
ಬೆಂಗಳೂರಲ್ಲಿ ಬಿಳಿ ಬೊಲೆರೋ ಭೀತಿ: ಒಂಟಿ ಹೆಣ್ಣು ಮಕ್ಕಳೇ ಈ ಗ್ಯಾಂಗ್ ಟಾರ್ಗೆಟ್? ಪೋಷಕರಲ್ಲಿ ಹೆಚ್ಚಿದ ಆತಂಕ
ಬೆಂಗಳೂರಿನ ಬನಶಂಕರಿ 2ನೇ ಹಂತದ ಬಡಾವಣೆಯಲ್ಲಿ ಈ ಸಂಶಯಾಸ್ಪದ ಘಟನೆ ಬೆಳಕಿಗೆ ಬಂದಿದೆ. ಶಾಲೆಯಿಂದ ಮರಳಿದ ಬಾಲಕಿಯೊಬ್ಬಳು ತನ್ನ ಮನೆಯ ಗೇಟ್ ತೆರೆಯುತ್ತಿದ್ದ ವೇಳೆ ಅನುಮಾನಾಸ್ಪದ ವ್ಯಕ್ತಿಗಳು ಕಿರುಕುಳ ನೀಡಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಅಪರಾಧ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಇದರ ಬೆನ್ನಲ್ಲೇ ಈಗ ನಗರದ ಜನವಸತಿ ಪ್ರದೇಶಗಳಲ್ಲಿ ಅನುಮಾನಾಸ್ಪದ ಬಿಳಿ ಬೊಲೆರೋ ಕಾರೊಂದು ಓಡಾಡುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ವಿಶೇಷವಾಗಿ ಶಾಲಾ ವಿದ್ಯಾರ್ಥಿನಿಯರು ಹಾಗೂ ಒಂಟಿ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಈ ವಾಹನ ಸಂಚರಿಸುತ್ತಿದೆ ಎಂಬ ಸುದ್ದಿ ಈಗ ನಗರದಾದ್ಯಂತ ಕಾಳ್ಗಿಚ್ಚಿನಂತೆ ಹರಡುತ್ತಿದೆ.
ಬೆಂಗಳೂರಿನ ಬನಶಂಕರಿ 2ನೇ ಹಂತದ ಬಡಾವಣೆಯಲ್ಲಿ ಈ ಸಂಶಯಾಸ್ಪದ ಘಟನೆ ಬೆಳಕಿಗೆ ಬಂದಿದೆ. ಶಾಲೆಯಿಂದ ಮರಳಿದ ಬಾಲಕಿಯೊಬ್ಬಳು ತನ್ನ ಮನೆಯ ಗೇಟ್ ತೆರೆಯುತ್ತಿದ್ದ ಸಂದರ್ಭದಲ್ಲಿ ಬಿಳಿ ಬಣ್ಣದ ಬೊಲೆರೋ ಕಾರೊಂದು ಅವಳ ಹತ್ತಿರ ಬಂದು ನಿಂತಿದೆ. ಕಾರಿನಲ್ಲಿದ್ದ ಅಪರಿಚಿತ ವ್ಯಕ್ತಿಗಳು ಬಾಲಕಿಯನ್ನು ವಿಚಿತ್ರವಾಗಿ ಮಾತನಾಡಿಸಿ ಹತ್ತಿರ ಕರೆಯಲು ಯತ್ನಿಸಿದ್ದಾರೆ. ಈ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಪೋಷಕರ ನಿದ್ದೆಗೆಡಿಸಿವೆ.
ಆಶೀರ್ವಾದದ ಹೆಸರಲ್ಲಿ ಸಂಚು?
ವೈರಲ್ ಆಗಿರುವ ವಿಡಿಯೋ ಹಾಗೂ ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಕಾರಿನಲ್ಲಿರುವ ವ್ಯಕ್ತಿಗಳು ಕಾವಿ ಬಟ್ಟೆ ಧರಿಸಿ, ಹಣೆಗೆ ವಿಭೂತಿ ಹಚ್ಚಿಕೊಂಡು ಸಾಧುಗಳ ವೇಷದಲ್ಲಿ ಕಂಡುಬಂದಿದ್ದಾರೆ. ಬಾಲಕಿಯನ್ನು ಹತ್ತಿರ ಕರೆದ ವ್ಯಕ್ತಿಗಳು, "ಮಗು ಇಲ್ಲಿ ಬಾ, ನಿನಗೆ ಆಶೀರ್ವಾದ ಮಾಡುತ್ತೇವೆ" ಎಂದು ಆಮಿಷ ಒಡ್ಡಿದ್ದಾರೆ ಎನ್ನಲಾಗಿದೆ. ಇವರ ನಡವಳಿಕೆಯಿಂದ ಗಾಬರಿಗೊಂಡ ಬಾಲಕಿ ತಕ್ಷಣ ಕಿರುಚುತ್ತಾ ತನ್ನ ತಂದೆಯನ್ನು ಹೊರಗೆ ಕರೆದಿದ್ದಾಳೆ. ತಂದೆ ಮನೆಯಿಂದ ಹೊರಬರುತ್ತಿದ್ದಂತೆ ಸಂಚುಕೋರರು ಕಾರಿನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ.
