ಬೆಂಗಳೂರಲ್ಲಿ ಸಿಸಿಬಿ ಭರ್ಜರಿ ಬೇಟೆ: ಅಕ್ರಮವಾಗಿ ನೆಲೆಸಿದ್ದ 272 ವಿದೇಶಿ ಪ್ರಜೆಗಳ ಗಡಿಪಾರು
x

ಎಐ ಆಧಾರಿತ ಚಿತ್ರ 

ಬೆಂಗಳೂರಲ್ಲಿ ಸಿಸಿಬಿ ಭರ್ಜರಿ ಬೇಟೆ: ಅಕ್ರಮವಾಗಿ ನೆಲೆಸಿದ್ದ 272 ವಿದೇಶಿ ಪ್ರಜೆಗಳ ಗಡಿಪಾರು

ಗಡಿಪಾರು ಮಾಡಿದವರಲ್ಲಿ 168 ಪುರುಷರು, 94 ಮಹಿಳೆಯರು, 12 ಮಕ್ಕಳು ಸೇರಿದ್ದಾರೆ. ಗಡಿಪಾರು ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಎಲ್ಲರನ್ನು ಅವರವರ ದೇಶಗಳಿಗೆ ಮರಳುವಂತೆ ವ್ಯವಸ್ಥೆ ಮಾಡಲಾಗಿದೆ.


Click the Play button to hear this message in audio format

ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆಗಳ ಕೇಂದ್ರವಾಗಿರುವ ಸಿಲಿಕಾನ್ ಸಿಟಿಯಲ್ಲಿ ವೀಸಾ ಅವಧಿ ಮುಗಿದರೂ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಅಕ್ರಮವಾಗಿ ನೆಲೆಸಿದ್ದ ಬರೋಬ್ಬರಿ 272 ವಿದೇಶಿ ಪ್ರಜೆಗಳನ್ನು ಸಿಸಿಬಿ (CCB) ಪೊಲೀಸರು ಪತ್ತೆಹಚ್ಚಿ, ಅವರ ಸ್ವದೇಶಕ್ಕೆ ಗಡಿಪಾರು ಮಾಡಿದ್ದಾರೆ.

ರಾಷ್ಟ್ರೀಯ ಭದ್ರತೆ ಹಾಗೂ ನಗರದ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರದ ಕಟ್ಟುನಿಟ್ಟಿನ ಆದೇಶದ ಮೇರೆಗೆ ಸಿಸಿಬಿ ಪೊಲೀಸರು ಮಾರ್ಚ್ 18 ರಿಂದ ಏಪ್ರಿಲ್ 4 ರವರೆಗೆ ಈ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದರು. ಹಗಲಿರುಳು ನಗರದ ವಿವಿಧ ಮೂಲೆಗಳಲ್ಲಿ ಸಮೀಕ್ಷೆ ನಡೆಸಿದ ಪೊಲೀಸರು ಬಾಂಗ್ಲಾದೇಶ, ನೈಜೀರಿಯಾ, ಉಗಾಂಡಾ ಮತ್ತು ರವಾಂಡ ದೇಶಗಳಿಗೆ ಸೇರಿದ 272 ಮಂದಿಯನ್ನು ವಶಕ್ಕೆ ಪಡೆದಿದ್ದರು. ಇದರಲ್ಲಿ 168 ಪುರುಷರು, 94 ಮಹಿಳೆಯರು ಹಾಗೂ 12 ಮಕ್ಕಳಿದ್ದು, ಎಲ್ಲರನ್ನೂ ಕಾನೂನುಬದ್ಧ ಪ್ರಕ್ರಿಯೆಗಳ ಮೂಲಕ ಅವರವರ ದೇಶಗಳಿಗೆ ಗಡಿಪಾರು ಮಾಡಲಾಗಿದೆ.

ಎಲ್ಲೆಲ್ಲಿ ನೆಲೆಸಿದ್ದರು ಈ ಅಕ್ರಮ ವಲಸಿಗರು?

ಅಕ್ರಮ ವಲಸಿಗರು ಹೆಚ್ಚಾಗಿ ನಗರದ ಹೊರವಲಯದ ಹಾಗೂ ಜನದಟ್ಟಣೆ ಇರುವ ಪ್ರದೇಶಗಳಾದ ಚನ್ನಸಂದ್ರ, ಕೆಂಗೇರಿ, ಬೊಮ್ಮನಹಳ್ಳಿ, ಅತ್ತಿಬೆಲೆ ಮುಂತಾದ ಕಡೆ ಬಾಡಿಗೆ ಮನೆಗಳಲ್ಲಿ ಆಶ್ರಯ ಪಡೆದಿದ್ದರು. ಸ್ಥಳೀಯರೊಂದಿಗೆ ಬೆರೆತುಹೋಗುವ ತಂತ್ರಗಾರಿಕೆ ಹೊಂದಿದ್ದ ಇವರು, ಬಹುತೇಕ ಕಟ್ಟಡ ಕಾರ್ಮಿಕರಾಗಿ, ದಿನಗೂಲಿಗಳಾಗಿ ಹಾಗೂ ಮನೆಗೆಲಸದವರಾಗಿ ದುಡಿಯುತ್ತಿದ್ದರು. ಕಡಿಮೆ ಕೂಲಿಗೆ ಸಿಗುತ್ತಾರೆಂಬ ಕಾರಣಕ್ಕೆ ಸ್ಥಳೀಯರು ಇವರಿಗೆ ಕೆಲಸ ನೀಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ.

