
ನಕಲಿ 'ಕ್ವಿಕ್ ಬುಕ್' ಹೆಸರಲ್ಲಿ ಕೋಟಿ ಕೋಟಿ ಲೂಟಿ: ಬೆಂಗಳೂರಿನ 4 ಕಡೆ ಸೈಬರ್ ಕಮಾಂಡ್ ದಾಳಿ
ನಕಲಿ ಲೆಕ್ಕಪತ್ರ ಸಂಸ್ಥೆಯ ಹೆಸರಿನಲ್ಲಿ ಕೋಟ್ಯಂತರ ರೂ. ವಂಚಿಸುತ್ತಿದ್ದ ಅಂತಾರಾಜ್ಯ ಸೈಬರ್ ವಂಚಕರ ಜಾಲವನ್ನು ರಾಜ್ಯ ಸೈಬರ್ ಕಮಾಂಡ್ ಬೇಧಿಸಿದೆ. 44 ಎಸ್‌ಎಸ್‌ಡಿ, ಫೋನ್‌ಗಳನ್ನು ಜಪ್ತಿಮಾಡಲಾಗಿದೆ.
ಅಮೆರಿಕದ ನಾಗರಿಕರನ್ನು ಗುರಿಯಾಗಿಸಿಕೊಂಡು, ನಕಲಿ ಲೆಕ್ಕಪತ್ರ ಸಂಸ್ಥೆಯ ಹೆಸರಿನಲ್ಲಿ ಕೋಟ್ಯಂತರ ರೂ. ವಂಚಿಸುತ್ತಿದ್ದ ಅಂತಾರಾಜ್ಯ ಸೈಬರ್ ವಂಚಕರ ಜಾಲವನ್ನು ರಾಜ್ಯ ಸೈಬರ್ ಕಮಾಂಡ್ ಬೇಧಿಸಿದೆ. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ನಕಲಿ ಕಾಲ್ ಸೆಂಟರ್‌ಗಳ ಮೇಲೆ ಅಧಿಕಾರಿಗಳು ನಡೆಸಿದ ದಾಳಿಯು, ಜಾಗತಿಕ ಮಟ್ಟದಲ್ಲಿ ಸೈಬರ್ ಅಪರಾಧಗಳ ತಾಣವಾಗಿ ಬದಲಾಗುತ್ತಿರುವ ನಗರದ ಚಟುವಟಿಕೆಗಳಿಗೆ ದೊಡ್ಡ ಹೊಡೆತ ನೀಡಿದೆ.
ವಂಚಕರು ಅಮೆರಿಕದ ಅತ್ಯಂತ ಜನಪ್ರಿಯ ಲೆಕ್ಕಪತ್ರ ತಂತ್ರಾಂಶವಾದ ಕ್ವಿಕ್ ಬುಕ್ ಎಂಬ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರು. ತಾವು ಆ ಸಂಸ್ಥೆಯ ಅಧಿಕೃತ ಪ್ರತಿನಿಧಿಗಳೆಂದು ನಂಬಿಸಿ, ಅಮೆರಿಕದ ಮುಗ್ಧ ನಾಗರಿಕರಿಗೆ ಕರೆ ಮಾಡುತ್ತಿದ್ದರು. ಈ ಕಾಲ್ ಸೆಂಟರ್‌ಗಳ ಮುಖ್ಯ ಉದ್ದೇಶವೇ ವಂಚನೆಯಾಗಿತ್ತು.
ವಂಚಕರು ಅಮೆರಿಕದ ಜನರಿಗೆ ತೆರಿಗೆ ಪಾವತಿಯಲ್ಲಿ ಗೊಂದಲವಿದೆ ಎಂದು ಭಯ ಹುಟ್ಟಿಸುತ್ತಿದ್ದರು. ತಂತ್ರಾಂಶದ ಲೈಸೆನ್ಸ್ ಅವಧಿ ಮುಗಿದಿದೆ, ತಕ್ಷಣ ನವೀಕರಿಸದಿದ್ದರೆ ನಿಮ್ಮ ಅಕೌಂಟ್ ಬ್ಲಾಕ್ ಆಗುತ್ತದೆ ಎಂದು ಬೆದರಿಸುವುದು. ನಕಲಿ ಸಾಫ್ಟ್‌ವೇರ್ ಕೀಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುವುದು ಮತ್ತು ಅಮೆರಿಕದ ಸರ್ಕಾರಿ ಅಧಿಕಾರಿಗಳ ಹೆಸರನ್ನು ಹೋಲುವ ನಕಲಿ ಹೆಸರುಗಳನ್ನು ಬಳಸಿಕೊಂಡು ವಂಚಿತರಿಂದ ಹಣ ದೋಚುವುದು ಉದ್ದೇಶವಾಗಿದೆ. ಈ ವಂಚಕರು ನಡೆಸುತ್ತಿದ್ದ ಚಟುವಟಿಕೆಗಳು ಎಷ್ಟೊಂದು ವ್ಯವಸ್ಥಿತವಾಗಿದ್ದವು ಎಂದರೆ, ಅವರಿಗೆ ಅಮೆರಿಕದ ಜನರ ಸಂಪರ್ಕ ಮಾಹಿತಿ ಮತ್ತು ಅವರ ವ್ಯವಹಾರಗಳ ವಿವರಗಳು ಕರಗತವಾಗಿದ್ದವು. ಈ ಸೇವೆಗಳಿಗೆ ಅವರು ವಸೂಲಿ ಮಾಡುತ್ತಿದ್ದ ಶುಲ್ಕವು ಅಮೆರಿಕದ ನಾಗರಿಕರನ್ನು ಆಶ್ಚರ್ಯಗೊಳಿಸುವಂತಿತ್ತು.
