
ದೇಶಾದ್ಯಂತ ಸಾರ್ವಜನಿಕರನ್ನು ಬೆಚ್ಚಿಬೀಳಿಸುತ್ತಿರುವ "ಡಿಜಿಟಲ್ ಅರೆಸ್ಟ್" ವಂಚನೆ ಜಾಲದ ವಿರುದ್ಧ ಕೇಂದ್ರ ತನಿಖಾ ದಳ (CBI) ಸಮರ ಸಾರಿದೆ.
Digital Arrest| ಮುಂಬೈ ಪೊಲೀಸರ ಸೋಗಿನಲ್ಲಿ ವಿಡಿಯೊ ಕರೆ: 22 ಲಕ್ಷ ರೂ. ದೋಚಿದ ವಂಚಕರು
ಬೆಂಗಳೂರಿನಲ್ಲಿ 'ಡಿಜಿಟಲ್ ಅರೆಸ್ಟ್' ಹಾಗೂ ಉದ್ಯೋಗದ ಆಮಿಷವೊಡ್ಡಿ ಸೈಬರ್ ವಂಚಕರು ಇಬ್ಬರು ವ್ಯಕ್ತಿಗಳಿಂದ ಸುಮಾರು 22 ಲಕ್ಷಕ್ಕೂ ಅಧಿಕ ಹಣವನ್ನು ದೋಚಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೈಬರ್ ಅಪರಾಧಗಳ ಅಬ್ಬರ ತಗ್ಗುವ ಲಕ್ಷಣಗಳು ಕಾಣುತ್ತಿಲ್ಲ. ದಿನಕ್ಕೊಂದು ಹೊಸ ರೂಪ ಪಡೆಯುತ್ತಿರುವ ಈ ವಂಚನಾ ಜಾಲದಲ್ಲಿ ಈಗ 'ಡಿಜಿಟಲ್ ಅರೆಸ್ಟ್' ಎಂಬ ಭೂತ ವೃದ್ಧರನ್ನು ಮತ್ತು ಸುಶಿಕ್ಷಿತರನ್ನು ಕಾಡತೊಡಗಿದೆ. ಇತ್ತೀಚಿನ ಘಟನೆಯಲ್ಲಿ, ವೈಟ್‌ಫೀಲ್ಡ್‌ನ ಇ.ಸಿ.ಸಿ ರಸ್ತೆಯ ಲಕ್ಷ್ಮಿ ಎನ್‌ಪ್ಲೇವ್ ಅಪಾರ್ಟ್‌ಮೆಂಟ್ ನಿವಾಸಿಯಾದ 64 ವರ್ಷದ ವೃದ್ಧರೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ಬರೋಬ್ಬರಿ 16.60 ಲಕ್ಷ ರೂ., ಕಳೆದುಕೊಂಡಿದ್ದಾರೆ. ಈ ಸಂಬಂಧ ವೈಟ್‌ಫೀಲ್ಡ್ ಸೈಬರ್ ಅಪರಾಧ ಠಾಣೆಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಶಂಕಿತ ಆರೋಪಿ ಸಂದೀಪ್ ರಾವ್ ಎಂಬಾತನ ವಿರುದ್ಧ ಬಿಎನ್‌ಎಸ್ ಮತ್ತು ಐಟಿ ಕಾಯ್ದೆಯಡಿ ಕಠಿಣ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಈ ವಂಚನೆಯು ಫೆಬ್ರವರಿ 14ರಂದು ಆರಂಭವಾಗಿದ್ದು, ವಂಚಕರು ಮುಂಬೈ ಪೊಲೀಸರೆಂದು ವೃದ್ಧರಿಗೆ ಕರೆ ಮಾಡಿ ಬೆದರಿಸಿದ್ದರು. ನಿಮ್ಮ ಬ್ಯಾಂಕ್ ಖಾತೆಗಳ ಮೂಲಕ ಭಯೋತ್ಪಾದನಾ ಸಂಘಟನೆಗಳಿಗೆ ಹಣ ವರ್ಗಾವಣೆಯಾಗುತ್ತಿದೆ ಮತ್ತು ನೀವು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿದ್ದೀರಿ ಎಂದು ನಂಬಿಸಿದ್ದರು. ನಂತರ ವಿಡಿಯೊ ಕರೆ ಮಾಡಿದ ವಂಚಕರು, ತಾವು ಮುಂಬೈ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳೆಂದು ನಟಿಸಿ, ತನಿಖೆಯ ನೆಪದಲ್ಲಿ ವೃದ್ಧರನ್ನು 'ಡಿಜಿಟಲ್ ಅರೆಸ್ಟ್' ಮಾಡಿದ್ದರು. ಅಂದರೆ, ವಿಡಿಯೊ ಕರೆಯಿಂದ ಹೊರಬರಬಾರದು ಮತ್ತು ಯಾರಿಗೂ ಈ ವಿಷಯ ತಿಳಿಸಬಾರದು ಎಂದು ತಾಕೀತು ಮಾಡಿದ್ದರು. ಭಯಭೀತರಾದ ವೃದ್ಧರು, ತಮ್ಮ ಖಾತೆಯಲ್ಲಿದ್ದ ಹಣವನ್ನು ಪರಿಶೀಲನೆಯ ಹೆಸರಿನಲ್ಲಿ ವಂಚಕರು ಸೂಚಿಸಿದ ಖಾತೆಗಳಿಗೆ ವರ್ಗಾವಣೆ ಮಾಡಿದ್ದರು. ಕೆಲವು ದಿನಗಳ ಬಳಿಕ ಆ ನಂಬರ್‌ಗಳು ಸ್ವಿಚ್ ಆಫ್ ಆದಾಗ ತಮಗೆ ಮೋಸ ಹೋಗಿರುವುದು ಅವರ ಅರಿವಿಗೆ ಬಂದಿದೆ.
