ಬೆಂಗಳೂರು| 17 ಕೋಟಿ ರೂ. ಎಂಡಿಎಂಎ ಜಪ್ತಿ, ದೆಹಲಿ ಮಹಿಳೆ ಸೇರಿ ಎಂಟು ಜನ ಬಂಧನ
x

ದೆಹಲಿ ಮಹಿಳೆ ಹಾಗೂ ಮೂವರು ಆಫ್ರಿಕನ್ ಪ್ರಜೆಗಳು ಸೇರಿದಂತೆ 8 ಡ್ರಗ್ ಪೆಡ್ಲರ್‌ಗಳ ಬಂಧನ. 

ಬೆಂಗಳೂರು| 17 ಕೋಟಿ ರೂ. ಎಂಡಿಎಂಎ ಜಪ್ತಿ, ದೆಹಲಿ ಮಹಿಳೆ ಸೇರಿ ಎಂಟು ಜನ ಬಂಧನ

ಬೆಂಗಳೂರಿನಲ್ಲಿ ಹೆಬ್ಬಾಳ ಪೊಲೀಸರ ಭಾರಿ ಕಾರ್ಯಾಚರಣೆ: ದೆಹಲಿ ಮಹಿಳೆ ಹಾಗೂ ಮೂವರು ಆಫ್ರಿಕನ್ ಪ್ರಜೆಗಳು ಸೇರಿದಂತೆ 8 ಡ್ರಗ್ ಪೆಡ್ಲರ್‌ಗಳ ಬಂಧನ, 17 ಕೋಟಿ ಮೌಲ್ಯದ 17 ಕೆಜಿ ಎಂಡಿಎಂಎ ವಶಕ್ಕೆ.


Click the Play button to hear this message in audio format

ಅಂತರರಾಷ್ಟ್ರೀಯ ಮಟ್ಟದ ಡ್ರಗ್ಸ್ ದಂಧೆ ನಡೆಸುತ್ತಿದ್ದ ಎಂಟು ಮಂದಿ ಆರೋಪಿಗಳನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದು, ಅವರಿಂದ ಬರೋಬ್ಬರಿ 17 ಕೋಟಿ ರೂಪಾಯಿ ಮೌಲ್ಯದ 17 ಕೆಜಿ ಎಂಡಿಎಂಎ ಕ್ರಿಸ್ಟಲ್ಸ್ ಮಾದರಿಯ ಡ್ರಗ್ಸ್ ಅನ್ನು ಜಪ್ತಿ ಮಾಡಿದ್ದಾರೆ. ಬಂಧಿತರಲ್ಲಿ ಮೂವರು ವಿದೇಶಿ ಪ್ರಜೆಗಳು ಹಾಗೂ ದೆಹಲಿ ಮೂಲದ ಒಬ್ಬ ಮಹಿಳೆ ಸೇರಿದ್ದಾರೆ. ದೆಹಲಿ ಜೈಲಿನಿಂದ ಕಳೆದ ವರ್ಷವಷ್ಟೇ ಬಿಡುಗಡೆಯಾಗಿದ್ದ 50 ವರ್ಷದ ರೀನಾ ಯಾದವ್ ಅಲಿಯಾಸ್ ಬಾಪಿ ಎಂಬಾಕೆ ಈ ಇಡೀ ಜಾಲದ ಮಾಸ್ಟರ್ ಮೈಂಡ್ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಾಧ ಸಂಚು ಪ್ರಕರಣವೊಂದರಲ್ಲಿ ಈಕೆ ಬರೋಬ್ಬರಿ 13 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದಳು. ಜೈಲಿನಿಂದ ಹೊರಬಂದ ಬಳಿಕ ಈಕೆ ತನ್ನ ಸಹಚರರಾದ ಧೀರಜ್ ಮತ್ತು ದೇಬಾಶಿಶ್ ಬ್ಯಾನರ್ಜಿ ಮೂಲಕ ಮಾದಕ ದ್ರವ್ಯವನ್ನು ಸಂಗ್ರಹಿಸಿ, ಸಾಗಾಟ ಮಾಡುತ್ತಿದ್ದಳು. ಬಳಿಕ ವಿದೇಶಿ ಮಹಿಳೆಯರನ್ನು ಕೊರಿಯರ್ ತರಹ ಬಳಸಿಕೊಂಡು ಬೆಂಗಳೂರಿನ ಏಜೆಂಟರಿಗೆ ಈ ಮಾದಕ ವಸ್ತುವನ್ನು ತಲುಪಿಸುತ್ತಿದ್ದಳು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ಮಾದಕ ದ್ರವ್ಯ ಮಾರಾಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ದಕ್ಷಿಣ ಕನ್ನಡ ಮೂಲದ ಮೊಹಮ್ಮದ್ ಮನ್ಸೂರ್ ಪಿ ಹಾಗೂ ಅಬ್ದುಲ್ ಸಮದ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರು ಬೆಂಗಳೂರಿನ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಇವರೊಂದಿಗೆ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದ ನೈಜೀರಿಯಾ ಮೂಲದ ಒಬಿಯಾನುಜು ರಿಟಾ, ಟಾಂಜಾನಿಯಾ ಮೂಲದ ಮಾರ್ಗರೆಟ್ ಲಿಂಗಿನಿಕೊ ಚಾಲೆ ಹಾಗೂ ಸೆನೆಗಲ್ ದೇಶದ ಡಾನ್ಫಾ ಗೆರಾಲ್ಡ್ ಎಂಬ ಮೂವರು ವಿದೇಶಿ ಪ್ರಜೆಗಳನ್ನು ಸಹ ಪೊಲೀಸರು ಜಾಲಿಯಾಡಿದ್ದಾರೆ.

ಮೇ 11 ರಂದು ಬೆಂಗಳೂರಿನ ಆನಂದನಗರದ ಉನ್ನತಿ ಲೇಔಟ್ ಅಪಾರ್ಟ್‌ಮೆಂಟ್ ಬಳಿ ಕಾರಿನಲ್ಲಿ ಮೂವರು ವ್ಯಕ್ತಿಗಳು ಎಂಡಿಎಂಎ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಹೆಬ್ಬಾಳ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ ನೇತೃತ್ವದ ಪೊಲೀಸ್ ತಂಡ ಸ್ಥಳದ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ. ಈ ಯಶಸ್ವಿ ಕಾರ್ಯಾಚರಣೆಯ ಕುರಿತು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಮಾಹಿತಿ ನೀಡಿದ್ದು, ಮಾದಕ ಮುಕ್ತ ನಗರವನ್ನಾಗಿಸಲು ಪೊಲೀಸರು ಕಟಿಬದ್ಧರಾಗಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಜಾಲದ ಇತರ ಕೊಂಡಿಗಳಿಗಾಗಿ ತನಿಖೆ ಮುಂದುವರಿದಿದೆ.

Read More
Next Story