
ಜಲಾಶಯದಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ಬೆಳಗಾವಿ: ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರ ದಾರುಣ ಅಂತ್ಯ
ಯಮಕನಮರಡಿ ಸಮೀಪದ ದಾದಬಾನಟ್ಟಿಯ ಆರ್.ಸಿ. ಸೆಂಟರ್ ನಿವಾಸಿಗಳಾದ ಹದಿನಾಲ್ಕು ವರ್ಷದ ಕೃಷ್ಣ ವಿಠ್ಠಲ ಖಾನಾಪುರಿ ಹಾಗೂ ಹದಿಮೂರು ವರ್ಷದ ಪ್ರಜ್ವಲ್ ಗೋಕಾರ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಬೇಸಿಗೆ ರಜೆಯ ಮಜಾ ಅನುಭವಿಸಲು ತೆರಳಿದ್ದ ಇಬ್ಬರು ಬಾಲಕರು ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಹಳೆ ಗುಡಗನಟ್ಟಿ ಗ್ರಾಮದ ಬಳಿ ಸೋಮವಾರ ನಡೆದಿದೆ. ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಎಳೆಯ ಜೀವಗಳು ಅಕಾಲಿಕವಾಗಿ ನೀರುಪಾಲಾಗಿದ್ದು, ಮಕ್ಕಳ ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ.
ಯಮಕನಮರಡಿ ಸಮೀಪದ ದಾದಬಾನಟ್ಟಿಯ ಆರ್.ಸಿ. ಸೆಂಟರ್ ನಿವಾಸಿಗಳಾದ ಹದಿನಾಲ್ಕು ವರ್ಷದ ಕೃಷ್ಣ ವಿಠ್ಠಲ ಖಾನಾಪುರಿ ಹಾಗೂ ಹದಿಮೂರು ವರ್ಷದ ಪ್ರಜ್ವಲ್ ಗೋಕಾರ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಒಟ್ಟು ಐವರು ಸ್ನೇಹಿತರ ಗುಂಪು ಸೇರಿಕೊಂಡು ಹಿನ್ನೀರಿನಲ್ಲಿ ಆಟವಾಡಲು ಹೋಗಿದ್ದರು. ಈ ವೇಳೆ ನೀರಿಗೆ ಇಳಿದು ಆಟವಾಡುತ್ತಿದ್ದ ಕೃಷ್ಣ ಹಾಗೂ ಪ್ರಜ್ವಲ್ ಆಳದ ಅರಿವಿಲ್ಲದೆ ನೀರಿನಲ್ಲಿ ಮುಳುಗಿದ್ದಾರೆ. ಅದೃಷ್ಟವಶಾತ್ ಜೊತೆಯಲ್ಲಿದ್ದ ಉಳಿದ ಮೂವರು ಬಾಲಕರು ಪ್ರಾಣಾಪಾಯದಿಂದ ಪಾರಾಗಿದ್ದು, ಮುಳುಗಿದ ಸ್ನೇಹಿತರ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆ ಹಾಗೂ ಮೃತದೇಹಗಳ ಪತ್ತೆ
ದುರ್ಘಟನೆಯ ಮಾಹಿತಿ ತಿಳಿದ ತಕ್ಷಣವೇ ಯಮಕನಮರಡಿ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಗ್ರಾಮಸ್ಥರ ಸತತ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ, ಇಬ್ಬರೂ ಬಾಲಕರ ಮೃತದೇಹಗಳನ್ನು ನೀರಿನಿಂದ ಹೊರತೆಗೆಯುವಲ್ಲಿ ಯಶಸ್ವಿಯಾದರು. ರಜೆಯ ಖುಷಿಯಲ್ಲಿ ಆಟವಾಡಲು ಹೋದ ಮಕ್ಕಳು ಶವವಾಗಿ ಮನೆಗೆ ಮರಳಿರುವುದು ಇಡೀ ಗ್ರಾಮದಲ್ಲಿ ಶೋಕದ ಮಡುವು ಸೃಷ್ಟಿಸಿದೆ.

