ಮಗನಿಂದ ವೃದ್ಧ ದಂಪತಿ ಹತ್ಯೆ|ಹಣ..ಅಪಮಾನ...ಅಸಂಬದ್ಧ ಮಾತು; ನಿಮ್ಹಾನ್ಸ್‌ ಸೇರಿದ ಆರೋಪಿ
x
ಆರೋಪಿ ರೋಹನ್‌

ಮಗನಿಂದ ವೃದ್ಧ ದಂಪತಿ ಹತ್ಯೆ|ಹಣ..ಅಪಮಾನ...ಅಸಂಬದ್ಧ ಮಾತು; ನಿಮ್ಹಾನ್ಸ್‌ ಸೇರಿದ ಆರೋಪಿ

ಆರೋಪಿಯು ʼನಾನು ಕೊಲೆ ಮಾಡಿಲ್ಲ, ನನಗೇನೂ ಗೊತ್ತಿಲ್ಲʼ ಎಂದು ಒಮ್ಮೆ ಹೇಳಿದರೆ, ಮತ್ತೊಮ್ಮೆʼಪೋಷಕರು ಹೀಯಾಳಿಸಿದರು, ಹಾಲಿನಲ್ಲಿ ನಿದ್ರೆ ಮಾತ್ರೆ ಬೆರೆಸುತ್ತಿದ್ದರು ಎಂಬ ಹೇಳಿಕೆ ನೀಡಿದ್ದಾನೆ.


ರಾಜಧಾನಿಯ ವಿಜ್ಞಾನನಗರದಲ್ಲಿ ವೃದ್ಧ ಪೋಷಕರನ್ನು ಭೀಕರವಾಗಿ ಹತ್ಯೆಗೈದ ಪ್ರಕರಣದ ಆರೋಪಿ, 40 ವರ್ಷದ ರೋಹನ್ ಚಂದ್ರ ಭಟ್‌ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಆರೋಪಿಯು ತನಿಖೆಯ ವೇಳೆ ಅಸಂಬದ್ಧವಾಗಿ ಮಾತನಾಡುತ್ತಿದ್ದು, ಕ್ಷಣಕ್ಕೊಂದು ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಆತನ ಮಾನಸಿಕ ಸ್ಥಿತಿ ಪರೀಕ್ಷೆಗಾಗಿ ನಿಮ್ಹಾನ್ಸ್ (NIMHANS) ಆಸ್ಪತ್ರೆಗೆ ದಾಖಲಿಸಲಾಗಿದೆ.

ಫೆಬ್ರವರಿ 11ರಂದು ಎಚ್‌ಎಎಲ್ ಸಮೀಪದ ಆದರ್ಶ ವಿಸ್ತಾ ಅಪಾರ್ಟ್‌ಮೆಂಟ್‌ನ ವಿಲ್ಲಾದಲ್ಲಿ ಈ ಘೋರ ದುರಂತ ನಡೆದಿತ್ತು. ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ನವೀನ್ ಚಂದ್ರ ಭಟ್ (65) ಮತ್ತು ಅವರ ಪತ್ನಿ, ದಂತ ವೈದ್ಯೆ ಡಾ. ಶ್ಯಾಮಲಾ ಭಟ್ (60) ಅವರನ್ನು ಅವರ ಸ್ವಂತ ಮಗನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ.

ಕೊಲೆಗೆ ಕಾರಣವೇನು?

ಪ್ರಾಥಮಿಕ ತನಿಖೆಯ ಪ್ರಕಾರ, ಅಮೆರಿಕದಲ್ಲಿ ಬಿ.ಇ. ಪದವಿ ಪಡೆದಿದ್ದ ರೋಹನ್, ಸಾಫ್ಟ್‌ವೇರ್ ಕೆಲಸ ಬಿಟ್ಟು ಮನೆಯಲ್ಲೇ ಇದ್ದ. ಹೊಸದೊಂದು ಪ್ರಾಜೆಕ್ಟ್ ಆರಂಭಿಸಲು ಪೋಷಕರ ಬಳಿ 4 ಲಕ್ಷ ರೂಪಾಯಿ ಕೇಳಿದ್ದ. ಆದರೆ, ಹಣ ನೀಡಲು ನಿರಾಕರಿಸಿದ್ದಲ್ಲದೆ, ಅಮೆರಿಕದಲ್ಲಿರುವ ತಂಗಿಯನ್ನು ಹೋಲಿಸಿ "ಕೆಲಸವಿಲ್ಲದೆ ಅಲೆಯುತ್ತಿದ್ದೀಯಾ, ನಿನಗೆ ಜವಾಬ್ದಾರಿಯಿಲ್ಲ" ಎಂದು ನಿಂದಿಸಿದ್ದೇ ಕೊಲೆಗೆ ಪ್ರೇರಣೆಯಾಗಿದೆ ಎನ್ನಲಾಗಿದೆ.