ಉದ್ಯೋಗದ ನೆಪದಲ್ಲಿ ವಂಚನೆ
ಇದೇ ಮಾದರಿಯ ಮತ್ತೊಂದು ಪ್ರಕರಣದಲ್ಲಿ ಕೆ.ಆರ್. ಪುರದ ನಿವಾಸಿ ಭರತ್ ಶಾಂತಪ್ಪ ಎಂಬುವವರು ಉದ್ಯೋಗದ ಆಮಿಷಕ್ಕೆ ಒಳಗಾಗಿ 6.13 ಲಕ್ಷ ರೂ., ಕಳೆದುಕೊಂಡಿದ್ದಾರೆ. ಪ್ರತಿಷ್ಠಿತ ಕಂಪನಿಯ ಹಿರಿಯ ವ್ಯವಸ್ಥಾಪಕನೆಂದು ನಟಿಸಿದ ವ್ಯಕ್ತಿಯೊಬ್ಬರು ಆನ್‌ಲೈನ್ ಸಂದರ್ಶನದ ನಾಟಕವಾಡಿ, ಭದ್ರತಾ ಠೇವಣಿಯ ಹೆಸರಿನಲ್ಲಿ ಹಣ ದೋಚಿದ್ದಾರೆ. ಈ ಎರಡೂ ಪ್ರಕರಣಗಳು ಸೈಬರ್ ವಂಚಕರು ಎಷ್ಟು ವ್ಯವಸ್ಥಿತವಾಗಿ ಜನರನ್ನು ವಂಚಿಸುತ್ತಿದ್ದಾರೆ ಎಂಬುದಕ್ಕೆ ಕನ್ನಡಿ ಹಿಡಿದಿವೆ.
ವಾಸ್ತವವಾಗಿ, ಕಾನೂನು ಜಾರಿಯ ಯಾವುದೇ ಸಂಸ್ಥೆಗಳು ವಿಡಿಯೊ ಕರೆ ಮೂಲಕ ಜನರನ್ನು ಬಂಧಿಸುವ ಅಥವಾ ಹಣ ವರ್ಗಾವಣೆಗೆ ಪೀಡಿಸುವ 'ಡಿಜಿಟಲ್ ಅರೆಸ್ಟ್' ಎಂಬ ಪದ್ಧತಿಯನ್ನು ಅನುಸರಿಸುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ವರ್ಷದಿಂದ ವರ್ಷಕ್ಕೆ ಏರಿಕೆ
ಅಂಕಿ ಅಂಶಗಳ ಪ್ರಕಾರ, ಬೆಂಗಳೂರಿನಲ್ಲಿ ಸೈಬರ್ ಅಪರಾಧಗಳ ಗ್ರಾಫ್ ವರ್ಷದಿಂದ ವರ್ಷಕ್ಕೆ ಏರುತ್ತಲೇ ಸಾಗಿದೆ. 2023ರಲ್ಲಿ ನಗರದಲ್ಲಿ ಸುಮಾರು 17,623 ಸೈಬರ್ ಪ್ರಕರಣಗಳು ದಾಖಲಾಗಿದ್ದವು, ಆದರೆ 2024ರಲ್ಲಿ ಈ ಸಂಖ್ಯೆ 20,000 ಗಡಿ ದಾಟಿತ್ತು. 2025ರ ಅಂತ್ಯದ ವೇಳೆಗೆ ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿತ್ತಾದರೂ, 2026ರ ಆರಂಭದಿಂದಲೇ ಮತ್ತೆ ಈ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಸೈಬರ್ ಪೊಲೀಸರ ಪ್ರಕಾರ, ವಂಚಕರು ಹೆಚ್ಚಾಗಿ ನಿವೃತ್ತ ಸರ್ಕಾರಿ ನೌಕರರು ಮತ್ತು ವೃದ್ಧರನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ. ತನಿಖಾ ಸಂಸ್ಥೆಗಳು ಪದೇ ಪದೇ ಎಚ್ಚರಿಸುತ್ತಿದ್ದರೂ, ಭಯದ ವಾತಾವರಣ ಸೃಷ್ಟಿಸುವ ವಂಚಕರ ಜಾಲಕ್ಕೆ ಸುಶಿಕ್ಷಿತರೇ ಬಲಿಯಾಗುತ್ತಿರುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

