
ಸೈಬರ್ ವಂಚನೆಗೆ ಸಂಬಂಧಿಸಿದಂತೆ 14,885 ಪ್ರಕರಣಗಳು ದಾಖಲಾಗಿವೆ
ಆ್ಯಪ್‌ನಲ್ಲಿ ಆಟೋ ಬುಕ್ ಮಾಡಿ ಚಾಲಕನಿಗೆ ಚಾಕು ಇರಿದು ದರೋಡೆ; ಸೆರೆ
ಪ್ರಕರಣದ ಜಾಡು ಹಿಡಿದ ಪೊಲೀಸರು, ಮಾರ್ಚ್ 25ರಂದು ಎಚ್‌ಎಸ್‌ಆರ್ ಲೇಔಟ್‌ನ ಹರಳೂರು ಬಳಿಯ 'ನ್ಯೂ ಹೋಪ್ ಫೌಂಡೇಶನ್' ಬಳಿ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಬೆಂಗಳೂರಿನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಂದು ಆಟೋ ಚಾಲಕನಿಗೆ ಚಾಕುವಿನಿಂದ ಇರಿದು, ಆಟೋ ಹಾಗೂ ನಗದು ದೋಚಿದ್ದ ಆರೋಪಿಯನ್ನು ಬಾಗಲೂರು ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತನಿಂದ ಬರೋಬ್ಬರಿ 3.20 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಮಾರ್ಚ್ 1ರಂದು ಬೆಳಿಗ್ಗೆ 10.30ರ ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿಯ ಹುಸ್ಕೂರು ಬಳಿ ಇಬ್ಬರು ಅಪರಿಚಿತರು ರ‍್ಯಾಪಿಡೋ (Rapido) ಆ್ಯಪ್ ಮೂಲಕ ಆಟೋರಿಕ್ಷಾ ಬುಕ್ ಮಾಡಿದ್ದರು. ಆಟೋ ದೇವನಹಳ್ಳಿ ಕಡೆಗೆ ಸಂಚರಿಸುತ್ತಿದ್ದಾಗ, ಜೊನ್ನಹಳ್ಳಿ ಗ್ರಾಮದ ಕೆಐಎಡಿಬಿ ಕೈಗಾರಿಕಾ ಪ್ರದೇಶದ ಮಿಲೇನಿಯಂ ಕಂಪನಿ ಬಳಿಯ ನಿರ್ಜನ ರಸ್ತೆಯಲ್ಲಿ ಇಬ್ಬರೂ ಸೇರಿ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಚಾಲಕನಿಂದ ಎರಡು ಮೊಬೈಲ್, ನಗದು ಹಾಗೂ ಆಟೋವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ರಾಯಸಂದ್ರ ನಿವಾಸಿಯಾದ ಆಟೋ ಚಾಲಕ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕಾರ್ಯಾಚರಣೆ ಮತ್ತು ಬಂಧನ
ಪ್ರಕರಣದ ಜಾಡು ಹಿಡಿದ ಪೊಲೀಸರು, ಮಾರ್ಚ್ 25ರಂದು ಎಚ್‌ಎಸ್‌ಆರ್ ಲೇಔಟ್‌ನ ಹರಳೂರು ಬಳಿಯ 'ನ್ಯೂ ಹೋಪ್ ಫೌಂಡೇಶನ್' (ಪುನರ್ವಸತಿ ಕೇಂದ್ರ) ಬಳಿ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ತನ್ನ ಮತ್ತೊಬ್ಬ ಸಹಚರನೊಂದಿಗೆ ಸೇರಿ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.
3.20 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳ ಜಪ್ತಿ
ಆರೋಪಿಯು ದೋಚಿದ್ದ ಆಟೋರಿಕ್ಷಾವನ್ನು ಮಾಲೂರು ಲೇಔಟ್‌ನ ಖಾಲಿ ನಿವೇಶನವೊಂದರಲ್ಲಿ ನಿಲ್ಲಿಸಿದ್ದ ಹಾಗೂ ಮೊಬೈಲ್‌ಗಳನ್ನು ಮಾಲೂರಿನಲ್ಲಿರುವ ತನ್ನ ಪರಿಚಯಸ್ಥರಿಗೆ ಮಾರಾಟ ಮಾಡಿದ್ದ. ಪೊಲೀಸರು ಏಪ್ರಿಲ್ 1ರೊಳಗೆ ಕಾರ್ಯಾಚರಣೆ ನಡೆಸಿ, ಒಂದು ಆಟೋ ರಿಕ್ಷಾ, ಕಳುವಾಗಿದ್ದ 2 ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 1 ಮೊಬೈಲ್ ಸೇರಿದಂತೆ ಒಟ್ಟು 3,20,000 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

