ಸ್ಲಂ ನಿವಾಸಿಗಳ ಹೆಸರಲ್ಲಿ ಸಿಮ್ ಕಾರ್ಡ್, ಶ್ರೀಮಂತರ ಹಣಕ್ಕೆ ಕನ್ನ: ಇಬ್ಬರ ಬಂಧನ
x

ಸ್ಲಂ ನಿವಾಸಿಗಳ ಹೆಸರಲ್ಲಿ ಸಿಮ್ ಕಾರ್ಡ್, ಶ್ರೀಮಂತರ ಹಣಕ್ಕೆ ಕನ್ನ: ಇಬ್ಬರ ಬಂಧನ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅತಿ ಹೆಚ್ಚಿನ ಲಾಭ ನೀಡುವುದಾಗಿ ಸಾರ್ವಜನಿಕರಿಗೆ ನಂಬಿಸಿ, ಅವರಿಂದ ಲಕ್ಷಾಂತರ ರೂ. ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡುತ್ತಿದ್ದ ಜಾಲ ಪತ್ತೆ.


Click the Play button to hear this message in audio format

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭ ಗಳಿಸಬಹುದು ಎಂಬ ಆಮಿಷವೊಡ್ಡಿ, ಕೊಳಚೆ ಪ್ರದೇಶದ ನಿವಾಸಿಗಳ ಹೆಸರಿನಲ್ಲಿ ಸಿಮ್ ಕಾರ್ಡ್‌ಗಳನ್ನು ಖರೀದಿಸಿ ಸಾರ್ವಜನಿಕರಿಗೆ ಲಕ್ಷಾಂತರ ರೂ. ವಂಚಿಸುತ್ತಿದ್ದ ಜಾಲವನ್ನು ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸರು ಭೇದಿಸಿದ್ದಾರೆ. ಸಾರ್ವಜನಿಕರನ್ನು ನಂಬಿಸಿ ಅವರಿಂದ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದ ದಂಧೆ ತನಿಖೆಯಿಂದ ಬಯಲಾಗಿದೆ.

ಇಬ್ಬರು ಪ್ರಮುಖ ಆರೋಪಿಗಳ ಬಂಧನ

ಜಯನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಕಲಿ ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿರುವ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದು, ವಂಚನೆಗೆ ಬಳಸುತ್ತಿದ್ದ ಅಪಾರ ಪ್ರಮಾಣದ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಮೂಲತಃ ಗುಜರಾತ್‌ನ ಸೂರತ್ ಜಿಲ್ಲೆಯ ಕುಮಾವತ್ ಯೋಗೇಶ್ ಅಮರರಾಮ್ ಮತ್ತು ದೆಹಲಿ ಮೂಲದ ಇಮ್ರಾನ್ ಎಂದು ಗುರುತಿಸಲಾಗಿದೆ. ಇವರಿಂದ 31 ಮೊಬೈಲ್ ಫೋನ್‌ಗಳು, 13 ಲ್ಯಾಪ್‌ಟಾಪ್‌ಗಳು ಹಾಗೂ ಸ್ಲಂ ನಿವಾಸಿಗಳ ಹೆಸರಿನಲ್ಲಿ ಪಡೆದಿದ್ದ 16 ಸಿಮ್ ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ.

