ಕರ್ನಾಟಕದ ರಾಜಕಾರಣದ ಹೆಗಲೇರಿದ ಜಾತಿ ಗಣತಿ ವಿವಾದ
x
ಜಾತಿ ಗಣತಿ ವರದಿ ಜಾರಿಯ ಲಾಭದ ಮೇಲೆ ಕಾಂಗ್ರೆಸ್‌ ನಾಯಕರ ಕಣ್ಣು !

ಕರ್ನಾಟಕದ ರಾಜಕಾರಣದ ಹೆಗಲೇರಿದ ಜಾತಿ ಗಣತಿ ವಿವಾದ

ಜಾತಿ ಗಣತಿ ವರದಿಯನ್ನು ಬಹಿರಂಗಗೊಳಿಸಿ, ಅದರ ಶಿಫಾರಸುಗಳ ಆಧಾರದ ಮೇಲೆ ಮೀಸಲಾತಿ ನಿಗದಿಗೊಳಿಸಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಮತಗಳನ್ನು ಬಾಚುವ ತಂತ್ರಗಾರಿಕೆ ಕಾಂಗ್ರೆಸಿನದು.


ಅರವತ್ತೆಂಟು ವರ್ಷಗಳ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಜಾತಿ ಗಣತಿ ಅಥವಾ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ವಿವಾದವಾಗಿರುವಷ್ಟು ಬೇರಾವುದೇ ಪ್ರಶ್ನೆ ವಿವಾದವಾದಂತೆ ತೋರುವುದಿಲ್ಲ. ಈ ಹಿಂದೆ ಇಷ್ಟೇ ವಿವಾದಕ್ಕೊಳಗಾಗಿದ್ದ ಸಂಗತಿಯೆಂದರೆ ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಅವರ ಅವಧಿಯ ಕ್ರಾಂತಿಕಾರಕ ಭೂ ಸುಧಾರಣಾ ಕಾಯ್ದೆ.

ಕಳೆದ ನಾಲ್ಕೈದು ತಿಂಗಳಿಂದ ಆಗಾಗ ಕರ್ನಾಟಕದ ರಾಜಕೀಯ ಜಗತ್ತನ್ನು ಜಾತಿ ಗಣತಿ ಕಾಡುತ್ತಲೇ ಇದೆ. ಕಳೆದ ವಾರ ಕರ್ನಾಟಕದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ತಮ್ಮ ಅಧಿಕಾರಾವಧಿಯು ಜನವರಿ 31ಕ್ಕೆ ಅಂತ್ಯಗೊಳ್ಳಲಿದ್ದು, ಅಷ್ಟರೊಳಗೆ ಜಾತಿ ಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ಹೇಳಿದಾಗ ಪ್ರಬಲ ಕೋಮುಗಳು ಆಘಾತಕ್ಕೊಳಗಾದವು. ಅಷ್ಟೇ ಅಲ್ಲ. ಚಿತ್ರದುರ್ಗದಲ್ಲಿ ಇತ್ತೀಚೆಗೆ ನಡೆದ ಒಂದರ್ಥದ ಅಹಿಂದಾ ಸಮಾವೇಶದಲ್ಲಿ ಜಾತಿ ಗಣತಿ ವರದಿಯನ್ನು ಸ್ವೀಕರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದಾಗ ಕರ್ನಾಟಕ ರಾಜ್ಯದಲ್ಲಿ ಒಂದು ರೀತಿಯ ಸಂಚಲನ ಉಂಟಾಯಿತು.

