
ಬಳ್ಳಾರಿ: ವಸತಿ ಶಾಲೆಯಲ್ಲಿ ಸಹಪಾಠಿಗಳ ಮೇಲೆ ವಿದ್ಯಾರ್ಥಿಯಿಂದ ದಾಳಿ; ಬಾಲಕ ಬಲಿ
ಆಂಧ್ರಪ್ರದೇಶದ ಅದವಾನಿ ಮೂಲದ ಹೇಮಂತ್ (14) ಮೃತಪಟ್ಟ ದುರ್ದೈವಿ ಬಾಲಕ. ಶನಿವಾರ ರಾತ್ರಿ ಎಂದಿನಂತೆ ಊಟ ಮುಗಿಸಿ ವಿದ್ಯಾರ್ಥಿಗಳು ಹಾಸ್ಟೆಲ್ ಕೊಠಡಿಯಲ್ಲಿ ನಿದ್ರಿಸುತ್ತಿದ್ದಾಗ ಈ ಕೃತ್ಯ ನಡೆದಿದೆ ಎನ್ನಲಾಗಿದೆ.
ನಗರದ ಪ್ರತಿಷ್ಠಿತ "ಗುರುಕುಲ ವಸತಿ ಶಾಲೆ"ಯಲ್ಲಿ ಶನಿವಾರ ತಡರಾತ್ರಿ ಭೀಕರ ಘಟನೆಯೊಂದು ನಡೆದಿದ್ದು, ವಿದ್ಯಾರ್ಥಿಯೊಬ್ಬ ತನ್ನದೇ ಸಹಪಾಠಿಗಳ ಮೇಲೆ ಅಮಾನವೀಯವಾಗಿ ದಾಳಿ ನಡೆಸಿದ್ದಾನೆ. ಈ ಘಟನೆಯಲ್ಲಿ ಒಂಬತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ದಾಳಿಯಲ್ಲಿ ಗಾಯಗೊಂಡಿರುವ ಇತರ ಆರು ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆಂಧ್ರಪ್ರದೇಶದ ಅದವಾನಿ ಮೂಲದ ಹೇಮಂತ್ (14) ಮೃತಪಟ್ಟ ದುರ್ದೈವಿ ಬಾಲಕ. ಶನಿವಾರ ರಾತ್ರಿ ಎಂದಿನಂತೆ ಊಟ ಮುಗಿಸಿ ವಿದ್ಯಾರ್ಥಿಗಳು ಹಾಸ್ಟೆಲ್ ಕೊಠಡಿಯಲ್ಲಿ ನಿದ್ರಿಸುತ್ತಿದ್ದಾಗ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಆರೋಪಿ ವಿದ್ಯಾರ್ಥಿಯು ಮಂಚದ ಕಬ್ಬಿಣದ ರಾಡ್, ಸ್ಕ್ರೂ ಡ್ರೈವರ್ ಹಾಗೂ ರೇಡಿಯಮ್ ಕಟರ್‌ಗಳನ್ನು ಬಳಸಿ ಏಕಾಏಕಿ ಸಹಪಾಠಿಗಳ ಮೇಲೆರಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಹೇಮಂತ್‌ನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತಾದರೂ, ಅಷ್ಟರಲ್ಲೇ ಆತ ಕೊನೆಯುಸಿರೆಳೆದಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಮ್ಸ್ (VIMS) ಆಸ್ಪತ್ರೆಗೆ ರವಾನಿಸಲಾಗಿದೆ.
ಪೋಷಕರ ಆಕ್ರೋಶ ಮತ್ತು ತನಿಖೆ
ಘಟನೆಯಿಂದ ಆಘಾತಕ್ಕೊಳಗಾಗಿರುವ ಮೃತ ಬಾಲಕನ ತಂದೆ ಲಕ್ಷ್ಮೀಕಾಂತ ಅವರು ಆಸ್ಪತ್ರೆಯ ಬಳಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, "ತಡರಾತ್ರಿ ಹಾಸ್ಟೆಲ್‌ನಿಂದ ಕರೆ ಮಾಡಿ ಮಗನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದರು. ನಾವು ಗಾಬರಿಯಿಂದ ಬಳ್ಳಾರಿಗೆ ಬರುವಷ್ಟರಲ್ಲಿ ಮಗ ಹೆಣವಾಗಿದ್ದ," ಎಂದು ಕಣ್ಣೀರು ಹಾಕಿದ್ದಾರೆ. ವಿದ್ಯಾರ್ಥಿಗಳ ನಡುವಿನ ವೈಯಕ್ತಿಕ ದ್ವೇಷ ಅಥವಾ ಮಾನಸಿಕ ಒತ್ತಡ ಈ ಘಟನೆಗೆ ಕಾರಣವೇ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶಾಲೆ ಮತ್ತು ಹಾಸ್ಟೆಲ್ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

