗಳಿಗೆ ತೀವ್ರ ಪೆಟ್ಟಾಗಿ ಮಗು ಕೊನೆಯುಸಿರೆಳೆದಿದೆ.
ಅಕ್ರಮ ಸಂಬಂಧದ ಶಂಕೆ
ದಂಪತಿಗಳು ಪ್ರತಿದಿನ ಮನೆಯಲ್ಲಿ ಜಗಳವಾಡುತ್ತಿದ್ದರು ಎಂದು ನೆರೆಹೊರೆಯವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಅಲ್ಲದೆ, ತಾಯಿ ವಿಜಯಲಕ್ಷ್ಮಿ ನೆರೆಹೊರೆಯವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಮತ್ತು ಆಕೆಗೆ ತನ್ನದೇ ಮಗುವಿನ ಮೇಲೆ ಪ್ರೀತಿ ಇರಲಿಲ್ಲ ಎಂಬ ಆಘಾತಕಾರಿ ವಿಷಯವನ್ನು ಸಾಕ್ಷಿಗಳು ಬಹಿರಂಗಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಲೆ ಮೊಕದ್ದಮೆ ದಾಖಲು
ವೈದ್ಯಕೀಯ ಸಾಕ್ಷ್ಯಗಳು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ ಆವಲಹಳ್ಳಿ ಪೊಲೀಸರು ತಂದೆ ಶೇಕಪ್ಪ ಮತ್ತು ತಾಯಿ ವಿಜಯಲಕ್ಷ್ಮಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 103(1) ಮತ್ತು ಸೆಕ್ಷನ್ 3(5) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿ, ಜೈಲಿಗಟ್ಟಿದ್ದಾರೆ. ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಪ್ರಕರಣದ ಹೆಚ್ಚಿನ ತನಿಖೆ ಮುಂದುವರಿದಿದೆ.