ಬಯಲಾಯ್ತು ತ್ರಿವಳಿ 'ಟೇಕೆದಾರ'ರ ವ್ಯವಸ್ಥಿತ ಜಾಲ!

ಈ ಭರ್ಜರಿ ಕಾರ್ಯಾಚರಣೆಯ ವೇಳೆ ವಿದೇಶಿಗರನ್ನು ಅಕ್ರಮವಾಗಿ ಭಾರತಕ್ಕೆ ನುಗ್ಗಿಸುವ 'ಟೇಕೆದಾರ'ರ (ಏಜೆಂಟರ) ಬೃಹತ್ ಜಾಲವೊಂದು ಬಯಲಾಗಿದೆ. ಈ ಜಾಲವು ಮೂರು ಹಂತಗಳಲ್ಲಿ ಕೆಲಸ ಮಾಡುತ್ತಿತ್ತು: ಬಾಂಗ್ಲಾದೇಶದಂತಹ ದೇಶಗಳಲ್ಲಿರುವ ಏಜೆಂಟರು ಭಾರತಕ್ಕೆ ಬರಬಯಸುವವರನ್ನು ಗುರುತಿಸಿ, ಹಣ ಪಡೆದು ಗಡಿಯವರೆಗೆ ಕರೆತರುತ್ತಿದ್ದರು. ಗಡಿ ಭಾಗದಲ್ಲಿರುವ ಏಜೆಂಟರು ಭದ್ರತಾ ಪಡೆಯ ಕಣ್ಣುತಪ್ಪಿಸಿ, ಕಾಲುದಾರಿಗಳ ಮೂಲಕ ಅಕ್ರಮವಾಗಿ ಭಾರತದ ಒಳಗೆ ನುಗ್ಗಿಸುತ್ತಿದ್ದರು. ಬೆಂಗಳೂರಿನಲ್ಲಿರುವ ಏಜೆಂಟರು ಇವರಿಗೆ ಬಾಡಿಗೆ ಮನೆ, ನಕಲಿ ಆಧಾರ್ ಕಾರ್ಡ್‌ಗಳು ಹಾಗೂ ಕೆಲಸಗಳನ್ನು ಒದಗಿಸುತ್ತಿದ್ದರು. ಸದ್ಯ ಬೆಂಗಳೂರಿನಲ್ಲಿ ಸಕ್ರಿಯರಾಗಿದ್ದ ಇಬ್ಬರು ಪ್ರಮುಖ ಟೇಕೆದಾರರನ್ನು ಸಿಸಿಬಿ ಬಂಧಿಸಿದ್ದು, ವಿಚಾರಣೆ ತೀವ್ರಗೊಳಿಸಿದೆ.

ಮಾದಕ ವಸ್ತು, ಸೈಬರ್ ಕ್ರೈಮ್ ಭೀತಿ

ಮೊಬೈಲ್ ಲೊಕೇಶನ್, ಗಡಿ ಭಾಗದ ಸಂಪರ್ಕ ಜಾಲ ಹಾಗೂ ಸ್ಥಳೀಯರ ಮಾಹಿತಿಯನ್ನು ಆಧರಿಸಿ ಸಿಸಿಬಿ ಈ ಕಾರ್ಯಾಚರಣೆ ನಡೆಸಿದೆ. ಶಿಕ್ಷಣ ಅಥವಾ ವೈದ್ಯಕೀಯ ವೀಸಾದಡಿ ಬಂದು ಬಳಿಕ ಇಲ್ಲೇ ಉಳಿದುಕೊಂಡಿದ್ದವರೇ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಂತಹ ಅಕ್ರಮ ವಲಸಿಗರಿಂದ ಮಾದಕ ವಸ್ತು ಮಾರಾಟ ಹಾಗೂ ಸೈಬರ್ ಅಪರಾಧಗಳಂತಹ ಕೃತ್ಯಗಳು ಹೆಚ್ಚಾಗುವ ಸಾಧ್ಯತೆಯಿರುವುದರಿಂದ, ಸಿಸಿಬಿಯ ಈ ಗಡಿಪಾರು ಕ್ರಮ ನಗರದ ಕಾನೂನು-ಸುವ್ಯವಸ್ಥೆ ಕಾಪಾಡುವಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಮನೆ ಮಾಲೀಕರಿಗೆ ಪೊಲೀಸರ ಎಚ್ಚರಿಕೆ

ವಿದೇಶಿ ಪ್ರಜೆಗಳಿಗೆ ಅಥವಾ ಅಪರಿಚಿತರಿಗೆ ಮನೆ ಬಾಡಿಗೆಗೆ ನೀಡುವ ಮುನ್ನ ಅವರ ಪೂರ್ವಾಪರ, ಪಾಸ್‌ಪೋರ್ಟ್ ಮತ್ತು ವೀಸಾದ ಅಸಲಿಯತ್ತೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅಕ್ರಮ ವಲಸಿಗರಿಗೆ ಆಶ್ರಯ ನೀಡುವುದು ಕೂಡ ಕಾನೂನಿನ ಪ್ರಕಾರ ಗಂಭೀರ ಅಪರಾಧವಾಗಿದೆ ಎಂದು ಸಾರ್ವಜನಿಕರಿಗೆ ಕಿವಿಮಾತು ಹೇಳಿದ್ದಾರೆ.

Read More
Next Story