
ಸಾಂದರ್ಭಿಕ ಚಿತ್ರ
94ರ ವೃದ್ಧನ ಡಿಜಿಟಲ್ ಅರೆಸ್ಟ್: ಖಾಕಿಧಾರಿ ಸೈಬರ್ ವಂಚಕರು!
ಬೆಂಗಳೂರಿನ 94 ವರ್ಷದ ಹಿರಿಯ ಸಂಶೋಧಕರನ್ನು 'ಡಿಜಿಟಲ್ ಅರೆಸ್ಟ್' ಹೆಸರಿನಲ್ಲಿ ಬೆದರಿಸಿದ ಸೈಬರ್ ವಂಚಕರು, ಸುಮಾರು ಮೂರು ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ 5 ಕೋಟಿ ರೂಪಾಯಿಗಳನ್ನು ದೋಚಿದ್ದಾರೆ
ಸ್ಮಾರ್ಟ್‌ಫೋನ್ ಎನ್ನುವುದು ಸೈಬರ್ ಅಪರಾಧಿಗಳ ಪಾಲಿಗೆ, ಜನರ ಖಾಸಗಿ ಬದುಕು ಮತ್ತು ಬ್ಯಾಂಕ್ ಖಾತೆಗಳಿಗೆ ಲಗ್ಗೆ ಇಡುವ ಸುಲಭದ ಹಾದಿಯಾಗಿದೆ. ಹ್ಯಾಕಿಂಗ್, ಹಣದ ಲೂಟಿ ಹಾಗೂ ಖಾಸಗಿ ಫೋಟೋಗಳ ಮೂಲಕ ಬ್ಲ್ಯಾಕ್‌ಮೇಲ್ ಮಾಡುವ ಜಾಲಗಳು, ಇಡೀ ಸಮಾಜವನ್ನೇ ಆತಂಕದ ಮಡುವಿಗೆ ತಳ್ಳಿವೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 'ಡಿಜಿಟಲ್ ಅರೆಸ್ಟ್' ಬಗ್ಗೆ ಹಗಲಿರುಳು ಜಾಗೃತಿ ಮೂಡಿಸುತ್ತಿದ್ದರೂ, ಅತಿ ಹೆಚ್ಚು ವಿದ್ಯಾವಂತರಿರುವ ಬೆಂಗಳೂರಿನಂತಹ ನಗರಗಳಲ್ಲೇ ಇಂತಹ ಬರ್ಬರ ದರೋಡೆಗಳು ನಡೆಯುತ್ತಿರುವುದು ಆತಂಕಕಾರಿ ಸಂಗತಿ. ಈ ವಂಚಕರ ಜಾಲಕ್ಕೆ ಕೇವಲ ಸಾಮಾನ್ಯರಲ್ಲ, ಬದಲಾಗಿ ಹೆಚ್ಚು ಓದಿಕೊಂಡಿರುವವರು, ಉನ್ನತ ಹುದ್ದೆಯಲ್ಲಿರುವವರೆ ಹೆಚ್ಚಾಗಿ ಬಲಿಯಾಗುತ್ತಿರುವುದು ಡಿಜಿಟಲ್ ಲೋಕದ ಕರಾಳ ಮುಖವನ್ನು ಅನಾವರಣಗೊಳಿಸಿದೆ.
5 ಕೋಟಿ ದರೋಡೆ
ಬೆಂಗಳೂರಿನ ನಿವಾಸಿಯಾಗಿರುವ 94 ವರ್ಷದ ನಿವೃತ್ತ ಸಂಶೋಧಕರೊಬ್ಬರು, ಸೈಬರ್ ಕ್ರೈಂ ಬಲೆಗೆ ಸಿಲುಕಿ ಒಟ್ಟು 5 ಕೋಟಿ ಹಣ ಕಳೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ತನ್ನ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಿ ಆಕೆಯ ಆರೈಕೆಯಲ್ಲಿ ತೊಡಗಿದ್ದ ಸಂಶೋಧಕರಿಗೆ ಡಿ. 2 ರಂದು ಅನಾಮಧೇಯ ಕರೆಯೊಂದು ಬಂದಿತ್ತು. ಆ ಕರೆಯಲ್ಲಿ ಮಾತನಾಡಿದ ವ್ಯಕ್ತಿ ತನ್ನನ್ನು 'ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ'ದ (TRAI) ಉನ್ನತ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. "ನೀವು ಮಾನವ ಕಳ್ಳಸಾಗಣೆ ಎಂಬ ಗಂಭೀರ ಅಪರಾಧದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದೀರಿ, ಬಳ್ಳಾರಿಯಲ್ಲಿ ನಿಮ್ಮ ವಿರುದ್ಧ ಎಫ್‌ಐಆರ್ ದಾಖಲಾಗಿದೆ" ಎಂದು ಹೇಳಿ ಬೆದರಿಸಿದ್ದ. ಆ ಸಮಯದಲ್ಲಿ ಪತ್ನಿಯ ಅನಾರೋಗ್ಯದ ಕಾರಣ ಮಾನಸಿಕವಾಗಿ ಕುಗ್ಗಿದ್ದ ವೃದ್ಧ ಸಂಶೋಧಕರಿಗೆ ಈ ಮಾತುಗಳು ಇನ್ನಷ್ಟು ಆತಂಕ ಹುಟ್ಟಿದ್ದವು.
