ಅಜಿತ್ ಪವಾರ್ ವಿಮಾನ ದುರಂತ: ಬೃಹತ್ ಸಂಚಿನ ಆರೋಪ, ಬೆಂಗಳೂರಿನಲ್ಲಿ ಝೀರೋ ಎಫ್‌ಐಆರ್ ದಾಖಲು
x

ಅಜಿತ್ ಪವಾರ್ ವಿಮಾನ ದುರಂತ: ಬೃಹತ್ ಸಂಚಿನ ಆರೋಪ, ಬೆಂಗಳೂರಿನಲ್ಲಿ ಝೀರೋ ಎಫ್‌ಐಆರ್ ದಾಖಲು

ವಿಎಸ್ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಒಡೆತನದ ಬಾಂಬಾರ್ಡಿಯರ್ ಲಿಯರ್ಜೆಟ್ 45 ವಿಮಾನವು ಹಾರಾಟಕ್ಕೆ ಯೋಗ್ಯವಾಗಿರಲಿಲ್ಲ ಎಂಬುದು ದೂರಿನಲ್ಲಿರುವ ಪ್ರಮುಖ ಆರೋಪ.


Click the Play button to hear this message in audio format

ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿಮಾನ ಅಪಘಾತದ ಸಾವು ಆಕಸ್ಮಿಕವಲ್ಲ, ಅದೊಂದು ಬೃಹತ್ ಸಂಚು ಎಂದು ಆರೋಪಿಸಿ ಅವರ ಸೋದರಳಿಯ ರೋಹಿತ್ ರಾಜೇಂದ್ರ ಪವಾರ್ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಝೀರೋ ಎಫ್‌ಐಆರ್ ದಾಖಲಿಸಿದ್ದಾರೆ.

ಮಹಾರಾಷ್ಟ್ರದ ಪೊಲೀಸ್ ಠಾಣೆಗಳು ಈ ಬಗ್ಗೆ ದೂರು ಸ್ವೀಕರಿಸಲು ನಿರಾಕರಿಸಿದ ಕಾರಣ, ಮಾರ್ಚ್ 23ರಂದು ಬೆಂಗಳೂರಿನಲ್ಲಿ ಅಧಿಕೃತವಾಗಿ ದೂರು ನೀಡಲಾಗಿದೆ. ಜನವರಿ 28ರಂದು ಪುಣೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ವಿಮಾನ ದುರಂತದಲ್ಲಿ ಅಜಿತ್ ಪವಾರ್ ಹಾಗೂ ಪೈಲಟ್‌ಗಳು ಸೇರಿದಂತೆ ಒಟ್ಟು ಐವರು ಮೃತಪಟ್ಟಿದ್ದರು.


ವಿಮಾನಯಾನ ಸಂಸ್ಥೆಯ ಗಂಭೀರ ಲೋಪ

ವಿಎಸ್ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಒಡೆತನದ ಬಾಂಬಾರ್ಡಿಯರ್ ಲಿಯರ್ಜೆಟ್ 45 ವಿಮಾನವು ಹಾರಾಟಕ್ಕೆ ಯೋಗ್ಯವಾಗಿರಲಿಲ್ಲ ಎಂಬುದು ದೂರಿನಲ್ಲಿರುವ ಪ್ರಮುಖ ಆರೋಪ. ವಿಮಾನದ ಇಂಜಿನ್ ಸಾಮರ್ಥ್ಯದ ಮಿತಿಯು 5000 ಗಂಟೆಗಳಾಗಿದ್ದು, ಅಧಿಕೃತ ದಾಖಲೆಗಳಲ್ಲಿ ಕೇವಲ 4915 ಗಂಟೆಗಳ ಹಾರಾಟ ನಡೆಸಲಾಗಿದೆ ಎಂದು ಸುಳ್ಳು ಮಾಹಿತಿ ನಮೂದಿಸಲಾಗಿತ್ತು. ಆದರೆ ವಾಸ್ತವದಲ್ಲಿ ಈ ವಿಮಾನವು 8000ಕ್ಕೂ ಹೆಚ್ಚು ಗಂಟೆಗಳ ಕಾಲ ಹಾರಾಟ ನಡೆಸಿತ್ತು ಎನ್ನುವ ಆಘಾತಕಾರಿ ಅಂಶವನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ವಿಮಾನದ ನೋಂದಣಿಗೂ ಒಂದು ವರ್ಷದ ಮುನ್ನವೇ ವಾಯುಯಾನ ಯೋಗ್ಯತಾ ಪ್ರಮಾಣಪತ್ರ ನೀಡಿರುವುದು ಡಿಜಿಸಿಎ (DGCA) ಮಟ್ಟದಲ್ಲೂ ನಡೆದಿರುವ ಭ್ರಷ್ಟಾಚಾರದ ಶಂಕೆಗೆ ಎಡೆಮಾಡಿಕೊಟ್ಟಿದೆ.

