
ಡಿಕ್ಕಿ ರಭಸಕ್ಕೆ ನಜ್ಜುಗುಜ್ಜಾಗಿರುವ ಬಸ್
ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಬಸ್ ಅವಘಡ; ಚಾಲಕನ ವಿಶ್ರಾಂತಿಯಿಲ್ಲದ ಕರ್ತವ್ಯವೇ ಕಾರಣ; ಆರೋಪ
ಕೇರಳದಿಂದ ಬೆಂಗಳೂರಿನತ್ತ ಸಾಗುತ್ತಿದ್ದ 'ಪಿ.ಕೆ. ಟ್ರಾವೆಲ್ಸ್' ಬಸ್ ಚಾಲಕನ ನಿಯಂತ್ರಣ ತಪ್ಪಿ ಪುಟ್ಟಪ್ಪನದೊಡ್ಡಿ ಬಳಿ ಈ ಅವಘಡ ಸಂಭವಿಸಿದ್ದು, ಡಿಕ್ಕಿ ರಭಸಕ್ಕೆ ಬಸ್ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.
ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಸಾವಿನ ಸರಣಿ ಮುಂದುವರಿದಿದ್ದು, ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಅಮಾಯಕ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಯುಗಾದಿ, ರಂಜಾನ್ ಹಾಗೂ ವಾರಾಂತ್ಯದ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ವಿಪರೀತವಾಗಿದ್ದ ಕಾರಣ, ಖಾಸಗಿ ಬಸ್ ಚಾಲಕ ಸತತವಾಗಿ ನಿದ್ದೆಗೆಟ್ಟು ಬಸ್ ಚಾಲನೆ ಮಾಡಿದ್ದೇ ಈ ದುರಂತಕ್ಕೆ ಪ್ರಮುಖ ಕಾರಣ ಎಂದು ಬಲ್ಲ ಮೂಲಗಳು ತಿಳಿಸಿವೆ.
ಚನ್ನಪಟ್ಟಣದ ಸಂಕಲಗೆರೆಯ ಪುಟ್ಟಪ್ಪನದೊಡ್ಡಿ ಸಮೀಪ 'ಪಿ.ಕೆ. ಟ್ರಾವೆಲ್ಸ್' ಬಸ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಗಾಢ ನಿದ್ದೆಯಲ್ಲಿದ್ದ ಪ್ರಯಾಣಿಕರು ದುರಂತ ಅಂತ್ಯ ಕಂಡಿದ್ದಾರೆ.
ಚಾಲಕನ ಮೇಲಿನ ತೀವ್ರ ಒತ್ತಡ
ಖಾಸಗಿ ಬಸ್ ಮಾಲೀಕರ ಲಾಭದಾಸೆಗೆ ಮತ್ತು ಅವೈಜ್ಞಾನಿಕ ನಿರ್ವಹಣೆಗೆ ಚಾಲಕರು ಹಾಗೂ ಪ್ರಯಾಣಿಕರು ಬಲಿಯಾಗುತ್ತಿದ್ದಾರೆ ಎಂಬ ಆಕ್ರೋಶ ಈಗ ವ್ಯಾಪಕವಾಗಿ ವ್ಯಕ್ತವಾಗಿದೆ. ಸಾಲು ಸಾಲು ರಜೆಗಳ ಕಾರಣದಿಂದಾಗಿ ಪ್ರಯಾಣಿಕರ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಇದನ್ನೇ ಬಂಡವಾಳವಾಗಿಸಿಕೊಂಡಿರುವ ಟ್ರಾವೆಲ್ಸ್ ಸಂಸ್ಥೆಗಳು ಚಾಲಕರಿಗೆ ಕನಿಷ್ಠ ವಿಶ್ರಾಂತಿಯನ್ನೂ ನೀಡದೆ ಸತತವಾಗಿ ಚಾಲನೆ ಮಾಡಲು ತೀವ್ರ ಒತ್ತಡ ಹೇರುತ್ತಿವೆ. ಈ ಅಪಘಾತಕ್ಕೀಡಾದ ಬಸ್ ಚಾಲಕ ಕೂಡ ಕಳೆದ ಹಲವು ದಿನಗಳಿಂದ ನಿದ್ದೆಯಿಲ್ಲದೆ, ಸತತವಾಗಿ ಪಾಳಿಗಳಲ್ಲಿ ವಾಹನ ಚಲಾಯಿಸುತ್ತಿದ್ದ ಎಂಬ ಆಘಾತಕಾರಿ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