ಆದರೆ ಪ್ರಸಕ್ತ ರಾಜಕೀಯ ಪರಿಸ್ಥಿತಿಯಲ್ಲಿ ಜಾತಿ ಗಣತಿ ಸ್ವೀಕರಿಸುವುದರಿಂದಾಗುವ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಸಿದ್ದರಾಮಯ್ಯ, ಜಯಪ್ರಕಾಶ್ ಹೆಗ್ಡೆ ಅವರ ಅಧಿಕಾರಾವಧಿಯನ್ನು ಒಂದು ತಿಂಗಳ ಮಟ್ಟಿಗೆ ವಿಸ್ತರಿಸಿ ಮತ್ತೊಮ್ಮೆ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಒಟ್ಟಾರೆಯಾಗಿ, ಲೋಕಸಭೆ ಚುನಾವಣೆಗೆ ಮುನ್ನ ಈ ಜಾತಿ ಗಣತಿ ವರದಿಯನ್ನು ಸ್ವೀಕರಿಸುವ ಸೂಚನೆಯನ್ನಂತೂ ಸಿದ್ದರಾಮಯ್ಯ ನೀಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ರಾಜಕಾರಣವನ್ನು ಜಾತಿ ಗಣತಿ ಅಥವ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಕಾಡಿದಂತೆ ಬೇರಾವ ಸಾಮಾಜಿಕ ಸಮಸ್ಯೆಯೂ ಕಾಡಿದಂತೆ ತೋರುವುದಿಲ್ಲ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷಗಳಿಗೆ ಜಾತಿ ಗಣತಿ ವರದಿ ಹಾಗೂ ಶಿಫಾರಸುಗಳು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸರ್ಕಾರ ಜಾತಿಗಣತಿ ನಡೆಸಿ, ಮೀಸಲಾತಿಯನ್ನು ಪ್ರಕಟಿಸಿದ ಮೇಲಂತೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಒತ್ತಡ ಹೆಚ್ಚಿದೆ. ಇದು ಕರ್ನಾಟಕ ಸರ್ಕಾರಕ್ಕೆ ಇಬ್ಬದಿ ಸಂಕಟ ಸೃಷ್ಟಿ ಮಾಡಿದೆ. ಆದರೆ ಈಗ ನಿತಿಶ್ ಕುಮಾರ್ ಎನ್ ಡಿ ಎ ಒಕ್ಕೂಟ ಸೇರಿರುವ ಕಾರಣ ಮೂರು ಪಕ್ಷಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ.

ಜಾತಿ ಗಣತಿ ನಡೆಸಿ ವರದಿ ಸಿದ್ಧಪಡಿಸಿದ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜು ಅವರ ಪ್ರಕಾರ ಈ ಸಮೀಕ್ಷೆ ಒಂದು ಸಾಮಾಜಿಕ ಕ್ರಾಂತಿ. ಕರ್ನಾಟಕದ ಮಾದರಿಯನ್ನು ಅನುಸರಿಸಿ ಇದು ದೇಶಾದ್ಯಂತ ನಡೆಯಬೇಕು ಎಂದು ಅವರು ಹೇಳುತ್ತಾರೆ. ಬಿಜೆಪಿ ಮತ್ತು ಅದರ ಅಂಗಪಕ್ಷಗಳಿಗೆ ಈ ಜಾತಿ ಗಣತಿ ಸಮಾಜವನ್ನು ಒಡೆಯುವ ಪ್ರಯತ್ನವಾದರೆ, ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳಿಗೆ ತಮ್ಮನ್ನು ಬೆಂಬಲಿಸುತ್ತಿರುವ ಪ್ರಬಲ ಲಿಂಗಾಯತ, ಒಕ್ಕಲಿಗ ಸಮುದಾಯಗಳ ಶಕ್ತಿ ಕಳೆದುಕೊಳ್ಳುವ ಆತಂಕ.

ಜಾತಿ ಗಣತಿ ವರದಿಯನ್ನು ಬಹಿರಂಗಗೊಳಿಸಿ, ಅದರ ಶಿಫಾರಸುಗಳ ಆಧಾರದ ಮೇಲೆ ಮೀಸಲಾತಿ ನಿಗದಿಗೊಳಿಸಿ, ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಪ್ರಬಲ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳ ಬೆಂಬಲದೊಂದಿಗೆ, ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಮತಗಳನ್ನೂ ಪಡೆದುಕೊಳ್ಳುವ ತಂತ್ರಗಾರಿಕೆ ಕಾಂಗ್ರೆಸ್‌ನದು.

ಜಾತಿ ಗಣತಿ ವರದಿಯನ್ನು ಸರ್ಕಾರ ಒಪ್ಪಿಕೊಂಡರೂ, ಒಪ್ಪಿಕೊಳ್ಳದಿದ್ದರೂ, ಲೋಕಸಭಾ ಚುನಾವಣೆಯ ಮೇಲೆ ಈ ವಿಷಯ ಸೂಚಿ ಮೂರೂ ಪಕ್ಷಗಳ ಮೇಲೆ ಪರಿಣಾಮ ಮಾಡುವುದಂತೂ ಖಂಡಿತಾ.