ಕಾರ್ಯಾಚರಣೆಯ ವಿಧಾನ

ಬಂಧಿತರು ಜಯನಗರದ 9ನೇ ಬ್ಲಾಕ್‌ನ ಅಂಜನಾದ್ರಿ ಅವೆನ್ಯೂದಲ್ಲಿರುವ 'ಮಲ್ಟಿವೇವ್ ಬ್ಯುಸಿನೆಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್' ಹೆಸರಿನ ಕಚೇರಿಯಲ್ಲಿ ನಕಲಿ ಕಾಲ್ ಸೆಂಟರ್ ನಡೆಸುತ್ತಿದ್ದರು. ಆರೋಪಿಗಳು ಸುಮಾರು 15 ಮಂದಿ ಹೊರರಾಜ್ಯದ ಯುವಕರನ್ನು ಗ್ರಾಹಕ ಸೇವಾ ಪ್ರತಿನಿಧಿಗಳನ್ನಾಗಿ ನೇಮಿಸಿಕೊಂಡಿದ್ದರು. ಗೂಗಲ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಆಸಕ್ತಿ ಇರುವ ಸಾರ್ವಜನಿಕರ ಫೋನ್ ನಂಬರ್ ಮತ್ತು ಮಾಹಿತಿಯನ್ನು ಕಲೆಹಾಕಿ, ನಂತರ ಅವರಿಗೆ ಕರೆ ಮಾಡಿ ಭಾರಿ ಲಾಭದ ಆಮಿಷವೊಡ್ಡುತ್ತಿದ್ದರು. ಪತ್ತೆ ಹಚ್ಚಬಾರದು ಎಂಬ ಕಾರಣಕ್ಕೆ ಇವರು ಕೊಳಚೆ ಪ್ರದೇಶದ ನಿವಾಸಿಗಳ ಹೆಸರಿನಲ್ಲಿ ಖರೀದಿಸಿದ ಸಿಮ್‌ಕಾರ್ಡ್‌ಗಳನ್ನೇ ಬಳಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಹಣ ಪಡೆದುಕೊಳ್ಳಲು ಬೇರೆ ರಾಜ್ಯದ ವ್ಯಕ್ತಿಗಳ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳನ್ನು ಬಳಸುತ್ತಿದ್ದರು. ಒಮ್ಮೆ ಹಣ ವರ್ಗಾವಣೆಯಾದ ನಂತರ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕಕ್ಕೆ ಸಿಗದಂತೆ ತಲೆಮರೆಸಿಕೊಳ್ಳುತ್ತಿದ್ದರು.

ಪತ್ತೆ ಹಚ್ಚಿದ್ದು ಹೇಗೆ?

ದೂರುದಾರರಿಗೆ ಬಂದ ಕರೆಯ ಸ್ಥಳ ಬಿ.ಟಿ.ಎಂ ಲೇಔಟ್ ಎಂದು ತನಿಖೆ ವೇಳೆ ತಿಳಿದುಬಂದಿತ್ತು. ಪೊಲೀಸರು ತಾಂತ್ರಿಕ ವಿಶ್ಲೇಷಣೆಯ ಮೂಲಕ ಮೊಬೈಲ್‌ನ ಐಎಂಇಐ (IMEI) ಸಂಖ್ಯೆಯನ್ನು ಪತ್ತೆಹಚ್ಚಿ, ಅದಕ್ಕೆ ಲಿಂಕ್ ಆಗಿದ್ದ ಗೂಗಲ್ ಇಮೇಲ್ ಐಡಿಯನ್ನು ಪತ್ತೆ ಮಾಡಿದರು. ಈ ಇಮೇಲ್ ಐಡಿ ಕುಮಾವತ್ ಯೋಗೇಶ್ ಅಮರರಾಮ್ ಎಂಬುವವನಿಗೆ ಸೇರಿದ್ದೆಂದು ದೃಢಪಟ್ಟಿದ್ದರಿಂದ, ಜಯನಗರದ ಕಚೇರಿಯ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಸೆರೆಹಿಡಿಯಲಾಗಿದೆ.

ಪೊಲೀಸರ ಎಚ್ಚರಿಕೆ

ಈ ಯಶಸ್ವಿ ಕಾರ್ಯಾಚರಣೆಯನ್ನು ಸೈಬರ್ ಕಮಾಂಡ್‌ನ ಡಿಜಿಪಿ ಡಾ. ಪ್ರಣಬ್ ಮೊಹಾಂತಿ, ಎಡಿಜಿಪಿ ಎಂ. ಚಂದ್ರಶೇಖರ್ ಹಾಗೂ ಡಿಐಜಿ ಎಚ್.ಡಿ. ಆನಂದ್ ಕುಮಾರ್ ಮಾರ್ಗದರ್ಶನದಲ್ಲಿ ನಡೆಸಲಾಯಿತು. ಕೇಂದ್ರ ವಿಭಾಗದ ಎಸಿಪಿ ಮನೋಜ್ ಕುಮಾರ್ ಎಂ.ಇ. ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಎಸ್. ವಸಿಮುಲ್ಲಾ ಮತ್ತು ತಂಡದವರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. "ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಂತೆ ಅಥವಾ ಹಣ ದ್ವಿಗುಣಗೊಳಿಸುವ ಆಮಿಷ ತೋರಿಸಿದರೆ ಸಾರ್ವಜನಿಕರು ಎಚ್ಚರದಿಂದಿರಬೇಕು. ಯಾವುದೇ ಹಣ ವರ್ಗಾವಣೆ ಮಾಡುವ ಮೊದಲು ಅಧಿಕೃತತೆಯನ್ನು ಪರಿಶೀಲಿಸಬೇಕು," ಎಂದು ಸೈಬರ್ ಪೊಲೀಸರು ಮನವಿ ಮಾಡಿದ್ದಾರೆ.

Read More
Next Story