
ಟಿಡಿಆರ್ ಹಗರಣ : ವ್ಯಾಲ್ಮಾರ್ಕ್ ಸೇರಿ 19 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ
ಟಿಡಿಆರ್ ಮೌಲ್ಯವನ್ನು ಹೆಚ್ಚಿಸಲು, ಖಾಲಿ ಇರುವ ಜಮೀನಿನಲ್ಲಿ ಕಟ್ಟಡಗಳಿವೆ ಎಂದು ಸುಳ್ಳು ವರದಿ ಸೃಷ್ಟಿಸಲಾಯಿತು. ಸುಮಾರು 1.26 ಕೋಟಿ ರೂ.ಮೌಲ್ಯದ ಕಟ್ಟಡಕ್ಕೆ ಅಕ್ರಮವಾಗಿ ಟಿಡಿಆರ್ ಪ್ರಮಾಣಪತ್ರ ಪಡೆಯಲಾಯಿತು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬರುವ ಮುನ್ನ ಜಾರಿಯಲ್ಲಿದ್ದ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ನಡೆದ ಬಹುಕೋಟಿ ರೂ. ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳ (ಟಿಡಿಆರ್) ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮಹತ್ವದ ಕ್ರಮ ಕೈಗೊಂಡಿದೆ.
ಹಗರಣದಲ್ಲಿ ಭಾಗಿಯಾದ ಪ್ರಮುಖ ಕಂಪನಿ 'ಮೆಸರ್ಸ್ ವ್ಯಾಲ್ಮಾರ್ಕ್ ರಿಯಾಲ್ಟಿ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್' ಸೇರಿದಂತೆ ಒಟ್ಟು 19 ಆರೋಪಿಗಳ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಈ ಹಗರಣವು ನಗರದ ಮೂಲಸೌಕರ್ಯ ಅಭಿವೃದ್ಧಿಯ ಹೆಸರಿನಲ್ಲಿ ನಡೆದ ದೊಡ್ಡ ಮಟ್ಟದ ಆರ್ಥಿಕ ವಂಚನೆಯಾಗಿದೆ.
ಜಾರಿ ನಿರ್ದೇಶನಾಲಯವು ವ್ಯಾಲ್ಮಾರ್ಕ್ ಕಂಪನಿಯ ಕಚೇರಿ ಸೇರಿದಂತೆ ಒಟ್ಟು 9 ಸ್ಥಳಗಳಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಈ ತನಿಖೆಯಿಂದ ಕೇವಲ ಒಂದು ಜಮೀನು ಮಾತ್ರವಲ್ಲದೆ, ಬಿಬಿಎಂಪಿಯು ರಸ್ತೆ ಅಗಲೀಕರಣಕ್ಕಾಗಿ ಗುರುತಿಸಿದ್ದ ಇನ್ನೂ ಅನೇಕ ಪ್ರದೇಶಗಳಲ್ಲಿ ಇದೇ ಮಾದರಿಯ ಟಿಡಿಆರ್ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಪ್ರಸ್ತುತ ಇಡಿ ಅಧಿಕಾರಿಗಳು ಅಂತಹ ಇತರ ಸೈಟ್‌ಗಳ ಬಗ್ಗೆಯೂ ಆಳವಾದ ತನಿಖೆ ನಡೆಸುತ್ತಿದ್ದಾರೆ.
ಟಿಡಿಆರ್ ಎಂದರೇನು?
