Darshan Case: ದರ್ಶನ್‌ ಪ್ರಕರಣದಲ್ಲಿ ಮಹತ್ವದ ತಿರುವು; ಸಾಕ್ಷ್ಯ ಸ್ಥಳ ಅದಲು-ಬದಲು?
x

Darshan Case: ದರ್ಶನ್‌ ಪ್ರಕರಣದಲ್ಲಿ ಮಹತ್ವದ ತಿರುವು; ಸಾಕ್ಷ್ಯ ಸ್ಥಳ ಅದಲು-ಬದಲು?

ನಟ ದರ್ಶನ್‌ ಪ್ರಕರಣ ಸಂಬಂಧ ಮಹತ್ವದ ಬೆಳವಣಿಗೆಯಾಗಿದ. ಮೂರನೇ ಆರೋಪಿಯಿಂದ ವಶಪಡಿಸಿಕೊಂಡ ಸಾಕ್ಷ್ಯದ ಸ್ಥಳ ಬೇರೆಯಾಗಿದ್ದು, ನ್ಯಾಯಾಲಯಕ್ಕೆ ಸುಳ್ಳು ದಾಖಲೆ ಒದಗಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.


Click the Play button to hear this message in audio format

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್‌ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ.

ದರ್ಶನ್‌ ಸಹ ಆರೋಪಿ ಪುಟ್ಟಸ್ವಾಮಿ ಅಲಿಯಾಸ್‌ ಪವನ್‌ ಸೇರಿದಂತೆ ಇತರೆ ಆರೋಪಿಗಳಿಂದ ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿರುವ ಸ್ಥಳದ ಬಗ್ಗೆ ಪೊಲೀಸರು ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಹೊಸ ತಾಂತ್ರಿಕ ತಿರುವು ಲಭಿಸಿದೆ. ತನಿಖಾ ಸಂಸ್ಥೆ ಮತ್ತು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಸಾಕ್ಷ್ಯಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ ಎಂದು ಆರೋಪಿಸಲಾಗಿದೆ.

64ನೇ ಹೆಚ್ಚುವರಿ ಸತ್ರ ನ್ಯಾಯಾಲಯಕ್ಕೆ ಈ ಬಗ್ಗೆ ಆರೋಪಿ ಪರ ವಕೀಲ ಡಿ.ಎಸ್‌. ಸುಧನ್ವ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ನಡೆದ ಸಂದರ್ಭದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಆಗಿದ್ದ ಸಿ. ಗಿರೀಶ್‌ ನಾಯ್ಕ್‌ ಅವರನ್ನು ಆರೋಪಿಯನ್ನಾಗಿ ಮಾಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಅಲ್ಲದೇ, ಸುಳ್ಳು ದಾಖಲೆ ಸೃಷ್ಟಿಸಿದ ಸ್ಥಳವನ್ನು ನ್ಯಾಯಾಧೀಶರು ಖುದ್ದು ಪರಿಶೀಲನೆ ನಡೆಸಬೇಕು ಮತ್ತು ಸೋಮವಾರ ನಡೆದ ವಿಚಾರಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ನ್ಯಾಯಾಲಯ ಸಂರಕ್ಷಿಸಬೇಕು ಎಂದು ಕೋರಿದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯವು ಸಿಸಿಟಿವಿ ದೃಶ್ಯಾವಳಿಗಳ ರಕ್ಷಣೆಗೆ ಕ್ರಮ ಕೈಗೊಂಡಿದೆ.

ಏನು ಆರೋಪ?

ಪ್ರಕರಣದ ಆರಂಭಿಕ ತನಿಖಾಧಿಕಾರಿಯಾಗಿದ್ದ ಕಾಮಾಕ್ಷಿಪಾಳ್ಯ ಠಾಣೆಯ ಅಂದಿನ ಇನ್ಸ್‌ಪೆಕ್ಟರ್ ಗಿರೀಶ್ ನಾಯ್ಕ್‌ ಪ್ರಕರಣದಲ್ಲಿ ದೋಷಾರೋಪ ಪಟ್ಟಿಯ ಭಾಗವಾಗಿರುವ ಅನೇಕ ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಮೂರನೇ ಆರೋಪಿ ಪುಟ್ಟಸ್ವಾಮಿಯಿಂದ ಎಂಟು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡ ಬಗ್ಗೆ ದಾಖಲಿಸಲಾದ ಮಹಜರ್ ಈಗ ವಿವಾದದ ಕೇಂದ್ರಬಿಂದುವಾಗಿದೆ.