ಸೈಬರ್ ಕಮಾಂಡ್‌ನ ದಿಟ್ಟ ಕಾರ್ಯಾಚರಣೆ
ಕರ್ನಾಟಕ ರಾಜ್ಯ ಸೈಬರ್ ಕಮಾಂಡ್ ಮತ್ತು ಸೈಬರ್ ಕ್ರೈಂ ಪೊಲೀಸ್ ಇಲಾಖೆಯು ಕಳೆದ ಕೆಲವು ದಿನಗಳಿಂದ ಈ ವಂಚಕರ ಮೇಲೆ ತೀವ್ರ ನಿಗಾ ಇರಿಸಿತ್ತು. ನಿರ್ದಿಷ್ಟ ಮಾಹಿತಿಯನ್ನು ಕಲೆಹಾಕಿದ ನಂತರ, ಸೈಬರ್ ಕ್ರೈಂ ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತು ವಿಶೇಷ ಸೈಬರ್ ಸೆಲ್ ತಂಡಗಳು ಜಂಟಿಯಾಗಿ ಬೆಂಗಳೂರಿನ ನಾಲ್ಕು ವಿಭಿನ್ನ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದವು. ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಸಿಬ್ಬಂದಿಗಳು ವಂಚಕರು ಅಳವಡಿಸಿಕೊಂಡಿದ್ದ ತಾಂತ್ರಿಕ ಜಾಲವನ್ನು ಬಯಲು ಮಾಡಿದರು. ಕಚೇರಿಯೊಳಗೆ ದಾಳಿ ನಡೆಸಿದಾಗ ಅಲ್ಲಿನ ಗೋಡೆಗಳ ಮೇಲೆ ಅಮೆರಿಕದ ನಾಗರಿಕರೊಂದಿಗೆ ಮಾತನಾಡಲು ಬಳಸುತ್ತಿದ್ದ 'ಸ್ಕ್ರಿಪ್ಟ್ ನೋಟ್ ಪುಸ್ತಕಗಳು' ಪತ್ತೆಯಾಗಿವೆ. ವಂಚಕರು ಎಷ್ಟು ಜಾಗರೂಕರಾಗಿದ್ದರೆಂದರೆ, ಪ್ರತಿಯೊಬ್ಬ ವ್ಯಕ್ತಿಯ ಜೊತೆಗೂ ಯಾವ ರೀತಿ ಮಾತನಾಡಬೇಕು, ಯಾವ ರೀತಿ ಭಯ ಹುಟ್ಟಿಸಬೇಕು ಎಂಬುದನ್ನು ಮುಂಚಿತವಾಗಿಯೇ ಸಿದ್ಧಪಡಿಸಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ವಶಪಡಿಸಿಕೊಂಡ ಸಾಕ್ಷ್ಯಗಳು
ದಾಳಿಯಲ್ಲಿ ವಂಚನೆಗೆ ಬಳಸಲಾಗಿದ್ದ ಅತ್ಯಾಧುನಿಕ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ 44 ಎಸ್‌ಎಸ್‌ಡಿ ಜಪ್ತಿ ಮಾಡಲಾಗಿದೆ. ಇದರಲ್ಲಿ ಅಮೆರಿಕದ ಸಾವಿರಾರು ನಾಗರಿಕರ ವೈಯಕ್ತಿಕ ಮಾಹಿತಿ ಮತ್ತು ವಂಚನೆಗೆ ಬಳಸಿದ ಡೇಟಾಗಳಿವೆ. 9 ಸಿಪಿಯು ಮತ್ತು 2 ಲ್ಯಾಪ್ಟಾಪ್‌ಗಳು2 ಮೊಬೈಲ್ ಫೋನ್‌ಗಳು ಮತ್ತು ಸ್ಕ್ರಿಪ್ಟ್ ನೋಟ್ ಪುಸ್ತಕಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿಗಳ ಮಾಹಿತಿ ಹಾಗೂ ಶೆಲ್ ಕಂಪನಿಗಳ ಜಾಲ