ಆರೋಪಿಯ ಅಸಂಬದ್ಧ ವರ್ತನೆ

ಆರೋಪಿ ರೋಹನ್ ಚಂದ್ರನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕ್ಷಣಕ್ಕೊಂದು ಹೇಳಿಕೆ ನೀಡುವ ಮೂಲಕ ತನಿಖಾಧಿಕಾರಿಗಳನ್ನೇ ಗೊಂದಲಕ್ಕೆ ದೂಡಿದ್ದಾನೆ.

ʼನಾನು ಕೊಲೆ ಮಾಡಿಲ್ಲ, ನನಗೇನೂ ಗೊತ್ತಿಲ್ಲʼ ಎಂದು ಒಮ್ಮೆ ಹೇಳಿದರೆ, ಮತ್ತೊಮ್ಮೆʼಪೋಷಕರು ನನ್ನನ್ನು ಹೀಯಾಳಿಸುತ್ತಿದ್ದರು, ಹಣ ಕೊಡಲಿಲ್ಲ. ನನ್ನ ತಾಯಿ ಹಾಲಿನಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಡುತ್ತಿದ್ದರು. ಕೆಲಸದವರ ಮುಂದೆಯೂ ತಂದೆ ನನ್ನನ್ನು ಬೈಯುತ್ತಿದ್ದರು. ಹಾಗಾಗಿಯೇ ಕೊಲೆ ಮಾಡಿದೆ” ಎಂದು ತಪ್ಪೊಪ್ಪಿಕೊಂಡಿದ್ದಾನೆ.

“ಆರೋಪಿಯು ಕ್ಷಣಕ್ಕೊಂದು ಹೇಳಿಕೆ ನೀಡುತ್ತಾ ಅಸಹಜವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಆತನನ್ನು ಆತನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು” ಎಂದು ಎಚ್‌ಎಎಲ್ ಠಾಣೆಯ ಮೂಲಗಳು ತಿಳಿಸಿವೆ.

ಪೊಲೀಸರು ಸದ್ಯ ರೋಹನ್ ಚಂದ್ರ ಭಟ್ ಬ್ಯಾಂಕ್ ದಾಖಲೆಗಳು ಮತ್ತು ಮೊಬೈಲ್ ಸಂಭಾಷಣೆ ಕುರಿತು ಜಾಲಾಡುತ್ತಿದ್ದು, ಕೊಲೆಗೆ ಬೇರೆ ಕಾರಣ ಏನಿರಬಹುದು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮಗನಿಂದಲೇ ಹತ್ಯೆಗೀಡಾದ ನೌಕಾಪಡೆಯ ನಿವೃತ್ತ ನೌಕರ ನವೀನ್ ಚಂದ್ರ ಭಟ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಆರು ವರ್ಷದ ಹಿಂದೆ ನೌಕಾಪಡೆಯಿಂದ ನಿವೃತ್ತಿಯಾಗಿದ್ದರು.

ಮನಶಾಸ್ತ್ರಜ್ಞರು ಹೇಳುವುದೇನು?

ಶಿವಮೊಗ್ಗದ ಮನಶಾಸ್ತ್ರಜ್ಞೆ ಡಾ. ಕಲ್ಪನಾ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ಪ್ರತಿಕ್ರಿಯಿಸಿ, "ಒಬ್ಬ ವ್ಯಕ್ತಿ ಏಕಾಏಕಿ ಇಂತಹ ಕೃತ್ಯ ಎಸಗುವುದಿಲ್ಲ. ಕೆಲಸ ಕಳೆದುಕೊಂಡ ಹತಾಶೆ ಮತ್ತು ಪೋಷಕರ ನಿರಂತರ ಹೋಲಿಕೆ ಅಥವಾ ನಿಂದನೆ ಖಿನ್ನತೆಗೆ ಕಾರಣವಾಗಿರಬಹುದು. ಸಂವಹನದ ಕೊರತೆಯೇ ಈ ದುರಂತಕ್ಕೆ ಪ್ರಮುಖ ಕಾರಣ," ಎಂದು ವಿಶ್ಲೇಷಿಸಿದ್ದಾರೆ.

ಮೂಲತಃ ದಕ್ಷಿಣ ಕನ್ನಡದವರಾದ ನವೀನ್ ಚಂದ್ರ ಭಟ್ ಅವರು ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದರು. ಆರೋಪಿ ರೋಹನ್, ಈ ಹಿಂದೆ ಹಣದ ವಿಷಯಕ್ಕೆ ಜಗಳವಾಡಿ ಮನೆ ಬಿಟ್ಟು ಹೋಗಿದ್ದವನು, 15 ದಿನಗಳ ಹಿಂದಷ್ಟೇ ವಾಪಸ್ ಬಂದಿದ್ದ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಆತನ ಬ್ಯಾಂಕ್ ದಾಖಲೆ ಮತ್ತು ಮೊಬೈಲ್ ಕರೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

Read More
Next Story