ಖಾಸಗಿ ಆಸ್ಪತ್ರೆ ನರ್ಸ್ ನಿರ್ಲಕ್ಷ್ಯ; 6 ತಿಂಗಳ ಮಗುವಿನ ಬೆರಳು ಕಟ್
x

ವೈದ್ಯಕೀಯ ಸಿಬ್ಬಂದಿಯ ಅತಿಯಾದ ನಿರ್ಲಕ್ಷ್ಯದಿಂದಾಗಿ ಆರು ತಿಂಗಳ ಪುಟ್ಟ ಕಂದಮ್ಮನೊಬ್ಬನ ಬೆರಳು ತುಂಡಾಗಿರುವ ಘಟನೆ ನಡೆದಿದೆ.

ಖಾಸಗಿ ಆಸ್ಪತ್ರೆ ನರ್ಸ್ ನಿರ್ಲಕ್ಷ್ಯ; 6 ತಿಂಗಳ ಮಗುವಿನ ಬೆರಳು ಕಟ್

ಬೆಂಗಳೂರಿನ ಇಂದಿರಾನಗರದಲ್ಲಿರುವ ಪ್ರತಿಷ್ಠಿತ ಚಿನ್ಮಯ ಮಿಷನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯ ಅತಿಯಾದ ನಿರ್ಲಕ್ಷ್ಯದಿಂದಾಗಿ ಆರು ತಿಂಗಳ ಪುಟ್ಟ ಕಂದಮ್ಮನೊಬ್ಬನ ಬೆರಳು ತುಂಡಾಗಿರುವ ಘಟನೆ ನಡೆದಿದೆ.


Click the Play button to hear this message in audio format

ಜೀವ ಉಳಿಸಬೇಕಾದ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯವೊಂದು ಎಳೆಜೀವಕ್ಕೆ ಶಾಶ್ವತ ಅಂಗವೈಕಲ್ಯದ ಭೀತಿ ತಂದೊಡ್ಡಿರುವ ಅಮಾನವೀಯ ಘಟನೆಯೊಂದು ರಾಜಧಾನಿ ಬೆಂಗಳೂರಿನಲ್ಲಿ ವರದಿಯಾಗಿದೆ. ಇಂದಿರಾನಗರದ ಪ್ರತಿಷ್ಠಿತ ಚಿನ್ಮಯ ಮಿಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಬೇಕಿದ್ದ ಆರು ತಿಂಗಳ ಕಂದಮ್ಮನ ಕೈಬೆರಳನ್ನೇ ನರ್ಸ್ ಕತ್ತರಿಸಿದ್ದು, ಆಸ್ಪತ್ರೆಯ ಬೇಜವಾಬ್ದಾರಿತನದ ವಿರುದ್ಧ ಪೋಷಕರ ಆಕ್ರೋಶ ಕಟ್ಟೆಯೊಡೆದಿದೆ.

ವಿಜಯ್ ಕುಮಾರ್ ಎಂಬುವವರ ಆರು ತಿಂಗಳ ಮಗು ಬಾಲಕುಮಾರ್ ತೀವ್ರ ಜ್ವರ ಮತ್ತು ಶೀತದಿಂದ ಬಳಲುತ್ತಿತ್ತು. ಮಗುವಿನ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಪೋಷಕರು ಕಳೆದ ಫೆಬ್ರವರಿ 19 ರಂದು ಇಂದಿರಾನಗರದಲ್ಲಿರುವ ಚಿನ್ಮಯ ಮಿಷನ್ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯ ವೈದ್ಯರಾದ ಡಾ. ಮೀನಾಕ್ಷಿ ಅವರ ಉಸ್ತುವಾರಿಯಲ್ಲಿ ಸತತ ಐದು ದಿನಗಳ ಕಾಲ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಲಾಗಿತ್ತು. ಮಗುವಿನ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡುಬಂದಿದ್ದರಿಂದ, ಫೆಬ್ರವರಿ 24ರ ಮಂಗಳವಾರದಂದು ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲು ವೈದ್ಯರು ಸೂಚಿಸಿದ್ದರು. ಮಗು ಹುಷಾರಾದ ಖುಷಿಯಲ್ಲಿ ಪೋಷಕರು ಆಸ್ಪತ್ರೆಯ ಬಿಲ್ ಪಾವತಿಸಿ ಮನೆಗೆ ತೆರಳಲು ಸಿದ್ಧರಾಗಿದ್ದಾಗಲೇ ಈ ಅನಿರೀಕ್ಷಿತ ದುರಂತ ಸಂಭವಿಸಿದೆ.