ಹೊರ ರಾಜ್ಯದ ನೋಂದಣಿ ಸಂಖ್ಯೆ ಪತ್ತೆ
ಈ ಕಾರ್ಯಾಚರಣೆಗೆ ಬಳಸಲಾಗುತ್ತಿರುವ ಬಿಳಿ ಬೊಲೆರೋ ಕಾರು ಕರ್ನಾಟಕದ್ದಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ವಾಹನದ ಮೇಲೆ ಉತ್ತರ ಪ್ರದೇಶದ (UP) ನೋಂದಣಿ ಸಂಖ್ಯೆ ಇರುವುದು ಸಿಸಿಟಿವಿ ದೃಶ್ಯಗಳಿಂದ ಪತ್ತೆಯಾಗಿದೆ. ಕೇವಲ ಬನಶಂಕರಿ ಮಾತ್ರವಲ್ಲದೆ, ನಗರದ ಜೆ.ಪಿ. ನಗರ, ಜಯನಗರ ಸೇರಿದಂತೆ ಸುತ್ತಮುತ್ತಲಿನ ಪಾರ್ಕ್ ಹಾಗೂ ಶಾಲಾ ವಲಯಗಳಲ್ಲಿ ಈ ಕಾರು ಸಂಶಯಾಸ್ಪದವಾಗಿ ಓಡಾಡುತ್ತಿದೆ ಎಂದು ಅನೇಕ ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡುವ ಮೂಲಕ ತಮ್ಮ ಆತಂಕವನ್ನು ಹಂಚಿಕೊಂಡಿದ್ದಾರೆ.
ಪರೀಕ್ಷಾ ಸಮಯದಲ್ಲಿ ಪೋಷಕರಿಗೆ ಎಚ್ಚರಿಕೆ
ಸದ್ಯ ಶಾಲಾ-ಕಾಲೇಜುಗಳ ವಾರ್ಷಿಕ ಪರೀಕ್ಷೆಗಳು ಮುಕ್ತಾಯದ ಹಂತದಲ್ಲಿದ್ದು, ಮಕ್ಕಳು ಹೆಚ್ಚಿನ ಸಮಯವನ್ನು ಮನೆಯ ಹೊರಗೆ ಆಟವಾಡುವುದರಲ್ಲಿ ಕಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಪರಿಚಿತರು ಆಶೀರ್ವಾದ ಮಾಡುವ ನೆಪದಲ್ಲೋ ಅಥವಾ ವಿಳಾಸ ಕೇಳುವ ನೆಪದಲ್ಲೋ ಮಕ್ಕಳನ್ನು ಮಾತನಾಡಿಸಲು ಬಂದರೆ ಪೋಷಕರು ಮತ್ತು ಮಕ್ಕಳು ಎಚ್ಚರದಿಂದ ಇರಬೇಕಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಅಪರಿಚಿತರನ್ನು ನಂಬಬಾರದು ಮತ್ತು ಸಂಶಯಾಸ್ಪದ ವಾಹನಗಳು ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ವಿನಂತಿಸಲಾಗಿದೆ.
ಕಾನೂನು ಕ್ರಮ ಶುರು
ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ವಿಡಿಯೋ ಸತ್ಯಾಸತ್ಯತೆಯ ಬಗ್ಗೆ ತಾಂತ್ರಿಕ ಪರಿಶೀಲನೆ ನಡೆಸುತ್ತಿದ್ದಾರೆ. ಇದು ಮಕ್ಕಳನ್ನು ಅಪಹರಿಸುವ ಗ್ಯಾಂಗ್ ಅಥವಾ ಸುಲಿಗೆ ಮಾಡುವ ತಂಡವೇ ಎಂಬ ಬಗ್ಗೆ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲದಿದ್ದರೂ, ಜಾಗರೂಕತೆಯಿಂದ ಇರಲು ಸೂಚಿಸಲಾಗಿದೆ.

