Huge drug ring busted in Bengaluru: Drugs worth Rs 11 crore seized, five arrested
x

ಸಾಂದರ್ಭಿಕ ಚಿತ್ರ

ಬೆಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಜಾಲ ಪತ್ತೆ: 11 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ

ಬಂಧಿತರು ವಿದೇಶಿ ಮೂಲದ ವ್ಯಕ್ತಿಯಿಂದ ಕಡಿಮೆ ಬೆಲೆಗೆ ಎಂಡಿಎಂಎ ಮತ್ತು ಗಾಂಜಾವನ್ನು ಖರೀದಿಸಿ, ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.


Click the Play button to hear this message in audio format

ಬೆಂಗಳೂರು ನಗರ ಪೊಲೀಸರು ಮಾದಕ ವಸ್ತುಗಳ ಮಾರಾಟ ಜಾಲವನ್ನು ಭೇದಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಅಂದಾಜು 5.77 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ, ಉಪ್ಪಾರಪೇಟೆ ಮತ್ತು ಕಾಡುಗೋಡಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಬಂಧಿತ ಆರೋಪಿಗಳು ಅಂತಾರಾಜ್ಯ ಮಟ್ಟದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದು, 3 ಕೆ.ಜಿ. 912 ಗ್ರಾಂ ಎಂಡಿಎಂಎ (MDMA), 343 ಕೆ.ಜಿ. 170 ಗ್ರಾಂ ಗಾಂಜಾ, ಒಂದು ಟಾಟಾ ಏಸ್ ಗೂಡ್ಸ್ ವಾಹನ ಮತ್ತು ಒಂದು ಮೊಬೈಲ್ ಫೋನನ್ನು ವಶಪಡಿಸಿಕೊಂಡಿದ್ದಾರೆ. ಈ ವಸ್ತುಗಳ ಮಾರುಕಟ್ಟೆ ಮೌಲ್ಯ 11.04 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳಿಗೆ ಮೈಸೂರು ರಸ್ತೆಯ ನಾಯಂಡಹಳ್ಳಿ ಸಿಗ್ನಲ್ ಬಳಿ ಗಾಂಜಾ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಅದೇ ರೀತಿ, ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಆರ್.ಕೆ. ಪುರಂ ಬಳಿ ಮತ್ತು ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಚನ್ನಸಂದ್ರ ಮುಖ್ಯ ರಸ್ತೆಯಲ್ಲಿ ಎಂಡಿಎಂಎ ಮತ್ತು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಈ ಮಾಹಿತಿಯ ಆಧಾರದ ಮೇಲೆ, ಠಾಣಾಧಿಕಾರಿಗಳು ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿ, ದಾಳಿ ನಡೆಸಿದ್ದರು.

ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ

ಪೊಲೀಸರು ಹೊರ ರಾಜ್ಯದ ಓರ್ವ ವ್ಯಕ್ತಿಯನ್ನು ಒಳಗೊಂಡಂತೆ ಒಟ್ಟು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ, ಬಂಧಿತರು ವಿದೇಶಿ ಮೂಲದ ವ್ಯಕ್ತಿಯಿಂದ ಕಡಿಮೆ ಬೆಲೆಗೆ ಎಂಡಿಎಂಎ ಮತ್ತು ಗಾಂಜಾವನ್ನು ಖರೀದಿಸಿ, ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಿ.ಎಚ್. ಹಿಲ್ಮೇರಿ (ಐಪಿಎಸ್), ಉಪ ಪೊಲೀಸ್ ಆಯುಕ್ತ ರಾಜಾ ಇಮಾಮ್ ಕಾಸಿಂ, ಪಶ್ಚಿಮ ವಿಭಾಗದ ಉಪ ಆಯುಕ್ತ ಯತೀಶ್ ಎನ್. ಮತ್ತು ವೈಟ್‌ಫೀಲ್ಡ್ ವಿಭಾಗದ ಉಪ ಆಯುಕ್ತ ಸೈದುಲು ಅಡಾವತ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಸಹಾಯಕ ಪೊಲೀಸ್ ಆಯುಕ್ತ ಎ.ಎನ್. ನಾಗರಾಜ್, ಚಿಕ್ಕಪೇಟೆ ಉಪ ವಿಭಾಗದ ಎಸಿಪಿ ರಮೇಶ್ ಕೆ.ಎಂ. ಮತ್ತು ವೈಟ್‌ಫೀಲ್ಡ್ ಉಪ ವಿಭಾಗದ ಎಸಿಪಿ ರೀನಾ ಸುವರ್ಣ ಅವರ ನೇತೃತ್ವದಲ್ಲಿ, ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ, ಉಪ್ಪಾರಪೇಟೆ ಮತ್ತು ಕಾಡುಗೋಡಿ ಪೊಲೀಸ್ ಠಾಣೆಗಳ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.

ಯಾವ ಠಾಣೆಯಲ್ಲಿ ಎಷ್ಟು ಜಪ್ತಿ?

ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದಿಂದ 332 ಕೆ.ಜಿ. ಗಾಂಜಾ, 1 ಗೂಡ್ಸ್ ವಾಹನ, 1 ಮೊಬೈಲ್ ಫೋನ್ ಹಾಗೂ ಇವುಗಳ ಒಟ್ಟು ಮೌಲ್ಯ 3.32 ಕೋಟಿ ರೂ., ಉಪ್ಪಾರಪೇಟೆ ವ್ಯಾಪ್ತಿಯಲ್ಲಿ 3.9 ಕೆ.ಜಿ. ಎಂಡಿಎಂಎ (ಒಟ್ಟು ಮಾರುಕಟ್ಟೆ ಮೌಲ್ಯ 7.60 ಕೋಟಿ ರೂ.), ಕಾಡುಗೋಡಿ ವ್ಯಾಪ್ತಿಯಲ್ಲಿ 12 ಗ್ರಾಂ ಎಂಡಿಎಂಎ, 11 ಕೆ.ಜಿ. 170 ಗ್ರಾಂ ಗಾಂಜಾ ಸೇರಿ ಒಟ್ಟು 3.9 ಕೆ.ಜಿ. ಎಂಡಿಎಂಎ, 343 ಕೆ.ಜಿ. 170 ಗ್ರಾಂ ಗಾಂಜಾ, 1 ಗೂಡ್ಸ್ ವಾಹನ, 1 ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದೆ.

Read More
Next Story