
ಸುಮಾರು ನಾಲ್ಕು ದಶಕಗಳ ಕಾಲ ಕಾನೂನು ಹೋರಾಟ ನಡೆಸಿದ 100 ವರ್ಷದ ವೃದ್ಧರೊಬ್ಬರನ್ನು ಕೊಲೆ ಆರೋಪದಿಂದ ಮುಕ್ತಗೊಳಿಸಿ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
42 ವರ್ಷಗಳ ನಂತರ ಸಿಕ್ಕ ನ್ಯಾಯ; ಕೊಲೆ ಆರೋಪದಿಂದ 100 ವರ್ಷದ ವೃದ್ಧನಿಗೆ ಮುಕ್ತಿ
1982ರ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ 100 ವರ್ಷದ ವೃದ್ಧನನ್ನು 42 ವರ್ಷಗಳ ನಂತರ ಅಲಹಾಬಾದ್ ಹೈಕೋರ್ಟ್ ದೋಷಮುಕ್ತಗೊಳಿಸಿದೆ.
ಸುಮಾರು ನಾಲ್ಕು ದಶಕಗಳ ಕಾಲ ಕಾನೂನು ಹೋರಾಟ ನಡೆಸಿದ 100 ವರ್ಷದ ವೃದ್ಧರೊಬ್ಬರನ್ನು ಕೊಲೆ ಆರೋಪದಿಂದ ಮುಕ್ತಗೊಳಿಸಿ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 1982ರಲ್ಲಿ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿಯಾಗಿದ್ದ ಧನಿ ರಾಮ್ ಎಂಬುವವರನ್ನು ನ್ಯಾಯಾಲಯ ಈಗ ಖುಲಾಸೆಗೊಳಿಸಿದೆ. ಸುಮಾರು 40 ವರ್ಷಗಳ ಕಾಲ ಮೇಲ್ಮನವಿ ಬಾಕಿ ಉಳಿದಿದ್ದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ವೃದ್ಧಾಪ್ಯ ಮತ್ತು ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಈ ಮಹತ್ವದ ಆದೇಶ ನೀಡಿದೆ.
1982ರ ಆಗಸ್ಟ್ 9ರಂದು ಹಮೀರ್‌ಪುರ ಜಿಲ್ಲೆಯಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗುಣ್ವಾ ಎಂಬುವವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಪ್ರಕರಣದಲ್ಲಿ ಮೈಕು ಎಂಬಾತ ಪ್ರಮುಖ ಆರೋಪಿಯಾಗಿದ್ದರೆ, ಧನಿರಾಮ್ ಮತ್ತು ಸತ್ತಿದೀನ್ ಎಂಬುವವರು ಹಲ್ಲೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದರು. 1984ರಲ್ಲಿ ಹಮೀರ್‌ಪುರದ ಸೆಷನ್ಸ್ ನ್ಯಾಯಾಲಯವು ಧನಿರಾಮ್ ಮತ್ತು ಸತ್ತಿದೀನ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಏನಿದು ಪ್ರಕರಣ
1982ರ ಆಗಸ್ಟ್ 9ರಂದು ಹಮೀರ್‌ಪುರದಲ್ಲಿ ಭೂ ವಿವಾದ ಮತ್ತು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಗುಣ್ವಾ ಎಂಬುವವರನ್ನು ಮೈಕು ಎಂಬಾತ ಗುಂಡಿಕ್ಕಿ ಕೊಂದಿದ್ದನು. ಈ ಘಟನೆಯಲ್ಲಿ ಸತ್ತಿ ದೀನ್ ಮತ್ತು ಧನಿ ರಾಮ್ ಅವರು ಮೈಕುವನ್ನು ಕೊಲೆಗೆ ಪ್ರೇರೇಪಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. 1984ರಲ್ಲಿ ಹಮೀರ್‌ಪುರ ಸೆಷನ್ಸ್ ನ್ಯಾಯಾಲಯವು ಧನಿ ರಾಮ್ ಮತ್ತು ಸತ್ತಿ ದೀನ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ, ಅದೇ ವರ್ಷ ಧನಿ ರಾಮ್ ಅವರಿಗೆ ಜಾಮೀನು ದೊರೆತಿತ್ತು. ಅಂದಿನಿಂದ ಈ ಪ್ರಕರಣದ ಮೇಲ್ಮನವಿ ವಿಚಾರಣೆ ಹೈಕೋರ್ಟ್‌ನಲ್ಲಿ ಬಾಕಿ ಇತ್ತು.