ಬೆದರಿಕೆ, ವಿಡಿಯೋ ಕಾಲ್
ಮೊದಲ ಕರೆ ಮಾಡಿದ ವಂಚಕ, ಪ್ರಕರಣದ ತನಿಖೆಗಾಗಿ ನಿಮ್ಮನ್ನು ಪೊಲೀಸ್ ಅಧಿಕಾರಿಗಳು ಸಂಪರ್ಕಿಸುತ್ತಾರೆ ಎಂದು ಹೇಳಿ ಸಂಪರ್ಕ ಕಡಿತಗೊಳಿಸಿದ್ದ. ಕೂಡಲೇ ಇನ್ಸ್‌ಪೆಕ್ಟರ್ ಶೈಲಿಯ ಸೋಗು ಹಾಕಿದ ಮತ್ತೊಂದು ತಂಡ ಸಂಶೋಧಕರಿಗೆ ವಿಡಿಯೋ ಕಾಲ್ ಮಾಡಿತ್ತು. ವಿಡಿಯೋ ಕಾಲಿಂಗ್ ಅಪ್ಲಿಕೇಶನ್‌ಗಳ ಮೂಲಕ "ಡಿಜಿಟಲ್ ಅರೆಸ್ಟ್" ಎಂಬ ಮಾಯಾಜಾಲವನ್ನು ಸೃಷ್ಟಿಸಿದ ಈ ಕಿರಾತಕರು, ಸಂಶೋಧಕರಿಗೆ ಮನೆಯಿಂದ ಹೊರಬರದಂತೆ ಮತ್ತು ಯಾರಿಗೂ ಈ ವಿಷಯ ತಿಳಿಸದಂತೆ ತಾಕೀತು ಮಾಡಿದ್ದರು. ಸುಳ್ಳು ಪೊಲೀಸ್ ಕಚೇರಿಯನ್ನೆ, ಅಧಿಕೃತ ಎಂಬಂತೆ ತೋರುವ ದಾಖಲೆಗಳನ್ನು ತೋರಿಸಿ ಕೇಸ್ ಸೆಟ್ಲ್‌ಮೆಂಟ್ ಮಾಡಿಕೊಡುವುದಾಗಿ ನಂಬಿಸಿದರು. ಹಿರಿಯ ಸಂಶೋಧಕರು ತಮ್ಮ ಘನತೆಗೆ ಧಕ್ಕೆ ಉಂಟಾಗಬಹುದು ಎಂಬ ಭಯದಿಂದ ವಂಚಕರು ಹೇಳಿದಂತೆಲ್ಲ ಕೇಳಲು ನಿರ್ಧರಿಸಿದರು.
ಹೀಗಾಗಿ, ಡಿ.17 ರಿಂದ 2026 ರ ಫೆ.23 ರವರೆಗಿನ ಅವಧಿಯಲ್ಲಿ ಹಂತ ಹಂತವಾಗಿ ಬರೋಬ್ಬರಿ 4.9 ಕೋಟಿ ರೂ.,ಗಳನ್ನು ಸಂಶೋಧಕರು, ವಂಚಕರ ಖಾತೆಗೆ ವರ್ಗಾಯಿಸಿದ್ದಾರೆ. ಪತ್ನಿಯೊಂದಿಗೆ ಹೊಂದಿದ್ದ ಜಂಟಿ ಖಾತೆಯಿಂದ 92 ಲಕ್ಷ, 76 ಲಕ್ಷ, 1 ಕೋಟಿ ಹಾಗೂ ಅಂತಿಮವಾಗಿ 1.3 ಕೋಟಿ ರೂ.,ಗಳನ್ನು ಆರ್‌ಟಿಜಿಎಸ್ ಮೂಲಕ ಕಳುಹಿಸಿದ್ದಾರೆ. ತಮ್ಮ ಇಡೀ ಜೀವನದ ಗಳಿಕೆ ಖಾಲಿಯಾದಾಗ, ಹೆಚ್ಚಿನ ಹಣಕ್ಕಾಗಿ ಸ್ನೇಹಿತನೊಬ್ಬನ ಸಹಾಯ ಕೋರಿದಾಗಲೇ ಈ ಭೀಕರ ವಂಚನೆಯ ಅಸಲಿ ಮುಖವಾಡ ಕಳಚಿದ್ದು. ಸ್ನೇಹಿತನ ಎಚ್ಚರಿಕೆಯಿಂದ ಸೈಬರ್ ಕ್ರೈಂ ಪೊಲೀಸರಿಗೆ 2026 ರ ಮಾ. 8 ರಂದು ದೂರು ನೀಡಲಾಗಿದ್ದು, ಸದ್ಯ ತನಿಖೆ ನಡೆಯುತ್ತಿದ್ದು, ಖಾಕಿ ಪಡೆ ಹಣ ವರ್ಗಾವಣೆಯಾದ ಖಾತೆಗಳ ಜಾಡು ಹಿಡಿದು ತನಿಖೆ ಆರಂಭಿಸಿದೆ.
