
ಸಾಂದರ್ಭಿಕ ಚಿತ್ರ
ಪತಿಯೊಡನೆ ಜಗಳ: 4 ವರ್ಷದ ಮಗುವಿಗೆ ಬೆಂಕಿ ಹಚ್ಚಿ, ತಾನೂ ಆತ್ಮಹತ್ಯೆಗೆ ಶರಣಾದ ತಾಯಿ
ಸೀತಾಲಕ್ಷ್ಮಿ ಮೃತ ದುರ್ದೈವಿ ತಾಯಿ. ಇವರು ತಮ್ಮ ನಾಲ್ಕು ವರ್ಷದ ಮಗಳೊಂದಿಗೆ ಸಂಜಯನಗರದಲ್ಲಿ ವಾಸವಾಗಿದ್ದರು. ಗುರುವಾರ ಸಂಜೆ ಸುಮಾರು 7 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ.
ಪತಿಯೊಂದಿಗೆ ಫೋನ್‌ನಲ್ಲಿ ಉಂಟಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಮನನೊಂದ ಗೃಹಿಣಿಯೊಬ್ಬರು ತನ್ನ ನಾಲ್ಕು ವರ್ಷದ ಹೆಣ್ಣು ಮಗುವಿನ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಗರದ ಸಂಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೀತಾಲಕ್ಷ್ಮಿ ಮೃತ ದುರ್ದೈವಿ ತಾಯಿ. ಇವರು ತಮ್ಮ ನಾಲ್ಕು ವರ್ಷದ ಮಗಳೊಂದಿಗೆ ಸಂಜಯನಗರದಲ್ಲಿ ವಾಸವಾಗಿದ್ದರು. ಗುರುವಾರ ಸಂಜೆ ಸುಮಾರು 7 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ.
ಘಟನೆಯ ವಿವರ
ಸೀತಾಲಕ್ಷ್ಮಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪತಿಯೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಇದರಿಂದ ತೀವ್ರವಾಗಿ ನೊಂದ ಅವರು, ಆಕ್ರೋಶದ ಭರದಲ್ಲಿ ಮಗುವಿನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ, ನಂತರ ತಾವೂ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.
ಬೆಂಕಿಯ ಜ್ವಾಲೆ ವ್ಯಾಪಿಸುತ್ತಿದ್ದಂತೆ ಮಗು ಮತ್ತು ತಾಯಿ ಸಹಾಯಕ್ಕಾಗಿ ಕಿರುಚಾಡಿದ್ದಾರೆ. ಚೀರಾಟ ಕೇಳಿ ತಕ್ಷಣವೇ ಧಾವಿಸಿದ ಅಕ್ಕಪಕ್ಕದ ನಿವಾಸಿಗಳು, ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಅಷ್ಟರಲ್ಲಾಗಲೇ ತಾಯಿ-ಮಗು ಇಬ್ಬರೂ ಗಂಭೀರವಾಗಿ ಸುಟ್ಟು ಹೋಗಿದ್ದರು. ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲತಃ ನೇಪಾಳದವರಾದ ಈ ದಂಪತಿ ಕಳೆದ ಏಳು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ಪತಿ ಗೋವಿಂದ್ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಕೆಲ ತಿಂಗಳ ಹಿಂದಷ್ಟೇ ಗೋವಿಂದ್ ತಮ್ಮ ಆರು ವರ್ಷದ ಮಗನನ್ನು ಕರೆದುಕೊಂಡು ನೇಪಾಳಕ್ಕೆ ಮರಳಿದ್ದರು. ಆದರೆ ಸೀತಾಲಕ್ಷ್ಮಿ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದರು.
ದಿನನಿತ್ಯ ಪತಿಗೆ ಕರೆ ಮಾಡುತ್ತಿದ್ದ ಸೀತಾಲಕ್ಷ್ಮಿ, "ಬೆಂಗಳೂರಿಗೆ ಯಾವಾಗ ವಾಪಸ್ ಬರುತ್ತೀರಾ?" ಎಂದು ಕೇಳುತ್ತಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಗುರುವಾರವೂ ಇದೇ ವಿಷಯಕ್ಕೆ ಜಗಳ ನಡೆದು, ಮನನೊಂದ ಸೀತಾಲಕ್ಷ್ಮಿ ಈ ಕಠಿಣ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸಂಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

