ಬೆಂಗಳೂರಿನ ಕ್ಯಾಪ್‌ಜೆಮಿನಿ ಡೇ-ಕೇರ್‌ನಲ್ಲಿ ಮಕ್ಕಳ ಮೇಲಿನ ಕ್ರೌರ್ಯ: ಶಿಶುಪಾಲಕಿ ಬಂಧನ!
x

ವೈರಲ್‌ ಆಗಿರುವ ವಿಡಿಯೋ 

ಬೆಂಗಳೂರಿನ ಕ್ಯಾಪ್‌ಜೆಮಿನಿ ಡೇ-ಕೇರ್‌ನಲ್ಲಿ ಮಕ್ಕಳ ಮೇಲಿನ ಕ್ರೌರ್ಯ: ಶಿಶುಪಾಲಕಿ ಬಂಧನ!

ಬೆಂಗಳೂರಿನ ಕ್ಯಾಪ್‌ಜೆಮಿನಿ ಕ್ಯಾಂಪಸ್ ಡೇ-ಕೇರ್‌ನಲ್ಲಿ 2 ವರ್ಷದ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿಟ್ಟು ದೌರ್ಜನ್ಯ ಎಸಗಿದ್ದ ಆರೋಪಿ ಮಹಿಳೆ ವಿಜಯಲಕ್ಷ್ಮಿಯನ್ನು ಪೊಲೀಸರು ಬಂಧಿಸಿದ್ದಾರೆ.


ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಸಾಫ್ಟ್‌ವೇರ್ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನಲ್ಲಿರುವ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಮಕ್ಕಳ ಮೇಲೆ ನಡೆದಿದೆ ಎನ್ನಲಾದ ಭೀಕರ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಒಬ್ಬ ಆರೋಪಿಯನ್ನು ಬಂಧನ ಮಾಡಿದ್ದಾರೆ. ವಿಡಿಯೋದಲ್ಲಿ ಮಕ್ಕಳ ಮೇಲೆ ಕ್ರೌರ್ಯ ಎಸಗುತ್ತಿದ್ದ ಆರೋಪಿ ಮಹಿಳೆಯನ್ನು ವಿಜಯಲಕ್ಷ್ಮಿ ಎಂದು ಗುರುತಿಸಲಾಗಿದ್ದು, ಆಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಮಹಿಳೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಬಾಲಾಪರಾಧ ನ್ಯಾಯ ಕಾಯ್ದೆ (JJ Act) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಚುರುಕಿನಿಂದ ಸಾಗಿದೆ.

ವಾಷಿಂಗ್‌ ಮೆಷಿನ್‌ನಲ್ಲಿ ಕೂರಿಸಿ ನೀರು ಸ್ಪ್ರೇ

ಸಾಮಾಜಿಕ ಜಾಲತಾಣಗಳಲ್ಲಿ ಈ ಡೇ-ಕೇರ್‌ನ ವಿಡಿಯೋಗಳು ಹರಿದಾಡುತ್ತಿದ್ದಂತೆ ಇಡೀ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಸಲ್ಲಿಕೆಯಾಗಿರುವ ವಿಡಿಯೋ ತುಣುಕುಗಳಲ್ಲಿ ಮಕ್ಕಳ ಮೇಲಿನ ಕ್ರೌರ್ಯದ ಭೀಕರತೆ ಬಯಲಾಗಿದೆ:

ಕೇವಲ ಎರಡು ವರ್ಷದ ಪುಟ್ಟ ಕಂದಮ್ಮಗಳನ್ನು ವಾಷಿಂಗ್ ಮೆಷಿನ್ ಒಳಗೆ ಕೂರಿಸಿ, ಅವರ ಮೇಲೆ ವಾಟರ್ ಜೆಟ್‌ನಿಂದ ನೀರು ಸ್ಪ್ರೇ ಮಾಡಲಾಗುತ್ತಿತ್ತು. ಅಲ್ಲದೇ ಅಳುತ್ತಿದ್ದ ಪುಟ್ಟ ಮಕ್ಕಳನ್ನು ಬಾತ್‌ರೂಮ್‌ಗಳ ಒಳಗೆ ಹಾಕಿ ಲಾಕ್ ಮಾಡಲಾಗುತ್ತಿತ್ತು. ಮಕ್ಕಳ ಸಹಾಯವಾಣಿ ಮೂಲಕ ದೂರು ಬಂದ ತಕ್ಷಣವೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿದ್ದಾರೆ.

ಸಿಬ್ಬಂದಿಗಳಿಗೆ ನೋಟಿಸ್; ಪೋಷಕರ ವಿಚಾರಣೆ

ಘಟನೆಗೆ ಸಂಬಂಧಿಸಿದಂತೆ ವಿಡಿಯೋದಲ್ಲಿ ಕಂಡುಬಂದಿರುವ ಇತರೆ ಡೇ-ಕೇರ್ ನೌಕರರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ತನಿಖಾಧಿಕಾರಿ ಮುಂದೆ ಹಾಜರಾಗಲು ಸೂಚಿಸಿದ್ದಾರೆ. ಈಗಾಗಲೇ ಗುರುವಾರ ಮೂವರು ಸಿಬ್ಬಂದಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಇದರೊಂದಿಗೆ ತನಿಖೆಯ ಭಾಗವಾಗಿ ಪೊಲೀಸರು ಹಲವಾರು ಪೋಷಕರನ್ನು ಭೇಟಿಯಾಗಿ ಮಾಹಿತಿ ಕಲೆಹಾಕುತ್ತಿದ್ದಾರೆ.

ಕ್ಯಾಪ್‌ಜೆಮಿನಿ ಸಂಸ್ಥೆಯ ಪ್ರತಿಕ್ರಿಯೆ ಏನು?

ಈ ಡೇ-ಕೇರ್ ಸೆಂಟರ್ ಕ್ಯಾಪ್‌ಜೆಮಿನಿ ಕಂಪನಿಯ ಉದ್ಯೋಗಿಗಳ ಮಕ್ಕಳಿಗಾಗಿ ಕ್ಯಾಂಪಸ್ ಒಳಗಡೆಯೇ ಕಾರ್ಯನಿರ್ವಹಿಸುತ್ತಿತ್ತು. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕಂಪನಿ, "ನಮ್ಮ ಉದ್ಯೋಗಿಗಳು ಮತ್ತು ಅವರ ಕುಟುಂಬದ ಆರೋಗ್ಯ ಹಾಗೂ ಸುರಕ್ಷತೆಗೆ ನಮ್ಮ ಮೊದಲ ಆದ್ಯತೆ. ನಾವು ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ" ಎಂದು ತಿಳಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರಸ್ತುತ ಆ ಡೇ-ಕೇರ್ ಸೆಂಟರ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

Read More
Next Story