ರಸ್ತೆ ಅಗಲೀಕರಣ, ಉದ್ಯಾನವನ ಅಥವಾ ಸಾರ್ವಜನಿಕ ಉದ್ದೇಶಗಳಿಗಾಗಿ ಸರ್ಕಾರವು ಖಾಸಗಿ ವ್ಯಕ್ತಿಗಳ ಜಮೀನನ್ನು ಸ್ವಾಧೀನಪಡಿಸಿಕೊಂಡಾಗ, ಅದಕ್ಕೆ ಪ್ರತಿಯಾಗಿ ಹಣದ ಬದಲು ಅಭಿವೃದ್ಧಿ ಹಕ್ಕುಗಳ ಪ್ರಮಾಣಪತ್ರವನ್ನು ನೀಡುತ್ತದೆ. ಈ ಪ್ರಮಾಣಪತ್ರವನ್ನು ಬಳಸಿಕೊಂಡು ಭೂಮಾಲೀಕರು ತಮ್ಮ ಉಳಿದ ಜಮೀನಿನಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಿಸಬಹುದು ಅಥವಾ ಅದನ್ನು ಬೇರೆಯವರಿಗೆ ಮಾರಾಟ ಮಾಡಬಹುದು. ಈ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಬಳಸಿಕೊಂಡು ಆರೋಪಿಗಳು ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ. ಈ ಹಿಂದೆ ಅಸ್ತಿತ್ವದಲ್ಲಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಖಲಿಸಿದ ಎರಡು ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿ ಅಧಿಕಾರಿಗಳು ಹಣ ವರ್ಗಾವಣೆ ತಡೆ ಕಾಯ್ದೆಯಡಿ ತನಿಖೆಯನ್ನು ಕೈಗೆತ್ತಿಕೊಂಡಿದ್ದರು. ಎಸಿಬಿ ಅಧಿಕಾರಿಗಳು ಸಲ್ಲಿಸಿದ ಚಾರ್ಜ್‌ಶೀಟ್ ಪ್ರಕಾರ, ವ್ಯಾಲ್ಮಾರ್ಕ್ ರಿಯಾಲ್ಟಿ ಕಂಪನಿಯ ನಿರ್ದೇಶಕ ರತನ್ ಲಾತ್, ಮಧ್ಯವರ್ತಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳೊಂದಿಗೆ ಕೈಜೋಡಿಸಿ ಅಕ್ರಮವಾಗಿ ಡಿಆರ್‌ಸಿಗಳನ್ನು ಪಡೆದು, ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ಸರಿಸುಮಾರು 27.68 ಕೋಟಿ ರೂಪಾಯಿಗಳ ಅಕ್ರಮ ಲಾಭ ಗಳಿಸಿದ್ದಾರೆ ಎಂಬುದು ತಿಳಿದುಬಂದಿದೆ.
ಇಡಿ ಅಧಿಕಾರಿಗಳು ತನಿಖೆ ಕೈಗೊಂಡು, ಕೆ. ಸುರೇಶ್, ಕೆ. ಗೌತಮ್ ಮತ್ತು ಬಿ.ಎಸ್. ಸುರೇಂದ್ರನಾಥ್ ಎಂಬ ಮಧ್ಯವರ್ತಿಗಳು ವ್ಯಾಲ್ಮಾರ್ಕ್ ಕಂಪನಿಯೊಂದಿಗೆ ಸೇರಿ ಸಂಚು ರೂಪಿಸಿದ್ದರು. ಕೌದೇನಹಳ್ಳಿಯ ಸರ್ವೆ ನಂಬರ್ 132ರಲ್ಲಿದ್ದ ಜಮೀನು ಈಗಾಗಲೇ ರೆವೆನ್ಯೂ ಲೇಔಟ್ ಆಗಿ ಪರಿವರ್ತನೆಯಾಗಿ, ಮೂರನೇ ವ್ಯಕ್ತಿಗಳಿಗೆ ಮಾರಾಟವಾಗಿತ್ತು. ಆದರೂ, ಈ ಭೂಮಿಯನ್ನು ಕೃಷಿ ಭೂಮಿ ಎಂದು ಸುಳ್ಳು ದಾಖಲೆ ಸೃಷ್ಟಿಸಿ, ರೇವಣ್ಣ ಎಂಬುವವರ ವಾರಸುದಾರರ ಹೆಸರಿಗೆ ಆರ್‌ಟಿಸಿ ಬದಲಾಯಿಸಲಾಯಿತು. ಇಂದಿರಾನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನಕಲಿ ಒಪ್ಪಂದಗಳು ಮತ್ತು ಜನರಲ್ ಪವರ್ ಆಫ್ ಅಟಾರ್ನಿಗಳನ್ನು ಸೃಷ್ಟಿಸಿ ನೋಂದಾಯಿಸಲಾಯಿತು. ಆ ಜಮೀನಿನ ಮೇಲೆ ಯಾವುದೇ ಹಕ್ಕು ಇಲ್ಲದಿದ್ದರೂ, ಬಿಬಿಎಂಪಿಯಿಂದ ಟಿಡಿಆರ್ ಸೌಲಭ್ಯ ಪಡೆಯಲು ಈ ದಾಖಲೆಗಳನ್ನು ಬಳಸಲಾಯಿತು ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.