ಅರ್ಜಿಯಲ್ಲಿನ ಅತ್ಯಂತ ಪ್ರಮುಖ ಅಂಶವೆಂದರೆ, ಮೊಬೈಲ್ ಫೋನ್ ವಶಪಡಿಸಿಕೊಳ್ಳುವಾಗ ತೆಗೆಯಲಾದ ಫೋಟೋಗಳು. ಪೊಲೀಸರು ನ್ಯಾಯಾಲಯಕ್ಕೆ ನೀಡಿರುವ ಫೋಟೋಗಳಲ್ಲಿ ಠಾಣೆಯ ನೆಲವು ಬಿಳಿ ಬಣ್ಣದ ವಿಟ್ರಿಫೈಡ್ ಟೈಲ್ಸ್‌(Vitrified Tiles)ನಿಂದ ಕೂಡಿದೆ. ಆದರೆ, ವಾಸ್ತವದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ನೆಲವು ಬೂದು ಬಣ್ಣದ ಮೊಸಾಯಿಕ್ ಟೈಲ್ಸ್‌ನಿಂದ ಕೂಡಿದೆ. ಫೋಟೋದಲ್ಲಿ ಕಂಡುಬರುವ ಕಟ್ಟಡದ ರಚನೆಗೂ ಮತ್ತು ಅಸಲಿ ಪೊಲೀಸ್ ಠಾಣೆಯ ರಚನೆಗೂ ಯಾವುದೇ ಸಾಮ್ಯತೆ ಇಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್‌ ಪ್ರಕರಣದಲ್ಲಿ ಬಂದಿಸಿದ್ದ ಆರೋಪಿಗಳಿದ್ದ ಸ್ಥಳ ಎನ್ನಲಾದ ಚಿತ್ರ.

ಪ್ರಕರಣದ ಮಹಜರ್ ಸಾಕ್ಷಿಗಳು ನ್ಯಾಯಾಲಯದ ಮುಂದೆ ಹಾಜರಾಗಿ, ಮೊಬೈಲ್ ಫೋನ್‌ಗಳನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲೇ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೆ ನೀಡಿದ್ದರು. ಆದರೆ, ಫೋಟೋಗಳಲ್ಲಿನ ಹಿನ್ನೆಲೆ ಠಾಣೆಗೆ ಹೊಂದಿಕೆಯಾಗದಿರುವುದು ಇನ್ಸ್‌ಪೆಕ್ಟರ್ ಗಿರೀಶ್ ನಾಯ್ಕ್‌ ಅವರು ಬೇರೆ ಎಲ್ಲೋ ಮಹಜರ್ ನಡೆಸಿ ಅಥವಾ ಸುಳ್ಳು ದಾಖಲೆ ಸೃಷ್ಟಿಸಿ ನ್ಯಾಯಾಲಯವನ್ನು ದಾರಿ ತಪ್ಪಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿ ಪರ ವಕೀಲ ಡಿ.ಎಸ್‌. ಸುಧನ್ವ ನ್ಯಾಯಾಲಯದಲ್ಲಿ ವಾದಿಸಿದ್ದಾರೆ.

ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ವಕೀಲ ಡಿ.ಎಸ್‌.ಸುಧನ್ವ, "ಒಬ್ಬ ಜವಾಬ್ದಾರಿಯುತ ಪೊಲೀಸ್ ಅಧಿಕಾರಿಯಾಗಿ, ಕೊಲೆ ಪ್ರಕರಣವೊಂದರಲ್ಲಿ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿರುವುದು ಗಂಭೀರ ಅಪರಾಧ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಸುಳ್ಳು ಪುರಾವೆ ನೀಡುವುದು ಸೆಕ್ಷನ್‌ 195 (ಸುಳ್ಳು ಪುರಾವೆಗಳನ್ನು ಅಸಲಿ ಎಂದು ಬಳಸುವುದು), ಸೆಕ್ಷನ್‌ 196 (ಸುಳ್ಳು ಪುರಾವೆಯನ್ನು ಅಸಲಿ ಎಂದು ಬಳಸುವುದು), ಸೆಕ್ಷನ್‌ 201 (ಸಾಕ್ಷ್ಯ ನಾಶಪಡಿಸುವುದು), ಕಾಯ್ದೆಗಳ ಅಡಿಯಲ್ಲಿ ಇನ್ಸ್‌ಪೆಕ್ಟರ್ ಗಿರೀಶ್ ನಾಯ್ಕ್‌ ಅವರನ್ನು ಈ ಪ್ರಕರಣದಲ್ಲಿ ಹೆಚ್ಚುವರಿ ಆರೋಪಿಯನ್ನಾಗಿ ಸೇರಿಸಬೇಕು ಎಂಬುದಾಗಿ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ," ಎಂದರು.

