
ಬೆಂಗಳೂರಿನಿಂದ ಪ್ರವಾಸಕ್ಕೆಂದು ಕರಾವಳಿಗೆ ಬಂದಿದ್ದ ಈ ಕುಟುಂಬವು, ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳು ಹಾಗೂ ದೇವಾಲಯಗಳಿಗೆ ಭೇಟಿ ನೀಡಿತ್ತು.
ಕರಾವಳಿ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಕುಟುಂಬದ ಕಾರು ಅಪಘಾತ: ತಾಯಿ, ಮಗಳು ದುರ್ಮರಣ
ಬೈಂದೂರಿನ ನಾವುಂದದಲ್ಲಿ ಭೀಕರ ರಸ್ತೆ ಅಪಘಾತ: ಬೆಂಗಳೂರು ಮೂಲದ ತಾಯಿ-ಮಗಳು ಸಾವು, ನಾಲ್ವರ ಸ್ಥಿತಿ ಗಂಭೀರ. ಕಂಟೈನರ್ ಲಾರಿಗೆ ಕಾರು ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದ ಸಮೀಪ ಭಾನುವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೆಂಗಳೂರಿನಿಂದ ಕರಾವಳಿ ಪ್ರವಾಸಕ್ಕೆ ಬಂದಿದ್ದ ಒಂದೇ ಕುಟುಂಬದ ಇಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ರಸ್ತೆ ಬದಿ ನಿಂತಿದ್ದ ಕಂಟೈನರ್ ಲಾರಿಗೆ ಇವರು ಪ್ರಯಾಣಿಸುತ್ತಿದ್ದ ಕಾರು ಅಪ್ಪಳಿಸಿದ ಪರಿಣಾಮ ಈ ದುರಂತ ಸಂಭವಿಸಿದ್ದು, ಕಾರಿನಲ್ಲಿದ್ದ ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರು ಮೂಲದ ಮಮತಾ (36) ಹಾಗೂ ಅವರ ಪುತ್ರಿ ಧೃತಿಕಾ (14) ಅಪಘಾತದ ತೀವ್ರತೆಗೆ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಮಮತಾ ಅವರ ಪತಿ ರಾಘು (40), ಮಕ್ಕಳಾದ ಜಾಹ್ನವಿ (12), ಚಾರ್ವಿ (10) ಹಾಗೂ ಕಾರು ಚಾಲಕ ಕಿರಣ್ ಸ್ಥಿತಿ ಚಿಂತಾಜನಕವಾಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು, ಸ್ಥಳೀಯರ ನೆರವಿನೊಂದಿಗೆ ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸುವ ಕಾರ್ಯ ಮಾಡಲಾಯಿತು.
ದೇವರ ದರ್ಶನಕ್ಕೆ ಹೊರಟಿದ್ದಾಗ ದುರಂತ
ಬೆಂಗಳೂರಿನಿಂದ ಪ್ರವಾಸಕ್ಕೆಂದು ಕರಾವಳಿಗೆ ಬಂದಿದ್ದ ಈ ಕುಟುಂಬವು, ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳು ಹಾಗೂ ದೇವಾಲಯಗಳಿಗೆ ಭೇಟಿ ನೀಡಿತ್ತು. ಬಳಿಕ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಹಾಗೂ ಗೋಕರ್ಣ ಕ್ಷೇತ್ರಗಳ ದೇವರ ದರ್ಶನ ಪಡೆಯುವ ಉದ್ದೇಶದಿಂದ ಬೈಂದೂರು ಮಾರ್ಗವಾಗಿ ಪ್ರಯಾಣ ಬೆಳೆಸುತ್ತಿದ್ದರು. ಭಾನುವಾರ ಮುಂಜಾನೆಯ ವೇಳೆ ನಾವುಂದದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ನೇರವಾಗಿ ಕಂಟೈನರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಗಾಯಾಳುಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ತಂದೆ ರಾಘು ಹಾಗೂ ಇಬ್ಬರು ಮಕ್ಕಳಾದ ಜಾಹ್ನವಿ ಮತ್ತು ಚಾರ್ವಿ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಚಾಲಕ ಕಿರಣ್ ಅವರ ಸ್ಥಿತಿ ತೀರಾ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