ಬಹುತೇಕ ಖಾಸಗಿ ಬಸ್‌ಗಳಲ್ಲಿ ಬದಲಿ ಚಾಲಕರಿಗಾಗಲೀ ಅಥವಾ ಪಾಳಿಯ ನಡುವೆ ಚಾಲಕರು ನಿದ್ದೆ ಮಾಡಲು ಕನಿಷ್ಠ ವಿಶ್ರಾಂತಿ ಸೌಲಭ್ಯಗಳಾಗಲೀ ಇರುವುದಿಲ್ಲ. ಕೇವಲ ಹಣದಾಸೆಗಾಗಿ ಚಾಲಕರನ್ನು ಯಂತ್ರಗಳಂತೆ ದುಡಿಸಿಕೊಳ್ಳುತ್ತಿರುವುದು ಇಂತಹ ಮಾರಣಾಂತಿಕ ಅಪಘಾತಗಳಿಗೆ ಮುನ್ನುಡಿ ಬರೆಯುತ್ತಿದೆ ಎಂದು ದುರಂತದಿಂದ ಪಾರಾದವರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿದ್ದೆಯಲ್ಲಿದ್ದಾಗಲೇ ಒದಗಿದ ಸಾವು
ಕೇರಳದಿಂದ ಬೆಂಗಳೂರಿನತ್ತ ಸಾಗುತ್ತಿದ್ದ ಈ ಬಸ್‌ನಲ್ಲಿ ಮುಂಜಾನೆಯ ಚಳಿಯ ಹೊತ್ತಿಗೆ ಎಲ್ಲರೂ ಗಾಢ ನಿದ್ದೆಯಲ್ಲಿದ್ದರು. ದೂರದ ಪ್ರಯಾಣದ ಆಯಾಸ ಹಾಗೂ ಸತತ ಚಾಲನೆಯಿಂದ ಸಂಪೂರ್ಣವಾಗಿ ಕಂಗೆಟ್ಟಿದ್ದ ಚಾಲಕನಿಗೆ ತೀವ್ರ ನಿದ್ದೆ ಮಂಪರು ಆವರಿಸಿದೆ. ಕಣ್ಣು ಮುಚ್ಚಿದ ಒಂದೇ ಕ್ಷಣದಲ್ಲಿ ಬಸ್ ನಿಯಂತ್ರಣ ಕಳೆದುಕೊಂಡು ಅತ್ಯಂತ ವೇಗವಾಗಿ ರಸ್ತೆ ವಿಭಜಕಕ್ಕೆ ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗ ನಜ್ಜುಗುಜ್ಜಾಗಿದ್ದು, ಕೇರಳದ ಕೋಯಿಕ್ಕೋಡ್‌ನ (ಕಾಜಿಕೋಟೆ) ಮೊಹಮ್ಮದ್ ಫರಾನ್ (22), ಸುಲ್ಫಿ (45), ಬೆಂಗಳೂರಿನ ಕಲಾಸಿಪಾಳ್ಯದ ರಶೀದ್ (45) ಮತ್ತು ಆಡುಗೋಡಿಯ ಸಾಕೇರ್ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿರುವ ಅಬ್ದುಲ್ ಮತ್ತು ಅಲೇನ್ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಚನ್ನಪಟ್ಟಣ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಎರಡು ವರ್ಷಗಳಲ್ಲಿ ಹೆದ್ದಾರಿಯಲ್ಲಿ 1,670ಕ್ಕೂ ಹೆಚ್ಚು ಅಪಘಾತ
ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾದಾಗಿನಿಂದ ಸಾವಿನ ಹೆದ್ದಾರಿಯಾಗಿ ಮಾರ್ಪಡುತ್ತಿದೆ. ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, 2023 ರಿಂದ 2025 ರವರೆಗಿನ ಅವಧಿಯಲ್ಲಿ ಈ ಹೆದ್ದಾರಿಯಲ್ಲಿ ಒಟ್ಟು 1,674 ಅಪಘಾತಗಳು ವರದಿಯಾಗಿವೆ. ಇದರಲ್ಲಿ ಬರೋಬ್ಬರಿ 215 ಪ್ರಯಾಣಿಕರು ಮೃತಪಟ್ಟಿದ್ದು, 311 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರು-ನಿಡಘಟ್ಟ ಮಾರ್ಗದ ಮೊದಲ ಪ್ಯಾಕೇಜ್‌ನಲ್ಲಿ 865 ಅಪಘಾತಗಳು ಸಂಭವಿಸಿ 76 ಸಾವುಗಳು ಹಾಗೂ 184 ಮಂದಿಗೆ ಗಂಭೀರ ಗಾಯಗಳಾಗಿವೆ. ಇನ್ನು, ನಿಡಘಟ್ಟ-ಮೈಸೂರು ಮಾರ್ಗದ ಎರಡನೇ ಪ್ಯಾಕೇಜ್‌ನಲ್ಲಿ 809 ಅಪಘಾತಗಳು ದಾಖಲಾಗಿದ್ದು, ಇದರಲ್ಲಿ 139 ಜನರು ಪ್ರಾಣ ಕಳೆದುಕೊಂಡು 126 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರು-ನಿಡಘಟ್ಟ ಮಾರ್ಗದಲ್ಲಿ ಅಪಘಾತಗಳು ಮತ್ತು ಸಾವುಗಳು ವರ್ಷದಿಂದ ವರ್ಷಕ್ಕೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದರೂ, ನಿಡಘಟ್ಟ-ಮೈಸೂರು ಮಾರ್ಗದಲ್ಲಿ ಅಪಘಾತಗಳ ಸಂಖ್ಯೆ ಏರಿಕೆಯಾಗುತ್ತಲೇ ಇರುವುದು ಆತಂಕದ ವಿಷಯವಾಗಿದೆ.
ಲಕ್ಷಾಂತರ ಪ್ರಕರಣ ದಾಖಲಾದರೂ ನಿಯಂತ್ರಣಕ್ಕೆ ಬಾರದ ವೇಗ
ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅಪಘಾತಗಳನ್ನು ನಿಯಂತ್ರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ವಾಹನಗಳ ಗರಿಷ್ಠ ವೇಗದ ಮಿತಿಯನ್ನು ಗಂಟೆಗೆ 100 ಕಿಲೋಮೀಟರ್‌ಗೆ ಇಳಿಸಿದೆ. ವೇಗವನ್ನು ಮೇಲ್ವಿಚಾರಣೆ ಮಾಡಲು ಮತ್ತು ದಂಡ ವಿಧಿಸಲು ಹೆದ್ದಾರಿಯುದ್ದಕ್ಕೂ ವಿವಿಧ ಸ್ಥಳಗಳಲ್ಲಿ ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇಷ್ಟೆಲ್ಲಾ ಕ್ರಮಗಳ ಹೊರತಾಗಿಯೂ ಅಪಘಾತಗಳ ಸಂಖ್ಯೆಯಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ. ಕಳೆದೆರಡು ವರ್ಷಗಳಲ್ಲಿ ಸಂಚಾರ ನಿಯಮ ಉಲ್ಲಂಘನೆಗಾಗಿ ಒಟ್ಟು 13,41,9409 ಪ್ರಕರಣಗಳು ದಾಖಲಾಗಿವೆ. ನಿಯಮ ಉಲ್ಲಂಘಿಸಿದವರಿಂದ ಬರೋಬ್ಬರಿ ೮೫.೮ ಕೋಟಿ ರೂಪಾಯಿಗಳ ಬೃಹತ್ ಮೊತ್ತದ ದಂಡವನ್ನು ಸಂಗ್ರಹಿಸಬೇಕಾಗಿದೆ. ಕೇವಲ ದಂಡ ವಿಧಿಸುವುದರಿಂದ ಅಪಘಾತ ತಡೆಯಲಾಗದು, ಚಾಲಕರ ಕೆಲಸದ ಅವಧಿ ಮತ್ತು ಖಾಸಗಿ ಬಸ್‌ಗಳ ಸುರಕ್ಷತಾ ಮಾನದಂಡಗಳ ಬಗ್ಗೆ ಕಠಿಣ ನಿಯಮ ಜಾರಿಗೆ ತರಬೇಕು ಎಂಬ ಕೂಗು ಬಲವಾಗಿದೆ.