ಕಾಂಗ್ರೆಸ್‌ನ ಸ್ಥಿತಿ ಇತ್ತ ದರಿ ಅತ್ತ ಪುಲಿ ಎಂಬಂತೆ. ಒಪ್ಪಿಕೊಂಡರೂ ಕಷ್ಟ, ಒಪ್ಪಿಕೊಳ್ಳದಿದ್ದರೂ ಕಷ್ಟ. ಆದರೆ ಒಪ್ಪಿಕೊಂಡೇ ಪರಿಸ್ಥಿತಿಯನ್ನು ತಮಗೆ ಬೇಕಾದಂತೆ ಒಗ್ಗಿಸಿಕೊಳ್ಳುವ ಛಲ ಮುಖ್ಯಮಂತ್ರಿ ಸಿದ್ದರಾಮಯ್ಯನವರದು. ಹಾಗಾಗಿ ಜಾತಿ ಗಣತಿ ವರದಿಯನ್ನು ಒಪ್ಪಿಯೇ ತೀರುವ ಹಠ ಸಿದ್ದರಾಮಯ್ಯನವರದು. ಅವರಿಗೆ ಕಾಂಗ್ರೆಸ್ ಹೈಕಮಾಂಡ್‌ನ ಸಂಪೂರ್ಣ ಶ್ರೀರಕ್ಷೆ ಇದೆ.

ಮಂದಿರ ವರ್ಸಸ್ ಮಂಡಲ್

ರಾಷ್ಟ್ರೀಯ ಕಾಂಗ್ರೆಸ್‌ಗೆ ಜಾತಿ ಗಣತಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಮತ್ತು ಅದರ ಹಿಂದುತ್ವ ಹಾಗೂ ರಾಷ್ಟ್ರೀಯವಾದವನ್ನು ಎದುರಿಸಲು ಜಾತಿ ಗಣತಿಯೇ ಪ್ರಬಲ ಅಸ್ತ್ರ. ಒಂದರ್ಥದಲ್ಲಿ ಈ ಕಾಲದ ಮಂದಿರ-ಮಂಡಲ್ ನಡುವಿನ ಹಣಾಹಣಿಯಂತೆ ತೋರುತ್ತಿದೆ

ಈ ರಾಷ್ಟ್ರೀಯ ಕಥನ (ನರೇಟೀವ್)ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಥಿತಿ ಮಾತ್ರ ಅಡಕೊತ್ತಿನಲ್ಲಿ ಸಿಕ್ಕ ಅಡಿಕೆಯಂತೆ ಆಗಿದೆ. ಬಿಜೆಪಿ ಮತ್ತು ಜೆಡಿಎಸ್‌ಗಳ ಪ್ರಕಾರ ಜಾತಿ ಗಣತಿ ಅವೈಜ್ಞಾನಿಕ. ಕಾಂಗ್ರೆಸ್‌ನ ಒಳಗೂ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ನಾಯಕರಿಂದ/ವಿಧಾನಸಭಾ ಸದಸ್ಯರಿಂದ ಭಾರೀ ವಿರೋಧ ಕಂಡುಬರುತ್ತಿದೆ.

ಸ್ವತಃ ಪಕ್ಷದ ರಾಜ್ಯ ಅಧ್ಯಕ್ಷ ಹಾಗೂ ಒಕ್ಕಲಿಗ ಸಮುದಾಯದ ಪ್ರತಿನಿಧಿ ಡಿ.ಕೆ. ಶಿವಕುಮಾರರಿಂದ ಮತ್ತೊಮ್ಮೆ ವೈಜ್ಞಾನಿಕ ಸಮೀಕ್ಷೆಯಾಗಬೇಕೆಂಬ ಒತ್ತಾಯ ಮಂಡಿಸುತ್ತಿದ್ದಾರೆ. ಇದು ಮೇಜಿನ ಮೇಲೆ ರಚನೆಯಾದ ವರದಿ ಎಂಬ ಟೀಕೆ, ವೀರಶೈವ-ಲಿಂಗಾಯತ ಸಮುದಾಯದ ಪ್ರತಿನಿಧಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರದು. ಈ ಇಬ್ಬರು ನಾಯಕರಿಂದಾಗಿ ಸರ್ಕಾರಕ್ಕೆ, ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದೊಡ್ಡಿದ್ದಾರೆ.

ಮುನಿದ ಮಲ್ಲಿಕಾರ್ಜುನ ಖರ್ಗೆ

ಈ ಇಬ್ಬರ ಟೀಕೆಯಿಂದ ಮುನಿದ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜಾತಿ ಗಣತಿ ವಿರುದ್ಧ ಮೇಲ್ವರ್ಗಗಳೆಲ್ಲ ಒಂದಾಗಿದೆ ಎಂಬ ಪರೋಕ್ಷ ಚಾವಟಿ ಏಟು ನೀಡಿದ್ದಾರೆ. ಜಾತಿ ಗಣತಿ ಪ್ರಶ್ನೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎನ್ನುತ್ತಾರೆ ಯುವ ನಾಯಕ-ರಾಹುಲ್ ಗಾಂಧಿ.

