ಬೆಂಗಳೂರಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಗ್ಯಾರೇಜ್‌ನಲ್ಲಿ ಅಗ್ನಿ ಅವಘಡ; ಬಿಎಂಡಬ್ಲ್ಯೂ ಸೇರಿ ಹಲವು ಐಷಾರಾಮಿ ಕಾರುಗಳು ಭಸ್ಮ
x

ಭಾನುವಾರ ರಾತ್ರಿ ಸುಮಾರು 9 ಗಂಟೆಯ ಹೊತ್ತಿಗೆ ಗ್ಯಾರೇಜ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. 

ಬೆಂಗಳೂರಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಗ್ಯಾರೇಜ್‌ನಲ್ಲಿ ಅಗ್ನಿ ಅವಘಡ; ಬಿಎಂಡಬ್ಲ್ಯೂ ಸೇರಿ ಹಲವು ಐಷಾರಾಮಿ ಕಾರುಗಳು ಭಸ್ಮ

ಇತ್ತೀಚೆಗೆ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರಣಿ ಬೆಂಕಿ ಅವಘಡಗಳು ವರದಿಯಾಗುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮನೆಮಾಡಿದೆ.


Click the Play button to hear this message in audio format

ನಗರದ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರು ಗ್ಯಾರೇಜ್‌ವೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಬಿಎಂಡಬ್ಲ್ಯೂ (BMW) ಸೇರಿದಂತೆ ನಾಲ್ಕೈದು ಐಷಾರಾಮಿ ಕಾರುಗಳು ಸುಟ್ಟು ಕರಕಲಾಗಿವೆ. ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಭಾನುವಾರ ರಾತ್ರಿ ಸುಮಾರು 9 ಗಂಟೆಯ ಹೊತ್ತಿಗೆ ಗ್ಯಾರೇಜ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಎರಡು ವಾಹನಗಳ ಕಾರ್ಯಾಚರಣೆಯ ಮೂಲಕ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರುಗಳು ಸುಟ್ಟು ಭಾರಿ ಪ್ರಮಾಣದ ಆಸ್ತಿ ನಷ್ಟವಾಗಿದ್ದರೂ, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬೆಂಗಳೂರಿನಲ್ಲಿ ಸರಣಿ ಬೆಂಕಿ ಅವಘಡಗಳು

ಇತ್ತೀಚೆಗೆ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರಣಿ ಬೆಂಕಿ ಅವಘಡಗಳು ವರದಿಯಾಗುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮನೆಮಾಡಿದೆ. ಕಳೆದ ಕೆಲವು ವಾರಗಳ ಅಂತರದಲ್ಲಿ ಹಲವಾರು ಪ್ರಮುಖ ಅಗ್ನಿ ದುರಂತಗಳು ಸಂಭವಿಸಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದೆ.

ಏಪ್ರಿಲ್ ತಿಂಗಳಿನಲ್ಲಿ ನೆಲಮಂಗಲದ ಬಳಿಯಿರುವ ಜಿಯೋ ಮಾರ್ಟ್ ಗೋದಾಮಿನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿಕೊಂಡಿರಬಹುದಾದ ಈ ಬೆಂಕಿಯಿಂದಾಗಿ ಒಂದೂವರೆ ಎಕರೆ ವಿಸ್ತೀರ್ಣದ ಕಟ್ಟಡ ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಅಗ್ನಿಶಾಮಕ ದಳದ 10ಕ್ಕೂ ಹೆಚ್ಚು ವಾಹನಗಳು ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ.

ರಾಜಾಜಿನಗರದ ಲುಲು ಮಾಲ್ ಬಳಿ ಮೆಜೆಸ್ಟಿಕ್‌ನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್ ದಿಢೀರನೆ ಬೆಂಕಿಗಾಹುತಿಯಾಗಿದೆ. ಅದೃಷ್ಟವಶಾತ್, ಬಸ್ಸಿನಲ್ಲಿದ್ದ 21 ಪ್ರಯಾಣಿಕರು ಮತ್ತು ಸಿಬ್ಬಂದಿ ಸಮಯಪ್ರಜ್ಞೆಯಿಂದ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ಜೆ.ಸಿ. ರಸ್ತೆಯಲ್ಲಿರುವ ಮೂರಂತಸ್ತಿನ ಟೈಲ್ಸ್ ಮಳಿಗೆಯಲ್ಲಿ ಸಂಭವಿಸಿದ ಅಗ್ನಿ ಅನಾಹುತದಿಂದ ಇಡೀ ಮಳಿಗೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಡಿ.ಜೆ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಿಡಿಗೇಡಿಯೊಬ್ಬ ರಸ್ತೆ ಬದಿಯ ಕಸಕ್ಕೆ ಹಚ್ಚಿದ ಬೆಂಕಿ ಪಕ್ಕದ ದನದ ಕೊಟ್ಟಿಗೆಗೆ ಆವರಿಸಿದೆ. ಪರಿಣಾಮವಾಗಿ ಆರು ಹಸುಗಳು ಸಜೀವ ದಹನವಾಗಿವೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬೇಸಿಗೆಯ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿರುವ ಈ ಸಂದರ್ಭದಲ್ಲಿ, ಬೆಂಕಿ ಅನಾಹುತಗಳು ಹೆಚ್ಚಾಗುತ್ತಿವೆ. ವಾಣಿಜ್ಯ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅಗ್ನಿಶಾಮಕ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

Read More
Next Story