ಟಿಡಿಆರ್ ಮೌಲ್ಯವನ್ನು ಹೆಚ್ಚಿಸಲು, ಖಾಲಿ ಇರುವ ಜಮೀನಿನಲ್ಲಿ ಕಟ್ಟಡಗಳಿವೆ ಎಂದು ಸುಳ್ಳು ವರದಿ ಸೃಷ್ಟಿಸಲಾಯಿತು. ಪಕ್ಕದ ಸರ್ವೆ ನಂಬರ್‌ನಲ್ಲಿದ್ದ ಕಟ್ಟಡವೊಂದನ್ನು ಈ ವಿವಾದಿತ ಜಮೀನಿನಲ್ಲಿದೆ ಎಂದು ತೋರಿಸಿ, ಸುಮಾರು 1.26 ಕೋಟಿ ರೂಪಾಯಿ ಬೆಲೆ ಬಾಳುವ ಕಟ್ಟಡಕ್ಕೆ ಅಕ್ರಮವಾಗಿ 10,672.14 ಚದರ ಮೀಟರ್‌ಗಳಷ್ಟು ಅಭಿವೃದ್ಧಿ ಹಕ್ಕುಗಳ ಪ್ರಮಾಣಪತ್ರವನ್ನು ಪಡೆಯಲಾಯಿತು. ಪಾಲಿಕೆಯ ಕೆಲವು ಭ್ರಷ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ, ದಾಖಲೆಗಳನ್ನು ಪರಿಶೀಲಿಸದೆ ಸುಳ್ಳು ಮೌಲ್ಯಮಾಪನಕ್ಕೆ ಸಹಿ ಹಾಕುವ ಮೂಲಕ ಈ ವಂಚನೆಗೆ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಬೆಂಬಲ ನೀಡಿದ್ದಾರೆ ಎಂದಿದ್ದಾರೆ.
ಅಕ್ರಮ ವರ್ಗಾವಣೆ
ಅಕ್ರಮವಾಗಿ ಪಡೆದ ಟಿಡಿಆರ್ ಪ್ರಮಾಣಪತ್ರಗಳನ್ನು ರಿಯಲ್ ಎಸ್ಟೇಟ್ ಕಂಪನಿಗಳು ಮತ್ತು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲಾಯಿತು. ಇದರಿಂದ ಬಂದ ಹಣವನ್ನು ನೇರವಾಗಿ ಬಳಸದೆ, ತನಿಖೆಯಿಂದ ತಪ್ಪಿಸಿಕೊಳ್ಳಲು ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಯಿತು. ಈ ಹಣವನ್ನು ಅಂತಿಮವಾಗಿ ರಿಯಲ್ ಎಸ್ಟೇಟ್ ಹೂಡಿಕೆಗಳು ಮತ್ತು ದಿನನಿತ್ಯದ ವ್ಯವಹಾರದ ವೆಚ್ಚಗಳಿಗಾಗಿ ಬಳಸಿಕೊಳ್ಳುವ ಮೂಲಕ ಅದನ್ನು ಕಾನೂನು ಕ್ರಮವಾದ ಹಣ ಎಂದು ಬಿಂಬಿಸಲು ಪ್ರಯತ್ನಿಸಲಾಯಿತು. ಆದರೆ ಇಡಿ ತನಿಖೆಯು ಈ ಹಣದ ಹರಿವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.
ಈ ಹಗರಣದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಅಲ್ಲದೇ, ಬೆಂಗಳೂರಿನ ನೈಜ ಭೂಮಾಲೀಕರಿಗೂ ಅನ್ಯಾಯವಾಗಿದೆ. ಸಾರ್ವಜನಿಕ ಉದ್ದೇಶಕ್ಕಾಗಿ ಜಮೀನು ನೀಡಿದ ಪ್ರಾಮಾಣಿಕ ಜನರಿಗೆ ಸಿಗಬೇಕಾದ ಸೌಲಭ್ಯಗಳನ್ನು ಇಂತಹ ಭೂಮಾಫಿಯಾ ಮತ್ತು ಭ್ರಷ್ಟ ಅಧಿಕಾರಿಗಳ ಕೂಟ ಲೂಟಿ ಮಾಡುತ್ತಿದೆ. ಅಕ್ರಮವಾಗಿ ಟಿಡಿಆರ್ ಪಡೆದಿದ್ದರಿಂದ ನಗರದ ಯೋಜಿತ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.