ಕೋಟಿಕೋಟಿ ಲೂಟಿ
ಇದು ಕೇವಲ ಸಂಶೋಧಕರೊಬ್ಬರ ಕಥೆಯಲ್ಲ. ಕಳೆದ ಕೆಲವು ತಿಂಗಳುಗಳಲ್ಲಿ ಬೆಂಗಳೂರಿನಲ್ಲಿ ಇಂತಹ ಹತ್ತಾರು ಪ್ರಕರಣಗಳು ನಡೆದಿವೆ. ಕಳೆದ ತಿಂಗಳು ಐಟಿ ಉದ್ಯೋಗಿಯೊಬ್ಬರಿಗೆ ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ, "ಡ್ರಗ್ಸ್ ಇರುವ ಪಾರ್ಸೆಲ್ ನಿಮ್ಮ ಹೆಸರಿನಲ್ಲಿದೆ" ಎಂದು ಬೆದರಿಸಿ 2 ಕೋಟಿ ರೂ. ದೋಚಲಾಗಿತ್ತು. ಇನ್ನೊಂದು ಪ್ರಕರಣದಲ್ಲಿ ನಿವೃತ್ತ ನ್ಯಾಯಾಧೀಶರೊಬ್ಬರನ್ನು 24 ಗಂಟೆಗಳ ಕಾಲ ವಿಡಿಯೋ ಕಾಲ್‌ನಲ್ಲಿ ಕೂಡಿ ಹಾಕಿ (ಡಿಜಿಟಲ್ ಅರೆಸ್ಟ್) ಅವರಿಂದಲೂ ಲಕ್ಷಾಂತರ ಹಣ ಪಡೆಯಲಾಗಿತ್ತು. ಈ ಜಾಲದ ಹಿಂದೆ ಹೆಚ್ಚಾಗಿ ಕಾಂಬೋಡಿಯಾ, ಲಾವೋಸ್ ಮತ್ತು ವಿಯೆಟ್ನಾಂ ಮೂಲದ ಸೈಬರ್ ಮಾಫಿಯಾಗಳು ಸಕ್ರಿಯವಾಗಿದ್ದು, ಅವರು ಸ್ಥಳೀಯವಾಗಿ ಹಣ ವರ್ಗಾವಣೆ ಮಾಡಲು ಬಾಡಿಗೆ ಬ್ಯಾಂಕ್ ಖಾತೆಗಳನ್ನು ಬಳಸಿಕೊಳ್ಳುತ್ತಿದ್ದಾರೆ.
ಡಿಜಿಟಲ್ ಅರೆಸ್ಟ್ ಎಂಬ ಕಾನೂನು ಪ್ರಕ್ರಿಯೆಯೇ ಅಸ್ತಿತ್ವದಲ್ಲಿಲ್ಲ ಎಂದು ಸರ್ಕಾರ ಪದೇ ಪದೇ ಹೇಳುತ್ತಿದ್ದರೂ, ವಂಚಕರು ಬಳಸುವ ತಂತ್ರಜ್ಞಾನ ಮತ್ತು ಬೆದರಿಕೆಯ ಶೈಲಿ ಅತಿ ವಿದ್ಯಾವಂತರನ್ನೂ ಕೂಡ ದಿಕ್ಕೆಡಿಸುತ್ತಿದೆ. ಯಾವುದೇ ಸರ್ಕಾರಿ ಅಧಿಕಾರಿ ಅಥವಾ ಪೊಲೀಸ್ ಸಿಬ್ಬಂದಿ ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ತನಿಖೆ ನಡೆಸುವುದಿಲ್ಲ ಮತ್ತು ಹಣಕ್ಕೆ ಬೇಡಿಕೆ ಇಡುವುದಿಲ್ಲ ಎಂಬುದನ್ನು ಸಾರ್ವಜನಿಕರು ನೆನಪಿಡಬೇಕಿದೆ.

