13 people, including 9 boys, arrested for stealing mobile phones in Chinnaswamy, 75 phones seized
x

ಆರೋಪಿಗಳಿಂದ ವಶಪಡಿಸಿಕೊಂಡಿರುವ ಮೊಬೈಲ್‌ಗಳು

ಚಿನ್ನಸ್ವಾಮಿಯಲ್ಲಿ ಮೊಬೈಲ್ ಕದ್ದಿದ್ದ 9 ಬಾಲಕರು ಸೇರಿ 13 ಮಂದಿ ಅಂದರ್‌, 75 ಫೋನ್‌ ಜಪ್ತಿ

ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಮಾ. 31ರಂದು ಕಾರ್ಯಾಚರಣೆ ನಡೆಸಿ, ಪ್ರಮುಖ ಆರೋಪಿ ಹಾಗೂ ಮೂವರು ಬಾಲಕರನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಅವರಿಂದ 21 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.


Click the Play button to hear this message in audio format

ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಟಾ ಐಪಿಎಲ್ ಪಂದ್ಯಾವಳಿ ವೀಕ್ಷಿಸಲು ಬಂದಿದ್ದ ಕ್ರಿಕೆಟ್ ಅಭಿಮಾನಿಗಳ ಜೇಬಿಗೆ ಕತ್ತರಿ ಹಾಕುತ್ತಿದ್ದ ಬೃಹತ್ ಜಾಲವೊಂದನ್ನು ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಭೇದಿಸಿದ್ದಾರೆ.

ಈ ಭರ್ಜರಿ ಕಾರ್ಯಾಚರಣೆಯಲ್ಲಿ 9 ಮಂದಿ ಬಾಲಾಪರಾಧಿಗಳು (ಕಾನೂನು ಸಂಘರ್ಷಕ್ಕೊಳಗಾದ ಬಾಲಕರು) ಸೇರಿದಂತೆ ಒಟ್ಟು 13 ಜನರನ್ನು ಬಂಧಿಸಲಾಗಿದ್ದು, ಬರೋಬ್ಬರಿ 75 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.

ಮಾರ್ಚ್ 28 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡಗಳ ನಡುವೆ ಹೈ-ವೋಲ್ಟೇಜ್ ಪಂದ್ಯಾವಳಿ ಆಯೋಜನೆಗೊಂಡಿತ್ತು. ಈ ವೇಳೆ ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಸೇರಿದ್ದ ಭಾರಿ ಜನಜಂಗುಳಿಯ ಲಾಭ ಪಡೆದಿದ್ದ ಕಳ್ಳರ ಗುಂಪು, ಪ್ರೇಕ್ಷಕರ ಮೊಬೈಲ್ ಫೋನ್‌ಗಳನ್ನು ಎಗರಿಸಿತ್ತು. ಈ ಬಗ್ಗೆ ಸಾರ್ವಜನಿಕರು ನೀಡಿದ ದೂರುಗಳ ಬೆನ್ನತ್ತಿದ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಬಲೆಗೆ ಬಿದ್ದಿದ್ದು ಹೇಗೆ?

ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಮಾ. 31ರಂದು ಕಾರ್ಯಾಚರಣೆ ನಡೆಸಿ, ಪ್ರಮುಖ ಆರೋಪಿ ಹಾಗೂ ಮೂವರು ಬಾಲಕರನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಅವರಿಂದ 21 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಂಧಿತ ಬಾಲಕರನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಿ, ಬಳಿಕ ಸರ್ಕಾರಿ ಬಾಲ ಮಂದಿರಕ್ಕೆ (ಪರಿವೀಕ್ಷಣಾಲಯ) ಕಳುಹಿಸಲಾಗಿತ್ತು. ಪ್ರಮುಖ ಆರೋಪಿಯನ್ನು ಕಸ್ಟಡಿಗೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಈ ಕಳ್ಳತನದ ಬೃಹತ್ ಜಾಲ ಬಯಲಾಗಿದೆ.

ಬಂಧಿತ ಆರೋಪಿ ನೀಡಿದ ಮಾಹಿತಿಯ ಮೇರೆಗೆ ತನಿಖೆ ಚುರುಕುಗೊಳಿಸಿದ ಪೊಲೀಸರು, ಏಪ್ರಿಲ್ 2ರಂದು ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೂ ಆರು ಜನ ಬಾಲಕರನ್ನು ವಶಕ್ಕೆ ಪಡೆದು ಬಾಲ ಮಂದಿರಕ್ಕೆ ರವಾನಿಸಿದ್ದಾರೆ. ಬಳಿಕ, ಏಪ್ರಿಲ್ 3ರಂದು ಪೊಲೀಸ್ ವಶದಲ್ಲಿದ್ದ ನಾಲ್ವರು ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ, ಕಳ್ಳತನದ ಸಂಪೂರ್ಣ ಮಾಹಿತಿ ಹೊರಬಿದ್ದಿದೆ. ಪ್ರೇಕ್ಷಕರಿಂದ ಕಿತ್ತುಕೊಂಡಿದ್ದ ವಿವಿಧ ಕಂಪನಿಯ 70 ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 5 ಫೋನ್‌ಗಳು ಸೇರಿದಂತೆ ಒಟ್ಟು 75 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಸ್ತುತ ಮೂವರು ಆರೋಪಿಗಳನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ.

Read More
Next Story