ಐವಿ ಡ್ರಿಪ್ಸ್ ತೆಗೆಯುವ ಭರದಲ್ಲಿ ಕಿರುಬೆರಳು ಕಟ್

ಮಗುವನ್ನು ಮನೆಗೆ ಕರೆದೊಯ್ಯುವ ಮುನ್ನ ಕೈಗೆ ಅಳವಡಿಸಲಾಗಿದ್ದ ಐವಿ ಡ್ರಿಪ್ಸ್ ಮತ್ತು ಅದರ ಪ್ಲಾಸ್ಟರ್ ಬ್ಯಾಂಡೇಜ್ ಅನ್ನು ತೆಗೆಯಲು ಆಸ್ಪತ್ರೆಯ ನರ್ಸ್ ಅನಿತಾ ಎಂಬುವವರು ಬಂದಿದ್ದರು. ಈ ವೇಳೆ ಬ್ಯಾಂಡೇಜ್ ಕತ್ತರಿಸಲು ಕತ್ತರಿ ಬಳಸಿದ ನರ್ಸ್, ಕನಿಷ್ಠ ಜಾಗರೂಕತೆಯನ್ನೂ ವಹಿಸದೆ ತೀವ್ರ ನಿರ್ಲಕ್ಷ್ಯ ಮೆರೆದಿದ್ದಾರೆ. ಪ್ಲಾಸ್ಟರ್ ಕತ್ತರಿಸುವ ಭರದಲ್ಲಿ ಮಗುವಿನ ಎಡಗೈ ಕಿರುಬೆರಳಿನ ಮೇಲ್ಭಾಗವನ್ನೇ ನಿರ್ದಾಕ್ಷಿಣ್ಯವಾಗಿ ಕತ್ತರಿಸಿದ್ದಾರೆ. ಬೆರಳು ತುಂಡಾದ ಪರಿಣಾಮ ಎಳೆಮಗು ತೀವ್ರ ರಕ್ತಸ್ರಾವ ಹಾಗೂ ಅಸಹನೀಯ ನೋವಿನಿಂದ ನರಳಾಡಿ ಕಿರುಚಿಕೊಂಡಿದೆ. ನರ್ಸ್ ಮಾಡಿದ ಈ ಘೋರ ಎಡವಟ್ಟಿನಿಂದ ಪೋಷಕರು ಕ್ಷಣಕಾಲ ಬೆಚ್ಚಿಬಿದ್ದಿದ್ದಾರೆ.

ಸಣ್ಣ ಗಾಯವೆಂದು ಪ್ರಕರಣ ಮುಚ್ಚಿಹಾಕಲು ಆಸ್ಪತ್ರೆ ಯತ್ನ

ಬೆರಳು ತುಂಡಾಗಿ ರಕ್ತದೋಕುಳಿಯಾದ ತಕ್ಷಣ ಎಚ್ಚೆತ್ತ ಸಿಬ್ಬಂದಿ, ಮಗುವನ್ನು ಅವಸರದಿಂದ ತುರ್ತು ಚಿಕಿತ್ಸಾ ಘಟಕಕ್ಕೆ ಕರೆದೊಯ್ದು ಡ್ರೆಸ್ಸಿಂಗ್ ಮಾಡಿದ್ದಾರೆ. ಇಷ್ಟೆಲ್ಲಾ ಅನಾಹುತ ನಡೆದರೂ ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಉದ್ಧಟತನದ ವರ್ತನೆ ತೋರಿದ್ದಾರೆ. "ಇದೊಂದು ಸಣ್ಣ ಗಾಯವಷ್ಟೇ, ಮಗು ಬೆಳೆದಂತೆ ಬೆರಳು ತಾನಾಗಿಯೇ ಗುಣವಾಗುತ್ತದೆ" ಎಂದು ಹಾರಿಕೆಯ ಉತ್ತರ ನೀಡುವ ಮೂಲಕ ಇಡೀ ಘಟನೆಯನ್ನು ಮುಚ್ಚಿಹಾಕಲು ವಿಫಲ ಯತ್ನ ನಡೆಸಿದ್ದಾರೆ ಎಂದು ಮಗುವಿನ ತಂದೆ ವಿಜಯ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಆಸ್ಪತ್ರೆ ಸಿಬ್ಬಂದಿಯ ಈ ಬೇಜವಾಬ್ದಾರಿಯುತ ಹೇಳಿಕೆಯಿಂದ ಆಕ್ರೋಶಗೊಂಡ ಪೋಷಕರು, ಮಗುವಿಗೆ ಶಾಶ್ವತ ಅಂಗವೈಕಲ್ಯ ಉಂಟಾದರೆ ಹೊಣೆ ಯಾರು ಎಂದು ಆಸ್ಪತ್ರೆ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ ಪೋಷಕರು

ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯ ಹಾಗೂ ಆಡಳಿತ ಮಂಡಳಿಯ ಹಾರಿಕೆಯ ಪ್ರತಿಕ್ರಿಯೆಯಿಂದ ಬೇಸತ್ತ ಮಗುವಿನ ತಂದೆ ವಿಜಯ್ ಕುಮಾರ್, ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಕಂದಮ್ಮನ ಜೀವದ ಜೊತೆ ಚೆಲ್ಲಾಟವಾಡಿದ ಆರೋಪದ ಮೇಲೆ ನರ್ಸ್ ಅನಿತಾ, ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಚಿನ್ಮಯ ಮಿಷನ್ ಆಸ್ಪತ್ರೆ ಆಡಳಿತ ಮಂಡಳಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಸ್ತುತ ಈ ಗಂಭೀರ ಪ್ರಕರಣವು ಮೇಯೋಹಾಲ್‌ನಲ್ಲಿರುವ 10ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಲಯದ ಮುಂದಿದ್ದು, ಇಂದಿರಾನಗರ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Read More
Next Story