Stock market| ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಸೆನ್ಸೆಕ್ಸ್ 1,555 ಅಂಕ ಪತನ, ಹೂಡಿಕೆದಾರರಿಗೆ 5 ಲಕ್ಷ ಕೋಟಿ ನಷ್ಟ!
x
ಷೇರುಪೇಟೆಯಲ್ಲಿ ರಕ್ತಪಾತ(ಸಂಗ್ರಹ ಚಿತ್ರ)

Stock market| ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಸೆನ್ಸೆಕ್ಸ್ 1,555 ಅಂಕ ಪತನ, ಹೂಡಿಕೆದಾರರಿಗೆ 5 ಲಕ್ಷ ಕೋಟಿ ನಷ್ಟ!

ಜಾಗತಿಕ ಮಾರುಕಟ್ಟೆ ಕುಸಿತ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸುನಾಮಿ ಎದ್ದಿದೆ.


ಜಾಗತಿಕ ಮಾರುಕಟ್ಟೆಗಳಲ್ಲಿನ ಭಾರಿ ಹಿನ್ನಡೆಯ ಪರಿಣಾಮವಾಗಿ ಭಾರತೀಯ ಷೇರು ಮಾರುಕಟ್ಟೆ ಸೋಮವಾರದ ವಹಿವಾಟನ್ನು ತೀವ್ರ ಕುಸಿತದೊಂದಿಗೆ ಆರಂಭಿಸಿದೆ. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ (Sensex) ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ (Nifty) ಎರಡೂ ಕೆಂಪು ವಲಯದಲ್ಲಿ ವಹಿವಾಟು ನಡೆಸುತ್ತಿವೆ.

ಬೆಳಿಗ್ಗೆ 9:17ರ ಸುಮಾರಿಗೆ ಸೆನ್ಸೆಕ್ಸ್ 1,452.61 ಅಂಕಗಳಷ್ಟು ಭಾರಿ ಕುಸಿತ ಕಂಡು 73,080.35 ಮಟ್ಟದಲ್ಲಿ ವಹಿವಾಟು ನಡೆಸುತ್ತಿತ್ತು. ಇತ್ತ ನಿಫ್ಟಿ50 ಕೂಡ 412.40 ಅಂಕಗಳಷ್ಟು ಇಳಿಕೆಯಾಗಿ 22,702.10 ಮಟ್ಟಕ್ಕೆ ತಲುಪಿದೆ.

ಜಾಗತಿಕ ಮಾರುಕಟ್ಟೆಯ ಪ್ರಭಾವ:

ಕೇವಲ ಭಾರತ ಮಾತ್ರವಲ್ಲದೆ, ಏಷ್ಯಾದ ಪ್ರಮುಖ ಮಾರುಕಟ್ಟೆಗಳೂ ಸಹ ಭಾರಿ ಇಳಿಕೆ ಕಂಡಿವೆ. ಜಪಾನ್‌ನ ನಿಕ್ಕಿ 225 (Nikkei 225) ಶೇ. 3.3 ರಷ್ಟು ಕುಸಿತ ಕಂಡರೆ, ದಕ್ಷಿಣ ಕೊರಿಯಾದ ಕೋಸ್ಪಿ (Kospi) ಶೇ. 4.6 ರಷ್ಟು ಭಾರಿ ಇಳಿಕೆ ದಾಖಲಿಸಿವೆ.

ಕಳೆದ ಶುಕ್ರವಾರ ಅಮೆರಿಕದ ಮಾರುಕಟ್ಟೆಗಳಾದ S&P 500 ಮತ್ತು ಡೌ ಜೋನ್ಸ್ (Dow Jones) ಕೂಡ ಕ್ರಮವಾಗಿ ಶೇ. 1.51 ಮತ್ತು ಶೇ. 0.96 ರಷ್ಟು ನಷ್ಟದೊಂದಿಗೆ ವಹಿವಾಟು ಮುಗಿಸಿದ್ದು, ಇಂದು ಭಾರತೀಯ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದೆ. ಜಾಗತಿಕ ಆರ್ಥಿಕ ಅನಿಶ್ಚಿತತೆ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಮಾರಾಟದ ಒತ್ತಡವು ಈ ಕುಸಿತಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ವಿದೇಶಿ ಹೂಡಿಕೆದಾರರು (FII) ಸತತವಾಗಿ ಷೇರುಗಳನ್ನು ಮಾರಾಟ ಮಾಡುತ್ತಿರುವುದು ಮಾರುಕಟ್ಟೆಯ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ ಸುಮಾರು 1,555 ಪಾಯಿಂಟ್ಸ್ ಕುಸಿದು 72,977 ಮಟ್ಟಕ್ಕೆ ತಲುಪಿದರೆ, ನಿಫ್ಟಿ 480 ಪಾಯಿಂಟ್ಸ್ ಇಳಿಕೆಯಾಗಿ 22,634 ಮಟ್ಟಕ್ಕೆ ಜಾರಿದೆ. ಈ ಭಾರಿ ಕುಸಿತದಿಂದಾಗಿ ಹೂಡಿಕೆದಾರರ ಅಂದಾಜು 5 ಲಕ್ಷ ಕೋಟಿ ರೂಪಾಯಿ ಸಂಪತ್ತು ಮಣ್ಣುಪಾಲಾಗಿದೆ.

ತೈಲ ಬೆಲೆ ಏರಿಕೆ ಮತ್ತು ರೂಪಾಯಿ ಕುಸಿತದ ಭೀತಿ

ಹಾರ್ಮುಜ್ ಜಲಸಂಧಿಯಲ್ಲಿ ಸಂಚಾರ ವ್ಯತ್ಯಯ ಉಂಟಾಗುವ ಭೀತಿಯಿಂದಾಗಿ ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 113 ಡಾಲರ್ ದಾಟಿದೆ. ತೈಲ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿರುವ ಭಾರತದಂತಹ ದೇಶದ ಆರ್ಥಿಕತೆಯ ಮೇಲೆ ಇದು ತೀವ್ರ ಪರಿಣಾಮ ಬೀರಲಿದೆ. ಇದರ ಬೆನ್ನಲ್ಲೇ, ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಸಾರ್ವಕಾಲಿಕ ಕುಸಿತ ಕಂಡು 93.84 ಮಟ್ಟಕ್ಕೆ ತಲುಪಿದ್ದು, ಮಾರುಕಟ್ಟೆಯ ಮೇಲೆ ಮತ್ತಷ್ಟು ಒತ್ತಡ ಹೇರಿದೆ.

Read More
Next Story