ಅನುಮಾನಾಸ್ಪದ ನಡೆ

ವಿಮಾನ ಹಾರಾಟದ ಕೊನೆಯ ಕ್ಷಣದಲ್ಲಿ ಸಿಬ್ಬಂದಿಯನ್ನು ದಿಢೀರನೆ ಬದಲಾಯಿಸಿರುವುದು ಈ ಸಂಚಿನ ಅನುಮಾನವನ್ನು ಮತ್ತಷ್ಟು ಬಲಪಡಿಸಿದೆ. ಪೂರ್ವನಿಗದಿತ ಸಿಬ್ಬಂದಿಯ ಬದಲಿಗೆ, ಮದ್ಯಪಾನದ ಚಟಕ್ಕಾಗಿ ಈ ಹಿಂದೆ ಡಿಜಿಸಿಎಯಿಂದ ಅಮಾನತುಗೊಂಡಿದ್ದ ಸುಮಿತ್ ಕಪೂರ್ ಅವರನ್ನು ಮುಖ್ಯ ಪೈಲಟ್ ಆಗಿ ನೇಮಿಸಲಾಗಿತ್ತು. ಅಲ್ಲದೆ, ವಿಎಸ್ಆರ್ ಸಂಸ್ಥೆಯು ಇತ್ತೀಚೆಗಷ್ಟೇ ಅವರ ಹೆಸರಿನಲ್ಲಿ ಜೀವ ವಿಮೆ ಮಾಡಿಸಿತ್ತು. ಅಪಘಾತದ ಕೊನೆಯ ಕ್ಷಣಗಳಲ್ಲಿ ಸಹ-ಪೈಲಟ್ ಶಾಂಭವಿ ಪಾಠಕ್ ಅವರು ಆತಂಕದಿಂದ ಕೂಗಿಕೊಂಡರೂ, ಮುಖ್ಯ ಪೈಲಟ್ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದರು ಎಂಬುದು ತನಿಖಾ ವರದಿಗಳಿಂದ ಬಯಲಾಗಿದೆ.

ರನ್‌ವೇ ಬದಲಾವಣೆ

ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ದಟ್ಟ ಮಂಜು ಆವರಿಸಿದ್ದರೂ, ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ ಲ್ಯಾಂಡಿಂಗ್‌ಗೆ ಅನುಮತಿ ನೀಡಲಾಗಿತ್ತು. ಕನಿಷ್ಠ ಐದು ಕಿಲೋಮೀಟರ್ ಗೋಚರತೆ ಇರಬೇಕಾದ ನಿಯಮವಿದ್ದರೂ, ಕೇವಲ ಎರಡು ಕಿಲೋಮೀಟರ್‌ಗಳಿಗಿಂತ ಕಡಿಮೆ ಗೋಚರತೆ ಇದ್ದಾಗಲೂ ಪೈಲಟ್ ಲ್ಯಾಂಡಿಂಗ್‌ಗೆ ಮುಂದಾಗಿದ್ದರು. ಇದರ ಜೊತೆಗೆ, ಕೊನೆಯ ನಿಮಿಷದಲ್ಲಿ ಸುರಕ್ಷಿತ ರನ್‌ವೇಯಿಂದ ಅತ್ಯಂತ ಅಪಾಯಕಾರಿ ಟೇಬಲ್‌ಟಾಪ್ ರನ್‌ವೇಗೆ ವಿಮಾನದ ಮಾರ್ಗವನ್ನು ಬದಲಾಯಿಸಿದ್ದು ದುರಂತಕ್ಕೆ ನೇರ ಕಾರಣವಾಗಿದೆ. ಈ ಎಲ್ಲ ಗಂಭೀರ ಲೋಪಗಳನ್ನು ಮುಂದಿಟ್ಟುಕೊಂಡು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಅಡಿ ಉನ್ನತ ಮಟ್ಟದ ಕ್ರಿಮಿನಲ್ ತನಿಖೆ ನಡೆಸಬೇಕೆಂದು ದೂರುದಾರರು ತೀವ್ರವಾಗಿ ಆಗ್ರಹಿಸಿದ್ದಾರೆ.

Read More
Next Story