ಪ್ರಕರಣದ ಹಿನ್ನೆಲೆ

ನಟ ದರ್ಶನ್ ಆಪ್ತೆ ಪವಿತ್ರಾ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ಸಂದೇಶ ಕಳುಹಿಸಿದ್ದ ಎನ್ನಲಾದ ಘಟನೆ ಹಿನ್ನೆಲೆಯಲ್ಲಿ ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿಯನ್ನು ಹತ್ಯೆ ಮಾಡಲಾಗಿತ್ತು. 2024 ರ ಜೂ.8 ರಂದು ದರ್ಶನ್‌ ಅಭಿಮಾನಿ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷ ರಾಘವೇಂದ್ರ ಮೂಲಕ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿಕೊಳ್ಳಲಾಯಿತು. ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆಯಲ್ಲಿದ್ದ ಒಂದು ಶೆಡ್‌ಗೆ ರೇಣುಕಾಸ್ವಾಮಿಯನ್ನು ಕರೆದೊಯ್ದು, ಅಲ್ಲಿ ದರ್ಶನ್ ಮತ್ತು ಅವರ ತಂಡದವರು ಆತನ ಮೇಲೆ ಭೀಕರವಾಗಿ ಹಲ್ಲೆ ನಡೆಸಿದರು ಎಂದು ಅರೋಪಿಸಲಾಗಿದೆ. ವಿದ್ಯುತ್ ಶಾಕ್ ನೀಡುವುದು ಸೇರಿದಂತೆ ಅಮಾನವೀಯವಾಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಯಿತು ಎಂದೂ ಆರೋಪಿಸಲಾಗಿತ್ತು.

ಹತ್ಯೆಯ ನಂತರ ಶವವನ್ನು ಕಾಮಾಕ್ಷಿಪಾಳ್ಯದ ಬಳಿಯ ರಾಜಕಾಲುವೆಗೆ ಎಸೆಯಲಾಯಿತು. ಮರುದಿನ ಮುಂಜಾನೆ ಶವ ಪತ್ತೆಯಾದಾಗ ಪ್ರಕರಣ ಬೆಳಕಿಗೆ ಬಂತು. ಪ್ರಕರಣವನ್ನು ಮುಚ್ಚಿಹಾಕಲು ದರ್ಶನ್ ತಂಡದ ಕೆಲವರು ಪೊಲೀಸರ ಮುಂದೆ ತಾವೇ ಹಣದ ವಿಚಾರಕ್ಕೆ ಕೊಲೆ ಮಾಡಿದ್ದಾಗಿ ಶರಣಾಗಿದ್ದರು. ಆದರೆ ಪೊಲೀಸ್ ತನಿಖೆಯಲ್ಲಿ ಇದು ದರ್ಶನ್ ಅವರ ನಿರ್ದೇಶನದಂತೆ ನಡೆದ ಕೃತ್ಯ ಎಂಬುದು ಸಾಬೀತಾಯಿತು. ಪ್ರಕರಣದಲ್ಲಿ ಪವಿತ್ರಾ ಗೌಡ ಮೊದಲ ಆರೋಪಿಯಾಗಿದ್ದು, ದರ್ಶನ್‌ ಎರಡನೇ ಆರೋಪಿಯಾಗಿದ್ದಾರೆ. ಪುಟ್ಟಸ್ವಾಮಿ ಅಲಿಯಾಸ್‌ ಪವನ್‌ ಮೂರನೇ ಆರೋಪಿ, ರಾಘವೇಂದ್ರ ನಾಲ್ಕನೇ ಆರೋಪಿಯಾಗಿದ್ದಾರೆ. ಇನ್ನುಳಿದಂತೆ 17 ಆರೋಪಿಗಳು ಸಹ ಬಂಧಿಸಲಾಯಿತು. ಪ್ರಕರಣ ವಿಚಾರಣೆಯು ವಿವಿಧ ಹಂತದಲ್ಲಿ ಮುಂದುವರಿದಿದೆ.

Read More
Next Story