ಬಂಧಿತರಾಗಿರುವ ಆರೋಪಿಗಳನ್ನು ದೆಹಲಿಯ ಪ್ರಶಾಂತ್ ಮತ್ತು ಉತ್ತರ ಪ್ರದೇಶದ ಆಕಾಶ್ ಎಂದು ಗುರುತಿಸಲಾಗಿದೆ. ಇವರು ಕೇವಲ ಸಣ್ಣ ವಂಚನೆಗೆ ಸೀಮಿತವಾಗಿರಲಿಲ್ಲ. ಇವರು ಸರ್ಕಲ್ ಸ್ಕ್ವಾಯರ್ ಎಲ್‌ಎಸಲ್‌ಸಿ ಎಂಬ ಹೆಸರಿನಲ್ಲಿ ಒಂದು ಕಂಪನಿಯನ್ನು ನೋಂದಾಯಿಸಿದ್ದರು. ಆದರೆ ಇದು ಕೇವಲ ಮೇಲ್ನೋಟಕ್ಕೆ ಕಾಣುವ ಸಂಸ್ಥೆಯಾಗಿದೆ. ಆದರೆ, ಇದರ ಹಿಂದೆ ಹಲವು ಶೆಲ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದವು. ಅಂದರೆ, ಒಂದು ಕಂಪನಿಯ ಹೆಸರಿನಲ್ಲಿ ವಂಚಿಸಿದ ಹಣವನ್ನು ಇನ್ನೊಂದು ಕಂಪನಿಗೆ ವರ್ಗಾಯಿಸುವ ಮೂಲಕ ಹಣದ ಮೂಲವನ್ನು ಮರೆಮಾಚುವ ಹುನ್ನಾರವನ್ನು ಇವರು ನಡೆಸಿದ್ದರು. ವಂಚನೆಯ ಹಣವು ಅಂತರರಾಷ್ಟ್ರೀಯ ಮಟ್ಟದಲ್ಲಿ ವರ್ಗಾವಣೆಯಾಗಿರುವುದರಿಂದ, ಈ ಪ್ರಕರಣವು ಕೇವಲ ಸ್ಥಳೀಯ ಸೈಬರ್ ಕ್ರೈಂಗೆ ಸೀಮಿತವಾಗಿಲ್ಲ. ವಿದೇಶಿ ಕರೆನ್ಸಿಯ ಮೂಲಕ ಹಣವನ್ನು ಹೇಗೆ ವರ್ಗಾಯಿಸಲಾಗುತ್ತಿತ್ತು ಮತ್ತು ಈ ಹಣ ಎಲ್ಲಿಗೆ ತಲುಪುತ್ತಿತ್ತು ಎಂಬುದರ ಕುರಿತು ಈಗ ಕೂಲಂಕಷ ತನಿಖೆ ನಡೆಯುತ್ತಿದೆ.
ಈ ಪ್ರಕರಣವು ಸೈಬರ್ ವಂಚನೆ ಎಷ್ಟೊಂದು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ವಂಚಕರು ವಿದೇಶದಲ್ಲಿದ್ದು, ಭಾರತದಲ್ಲಿ ಕಾಲ್ ಸೆಂಟರ್ ತೆರೆದು ಅಲ್ಲಿನ ಜನರನ್ನು ದೋಚುತ್ತಿರುವುದು ದೇಶದ ವರ್ಚಸ್ಸಿಗೂ ಧಕ್ಕೆ ತರುತ್ತಿದೆ. ಎಲ್ಲಿಂದ ಹಣ ಬಂತು ಮತ್ತು ಯಾರ ಖಾತೆಗಳಿಗೆ ವರ್ಗಾವಣೆಯಾಯಿತು ಎಂಬುದು ತನಿಖೆಯ ಮುಖ್ಯ ಹಂತವಾಗಿದೆ. ಅಮೆರಿಕದ ತನಿಖಾ ಸಂಸ್ಥೆಗಳೊಂದಿಗೆ ಮಾಹಿತಿ ಹಂಚಿಕೊಳ್ಳುವ ಅನಿವಾರ್ಯತೆ ಇದೆ. ವಶಪಡಿಸಿಕೊಂಡ ಎಸ್‌ಎಸ್‌ಡಿಗಳಲ್ಲಿರುವ ಡೇಟಾವನ್ನು ವಿಶ್ಲೇಷಿಸಿದರೆ, ಈ ಜಾಲದಲ್ಲಿ ಇನ್ನೂ ಎಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬುದು ಹೊರಬರಲಿದೆ ಎಂದು ಪೊಲೀಸರು ಹೇಳಿದ್ದಾರೆ.