40 ವರ್ಷಗಳ ಸುದೀರ್ಘ ಹೋರಾಟ
ಶಿಕ್ಷೆಯನ್ನು ಪ್ರಶ್ನಿಸಿ ಇಬ್ಬರೂ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಸುದೀರ್ಘ ಅವಧಿಯಲ್ಲಿ ಮತ್ತೊಬ್ಬ ಆರೋಪಿ ಸತ್ತಿದೀನ್ ನಿಧನರಾಗಿದ್ದರು. ಪ್ರಮುಖ ಶೂಟರ್ ಮೈಕು ಎಂಬಾತ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ. ಇದರಿಂದಾಗಿ ಧನಿರಾಮ್ ಒಬ್ಬರೇ ದಶಕಗಳ ಕಾಲ ಕಾನೂನು ಹೋರಾಟ ಮುಂದುವರಿಸಬೇಕಾಯಿತು.
ನ್ಯಾಯಾಧೀಶರಾದ ಚಂದ್ರಧಾರಿ ಸಿಂಗ್ ಮತ್ತು ಸಂಜೀವ್ ಕುಮಾರ್ ಅವರಿದ್ದ ವಿಭಾಗೀಯ ಪೀಠವು ಈ ಸುದೀರ್ಘ ವಿಳಂಬದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಒಬ್ಬ ವ್ಯಕ್ತಿ ತನ್ನ ಜೀವನದ ಸಂಧ್ಯಾಕಾಲದಲ್ಲಿ ನ್ಯಾಯಾಲಯದ ಮುಂದೆ ನಿಂತಾಗ, ದಶಕಗಳ ಕಾಲ ನಡೆದ ಕಾನೂನು ಪ್ರಕ್ರಿಯೆಯ ವಿಳಂಬವು ನ್ಯಾಯದ ಉದ್ದೇಶವನ್ನೇ ಹಳಿ ತಪ್ಪಿಸುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಕಳೆದ 42 ವರ್ಷಗಳಿಂದ ಆರೋಪಿಯು ಅನುಭವಿಸಿದ ಆತಂಕ, ಅನಿಶ್ಚಿತತೆ ಮತ್ತು ಸಾಮಾಜಿಕ ಪರಿಣಾಮಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಖುಲಾಸೆ ಏಕೆ
ಪ್ರಾಸಿಕ್ಯೂಷನ್ ಈ ಪ್ರಕರಣದಲ್ಲಿ ಧನಿ ರಾಮ್ ಅವರ ಮೇಲಿನ ಆರೋಪಗಳನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ವಿಫಲವಾಗಿದೆ ಎಂದು ಹೈಕೋರ್ಟ್ ತಿಳಿಸಿದೆ. ಮುಖ್ಯ ಆರೋಪಿ ಮೈಕು ಇದುವರೆಗೂ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದಾನೆ. ಮತ್ತೊಬ್ಬ ಆರೋಪಿ ಸತ್ತಿ ದೀನ್ ವಿಚಾರಣೆ ಬಾಕಿ ಇರುವಾಗಲೇ ಮೃತಪಟ್ಟಿದ್ದಾರೆ. ಧನಿ ರಾಮ್ ಅವರ ಪಾತ್ರ ಕೇವಲ ಪ್ರಚೋದನೆಗೆ ಸೀಮಿತವಾಗಿತ್ತು ಮತ್ತು ಘಟನಾ ಸ್ಥಳದಲ್ಲಿ ಅವರ ಬಳಿ ಕೊಡಲಿ ಇತ್ತು ಎಂದು ಹೇಳಲಾಗಿದ್ದರೂ, ಮೃತರ ದೇಹದ ಮೇಲೆ ಅಂತಹ ಯಾವುದೇ ಗಾಯಗಳಿರಲಿಲ್ಲ ಎಂಬ ಅಂಶವನ್ನೂ ನ್ಯಾಯಾಲಯ ಗಮನಿಸಿತು. ಈ ಎಲ್ಲಾ ಅಂಶಗಳ ಆಧಾರದ ಮೇಲೆ ಧನಿ ರಾಮ್ ಅವರಿಗೆ 'ಸಂದೇಹದ ಲಾಭ' ನೀಡಿ, ಅವರ ಶಿಕ್ಷೆಯನ್ನು ರದ್ದುಗೊಳಿಸಿ ಬಿಡುಗಡೆಗೆ ಆದೇಶಿಸಲಾಗಿದೆ. ಈ ಮೂಲಕ 42 ವರ್ಷಗಳ ನಂತರ ಧನಿರಾಮ್ ಜೈಲು ವಾಸದ ಆತಂಕದಿಂದ ಮತ್ತು ಕೊಲೆಗಡುಕ ಎಂಬ ಹಣೆಪಟ್ಟಿಯಿಂದ ಮುಕ್ತಿ ಪಡೆದಿದ್ದಾರೆ.