ಜಾತಿ ಗಣತಿಯನ್ನು ಜಾರಿಗೊಳಿಸಲೇಬೇಕು ಎಂಬುದು ಹಿಂದುಳಿದ ವರ್ಗಗಳ ದಲಿತ ಸಮುದಾಯಕ ಹಕ್ಕೊತ್ತಾಯ. ಮಾತಿಗೆ ತಪ್ಪಿದರೆ ಆಂದೋಲನದ ಆರಂಭಿಸುವುದಾಗಿ ಅವರು ಎಚ್ಚರಿಕೆಯನ್ನು ಅವರು ನೀಡಿದ್ದಾರೆ.

ಜಾತಿ ಗಣತಿ ಇತಿಹಾಸ

ಕರ್ನಾಟಕದಲ್ಲಿ ನಡೆದ ಜಾತಿ ಗಣತಿ ಐತಿಹಾಸಿಕ. ಎಂಭತ್ನಾಲ್ಕು ವರ್ಷಗಳ ಅಂತರದ ನಂತರದ ನಡೆದ ಸಮೀಕ್ಷೆ ಇದು. ಕರ್ನಾಟಕದಲ್ಲಿ ಕೊನೆಯ ಬಾರಿಗೆ ಈ ಸಮೀಕ್ಷೆ ನಡೆದದ್ದು 1931ರಲ್ಲಿ. ಆನಂತರದಲ್ಲಿ ರಾಜಕೀಯ ಕಾರಣಗಳಿಗಾಗಿ ಇಂಥ ಸಮೀಕ್ಷೆ ನಡೆದಿಲ್ಲ. ಕಾಂಗ್ರೆಸ್ 2013ರಲ್ಲಿ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಕೂಡಲೆ 2015ರಲ್ಲಿ ನಡೆದ ಸಮೀಕ್ಷೆ ಇದು.

ಈ ಸಮೀಕ್ಷೆಯಿಂದ ಸರ್ಕಾರಕ್ಕೆ ತಗುಲಿದ ವೆಚ್ಚ; ರೂ.175 ಕೋಟಿ ಎನ್ನುತ್ತಾರೆ ಕಾಂತರಾಜ್. ಭಾಗವಹಿಸಿದ ಸಮೀಕ್ಷೆದಾರರ ಸಂಖ್ಯೆ (ಅಧಿಕಾರಿಗಳೂ ಸೇರಿದಂತೆ) 1.60 ಲಕ್ಷ ಮಂದಿ. ವರದಿ ಸಿದ್ದವಾದರೂ ರಾಜಕೀಯ ಪಕ್ಷಗಳ ಒತ್ತಡದಿಂದ ವರದಿ ಸ್ವೀಕೃತವಾಗಿಲ್ಲ.

ಈ ನಡುವೆ ಅಂದಿನ ಕಾಂಗ್ರೆಸ್ ಸರ್ಕಾರ ಎಚ್. ಕಾಂತರಾಜ್ ಅವರ ಅಧಿಕಾರಾವಧಿಯನ್ನು ವಿಸ್ತರಿಸಿತು. 2016ರಲ್ಲಿ ವರದಿ ಸಿದ್ಧವಾಯಿತು. ಆಯೋಗದ ಸಭೆಗಳಲ್ಲಿ ಭಾಗವಹಿಸಿ, ಸಭೆ ತೆಗೆದುಕೊಂಡ ತೀರ್ಮಾನಗಳಿಗೆ, ಮಾಡಿದ ಶಿಫಾರಸುಗಳಿಗೆ ಸಹಿ ಮಾಡಿದ ಸದಸ್ಯ ಕಾರ್ಯದರ್ಶಿಯಿಂದ ಅಂತಿಮ ವರದಿ/ಶಿಫಾರಸಿಗೆ ಸಹಿ ಮಾಡಲು ನಿರಾಕರಿಸಿದ ದಿನದಿಂದ ಈ ವಿವಾದ ಉದ್ಭವವಾಯಿತು. ತಾಂತ್ರಿಕ ಕಾರಣ ಒಡ್ಡಿ ವರದಿ ಸ್ವೀಕರಿಸಲು ಬಿಜೆಪಿ ಮುಖ್ಯಮಂತ್ರಿ ಬಿ,ಎಸ್. ಯಡಿಯೂರಪ್ಪ ನಿರಾಕರಿಸಿದರು. ಇಷ್ಟಲ್ಲ ಆಗುವ ವೇಳೆಗೆ ಕಾಂತರಾಜ್ ಅವಧಿ ಅಂತ್ಯವಾಯಿತು.

