ಬೆಂಗಳೂರು: ಶೌಚಾಲಯ ಬಳಸುವ ನೆಪದಲ್ಲಿ ಮನೆಗೆ ನುಗ್ಗಿ ಅಸಭ್ಯ ವರ್ತನೆ ತೋರಿದ ಡೆಲಿವರಿ ಏಜೆಂಟ್
x

ಬೆಂಗಳೂರು: ಶೌಚಾಲಯ ಬಳಸುವ ನೆಪದಲ್ಲಿ ಮನೆಗೆ ನುಗ್ಗಿ ಅಸಭ್ಯ ವರ್ತನೆ ತೋರಿದ ಡೆಲಿವರಿ ಏಜೆಂಟ್

ಈ ಘಟನೆಯಿಂದ ತಾನು ತೀವ್ರ ಭಯಭೀತಳಾಗಿದ್ದು, ಸ್ವಂತ ಮನೆಯಲ್ಲೇ ಅಭದ್ರತೆ ಕಾಡುತ್ತಿದೆ ಎಂದು ಮಹಿಳೆ ಸೋಶಿಯಲ್ ಮೀಡಿಯಾದ ಹೇಳಿಕೊಂಡಿದ್ದಾರೆ.


Click the Play button to hear this message in audio format

ಬೆಂಗಳೂರಿನಲ್ಲಿ ಮಹಿಳೆಯೊಬ್ಬರ ಮನೆಗೆ ಪಾರ್ಸೆಲ್ ನೀಡಲು ಬಂದಿದ್ದ ಡೆಲಿವರಿ ಏಜೆಂಟ್ ಶೌಚಾಲಯ ಬಳಸುವ ನೆಪದಲ್ಲಿ ಬಲವಂತವಾಗಿ ಮನೆಗೆ ನುಗ್ಗಿ ಅಸಭ್ಯವಾಗಿ ವರ್ತಿಸಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಸಂತ್ರಸ್ತ ಮಹಿಳೆ ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯನ್ನು ಹಂಚಿಕೊಂಡಿದ್ದು, ಆತಂಕ ವ್ಯಕ್ತಪಡಿಸಿದ್ದಾರೆ.


ಮಹಿಳೆಯ ಹೇಳಿಕೆಯ ಪ್ರಕಾರ, ಪಾರ್ಸೆಲ್ ತಲುಪಿಸಲು ಬಂದಿದ್ದ ವ್ಯಕ್ತಿ ಶೌಚಾಲಯ ಬಳಸಲು ಅವಕಾಶ ಕೇಳಿದ್ದಾನೆ. ಅಪರಿಚಿತರಿಗೆ ಮನೆಯೊಳಗೆ ಪ್ರವೇಶವಿಲ್ಲ ಎಂದು ಮಹಿಳೆ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ತುರ್ತು ಅಗತ್ಯವಿದ್ದರೆ ಪಕ್ಕದ ಮನೆಯ ಪುರುಷರನ್ನು ಕೇಳುವಂತೆ ಸೂಚಿಸಿದ್ದಾರೆ. ಆದರೂ ಆತ ಮಹಿಳೆಯ ಮಾತನ್ನು ಧಿಕ್ಕರಿಸಿ, ಚಪ್ಪಲಿ ಬಿಚ್ಚಿ ಬಲವಂತವಾಗಿ ಮನೆಯೊಳಗೆ ನುಗ್ಗಿದ್ದಾನೆ.

ಗುಪ್ತಾಂಗ ಪ್ರದರ್ಶಿಸಿ ಅಸಭ್ಯ ವರ್ತನೆ

ಶೌಚಾಲಯದಿಂದ ಹೊರಬಂದ ಬಳಿಕ ಆತ ತನ್ನ ಗುಪ್ತಾಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ತೀವ್ರ ಆಘಾತಕ್ಕೊಳಗಾದ ಮಹಿಳೆ, ತಮ್ಮ ಸುರಕ್ಷತೆಯ ದೃಷ್ಟಿಯಿಂದ ಮನೆಯ ಮುಖ್ಯ ದ್ವಾರವನ್ನು ತೆರೆದಿಟ್ಟು, ಅಪಾಯ ಎದುರಾದರೆ ಹೊರಗೆ ಓಡಿಹೋಗುವ ಉದ್ದೇಶದಿಂದ ಬಾಗಿಲ ಬಳಿಯೇ ಮೊಬೈಲ್ ಕ್ಯಾಮೆರಾ ಆನ್ ಮಾಡಿ ನಿಂತುಕೊಂಡಿದ್ದಾರೆ. "ಮಹಿಳೆಯೊಬ್ಬಳು 'ಬೇಡ' ಎಂದು ಹೇಳಿದ ಮೇಲೆ ಅದು ಅಲ್ಲೇ ಮುಗಿಯಬೇಕಿತ್ತು. ಆಕೆಯ ಗಡಿಯನ್ನು ಮೀರಿ ಬಲವಂತವಾಗಿ ಮನೆಯೊಳಗೆ ನುಗ್ಗುವ ಹಕ್ಕು ಯಾರಿಗೂ ಇಲ್ಲ" ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಘಟನೆಯಿಂದ ತಾನು ತೀವ್ರ ಭಯಭೀತಳಾಗಿದ್ದು, ಸ್ವಂತ ಮನೆಯಲ್ಲೇ ಅಭದ್ರತೆ ಕಾಡುತ್ತಿದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಗಮನಿಸಿರುವ ಬೆಂಗಳೂರು ಪೊಲೀಸರು, ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಮಹಿಳೆಗೆ ಸೂಚಿಸಿದ್ದು, ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಸದ್ಯ ಪೊಲೀಸರು ಮುಂದಿನ ತನಿಖೆಗಾಗಿ ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದಾರೆ.

Read More
Next Story