
ಸೈಬರ್ ವಂಚನೆಗೆ ಸಂಬಂಧಿಸಿದಂತೆ 14,885 ಪ್ರಕರಣಗಳು ದಾಖಲಾಗಿವೆ
ವಾಹನ ಚಾಲಕರೇ ಟಾರ್ಗೆಟ್: 16 ಲಕ್ಷ ರೂ. ಮೌಲ್ಯದ 64 ಕದ್ದ ಮೊಬೈಲ್‌ಗಳೊಂದಿಗೆ ಖತರ್ನಾಕ್ ಕಳ್ಳ ಅಂದರ್!
ಈ ಕಾರ್ಯಾಚರಣೆಯಲ್ಲಿ ಆರೋಪಿಯಿಂದ ಬರೋಬ್ಬರಿ 16 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 64 ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಐಟಿ ಸಿಟಿ ಬೆಂಗಳೂರಿನಲ್ಲಿ ವಾಹನಗಳ ಡ್ಯಾಶ್‌ಬೋರ್ಡ್ ಒಡೆದು ಹಾಗೂ ಮಲಗಿದ್ದ ವಾಹನ ಚಾಲಕರನ್ನೇ ಗುರಿಯಾಗಿಸಿಕೊಂಡು ಮೊಬೈಲ್ ಕಳವು ಮಾಡುತ್ತಿದ್ದ ಖತರ್ನಾಕ್ ಕಳ್ಳನೊಬ್ಬನನ್ನು ಹೆಚ್.ಎ.ಎಲ್. ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಭರ್ಜರಿ ಕಾರ್ಯಾಚರಣೆಯಲ್ಲಿ ಬರೋಬ್ಬರಿ 16 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 64 ಮೊಬೈಲ್ ಫೋನ್‌ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಏನಿದು ಘಟನೆ?
ಬನಶಂಕರಿ 2ನೇ ಹಂತದ ನಿವಾಸಿಯೊಬ್ಬರು ಮಾ. 12ರಂದು ಹೆಚ್.ಎ.ಎಲ್. ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ದೂರುದಾರರು ಅಂದು ಬೆಳಗ್ಗೆ ಹೆಚ್.ಎ.ಎಲ್. ಫೌಂಡ್ರಿ ಮತ್ತು ಫೋರ್ಜ್ ಡಿವಿಜನ್‌ನ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ಆಟೋವನ್ನು ನಿಲ್ಲಿಸಿ, ಅದರ ಡ್ಯಾಶ್‌ಬೋರ್ಡ್‌ನಲ್ಲಿ ಮೊಬೈಲ್ ಇಟ್ಟು ಕ್ಯಾಂಟೀನ್‌ನಲ್ಲಿ ಅಡುಗೆ ಕೆಲಸಕ್ಕೆ ತೆರಳಿದ್ದರು. ಆದರೆ ಸಂಜೆ ಕೆಲಸ ಮುಗಿಸಿ ಬಂದು ನೋಡಿದಾಗ, ಅಪರಿಚಿತರು ಆಟೋದ ಡ್ಯಾಶ್‌ಬೋರ್ಡ್ ಮುರಿದು ಮೊಬೈಲ್ ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿತ್ತು.
ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದರು. ಖಚಿತ ಮಾಹಿತಿಯ ಮೇರೆಗೆ ಮಾರ್ಚ್ 22ರಂದು ಹೆಚ್.ಎ.ಎಲ್. ಫೌಂಡ್ರಿ ಮತ್ತು ಫೋರ್ಜ್ ಡಿವಿಜನ್‌ನ ಪಾರ್ಕಿಂಗ್ ಬಳಿಯೇ ಶಂಕಿತ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಯಿತು. ಆತನನ್ನು ವಿಚಾರಣೆಗೊಳಪಡಿಸಿದಾಗ, ತಾನೇ ಆ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆತನನ್ನು ಬಂಧಿಸಿದ ಸಂದರ್ಭದಲ್ಲಿ ಆತನ ಬಳಿಯಿದ್ದ 14 ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಯಿತು.
ಫೋನ್ ಸ್ನ್ಯಾಚಿಂಗ್ ದಂಧೆ
ಆರೋಪಿಯ ತೀವ್ರ ವಿಚಾರಣೆ ವೇಳೆ ಆತನ ಕಳ್ಳತನದ ಜಾಲದ ಬಗ್ಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈತ ಕೇವಲ ಡ್ಯಾಶ್‌ಬೋರ್ಡ್ ಒಡೆಯುವುದಷ್ಟೇ ಅಲ್ಲದೆ, ಬೆಂಗಳೂರು ನಗರದಾದ್ಯಂತ ರಸ್ತೆಬದಿ ನಡೆದುಕೊಂಡು ಹೋಗುವವರ ಮೊಬೈಲ್ ಕಸಿದುಕೊಳ್ಳುತ್ತಿದ್ದನು (ಸ್ನ್ಯಾಚಿಂಗ್). ಹೆದ್ದಾರಿಗಳಲ್ಲಿ ಲಾರಿ ನಿಲ್ಲಿಸಿ ಮಲಗುವ ಚಾಲಕರು ಹಾಗೂ ಆಟೋ, ಕ್ಯಾಬ್‌ಗಳಲ್ಲಿ ಮಲಗುವ ಡ್ರೈವರ್‌ಗಳೇ ಈತನ ಪ್ರಮುಖ ಟಾರ್ಗೆಟ್ ಆಗಿದ್ದರು.
ಹೀಗೆ ಕದ್ದ ಮೊಬೈಲ್‌ಗಳನ್ನು ಮುರುಗೇಶಪಾಳ್ಯದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ತನ್ನ ಪರಿಚಯಸ್ಥನೊಬ್ಬನ ರೂಮಿನಲ್ಲಿ ಬಚ್ಚಿಟ್ಟಿರುವುದಾಗಿ ಆತ ಬಾಯ್ಬಿಟ್ಟಿದ್ದಾನೆ. ಆತನ ಮಾಹಿತಿಯ ಮೇರೆಗೆ ಮಾ. 23ರಂದು ಅಲ್ಲಿಗೆ ತೆರಳಿದ ಪೊಲೀಸರು, ಬಚ್ಚಿಟ್ಟಿದ್ದ 50 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ವಶಪಡಿಸಿಕೊಂಡಿರುವ 64 ಮೊಬೈಲ್‌ಗಳ ನೈಜ ವಾರಸುದಾರರನ್ನು ಪತ್ತೆಹಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈಟ್‌ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತ ಸೈದುಲು ಅಡಾವತ್ ಅವರ ಮಾರ್ಗದರ್ಶನದಲ್ಲಿ ಹಾಗೂ ಮಾರತ್ತಹಳ್ಳಿ ಉಪವಿಭಾಗದ ಎಸಿಪಿ ಸುಧಾಕರ್ ಎ.ಬಿ. ಅವರ ನೇತೃತ್ವದಲ್ಲಿ, ಹೆಚ್.ಎ.ಎಲ್. ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಜರುದ್ದೀನ್ ಮತ್ತು ಸಿಬ್ಬಂದಿ ವರ್ಗ ಈ ಯಶಸ್ವಿ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಭೇದಿಸಿದ್ದಾರೆ.