ಕಾಂತರಾಜ್ ಖಾಲಿ ಮಾಡಿದ ಕುರ್ಚಿಯನ್ನು ಜಯಪ್ರಕಾಶ್ ಹೆಗಡೆ ಅಲಂಕರಿಸಿದರು. ಜಯಪ್ರಕಾಶ್ ಹೆಗಡೆ ಪ್ರಾತಿನಿಧ್ಯ ವಂಚಿತ ಸಮುದಾಯಗಳಿಂದ ಮತ್ತೆ ಅರ್ಜಿ ಸ್ವೀಕರಿಸಿದರು. ಅವರು ಕಾಂತರಾಜ್ ವರದಿಯ ಅಂಕಿ ಅಂಶಗಳ ಪುನರಾವಲೋಕನ ಹಾಗೂ ಪುನರ್ ವಿಮರ್ಶಿತ ವರದಿ ಸಲ್ಲಿಸುವ ನಿರ್ಧಾರ ತೆಗೆದುಕೊಂಡರು.

ಈ ನಡುವೆ ಯಾವುದೇ ಕಾರಣಕ್ಕೂ ವರದಿಯನ್ನು ಪರಿಶೀಲಿಸುವಂತಿಲ್ಲ ಎಂಬ ವಾದವನ್ನು ಕಾಂತರಾಜ್ ಮಂಡಿಸಿದರು. ಈ ನಡುವೆ ಜಾತಿ ಗಣತಿ ಮೂಲ ಪ್ರತಿಯೇ ಮಾಯ. ಈ ವಿಷಯವನ್ನು ಬಯಲಿಗೆ ತಂದದ್ದು ʼದ ಫೆಡರಲ್ʼ. ಇದಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ʼದ ಫೆಡರಲ್ʼ ವರದಿ ಬಹಿರಂಗಪಡಿಸಿತು. ಈ ಕುರಿತು ಪ್ರತಿಕ್ರಯಿಸಿದ ಕಾಂತರಾಜ್, ವರದಿ ಮಾಯವಾಗಿಲ್ಲ. ಅದೆಲ್ಲ ಊಹಾಪೋಹ ಎಂದು ಸಮರ್ಥಿಸಿಕೊಂಡರು.

ಈ ನಡುವೆ ನವೆಂಬರ್ ಅಂತ್ಯಕ್ಕೆ ಜಯಪ್ರಕಾಶ್ ಹೆಗಡೆ ಅವರ ಅವಧಿ ಅಂತ್ಯಗೊಂಡಿತು. ಕಾಂಗ್ರೆಸ್ ಸರ್ಕಾರ ಹೆಗಡೆ ಅವರಿಗೆ ವರದಿ ಸಲ್ಲಿಸಲು ಅನುಕೂಲವಾಗುವಂತೆ ಅವರ ಅವಧಿಯನ್ನು ವಿಸ್ತರಿಸಿತು.

ಮಾರ್ಚಿ ತಿಂಗಳ ಅಂತ್ಯಕ್ಕೆ ಜಯಪ್ರಕಾಶ್ ಹೆಗಡೆ ಅವರು ವರದಿ ಸಲ್ಲಿಸುವ ಸಾಧ್ಯತೆ ದಟ್ಟವಾಗಿದೆ. ಲೋಕಸಭಾ ಚುನಾವಣೆಗೂ ಮುನ್ನ ಜಾತಿ ಗಣತಿ ಮತ್ತೊಮ್ಮೆ ಕರ್ನಾಟಕವನ್ನು ಕಾಡುವುದಂತೂ ಸಹಜ. ಕಾರಣ: ಈಗಾಗಲೇ ಸೋರಿಕೆಯಾಗಿರುವ ಅಂಕಿ ಅಂಶಗಳ ಆಧಾರದ ಮೇಲೆ ಹೇಳುವುದಾದರೆ, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ದಲಿತರು, ಇದುವರೆಗೆ ಯಜಮಾನ ಸ್ಥಾನದಲ್ಲಿದ್ದ, ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯವನ್ನು ಹಿಂದಕ್ಕೆ ತಳ್ಳಿ ತಮ್ಮ ಪಾರಮ್ಯ ಸಾಧಿಸುವ ಸಾಧ್ಯತೆಗಳು ದಟ್ಟವಾಗಿದೆ.

Read More
Next Story