
ಷೇರು ಮಾರುಕಟ್ಟೆಯಲ್ಲಿ ಕುಸಿತ: ಇರಾನ್ ಯುದ್ಧದ ಪರಿಣಾಮ ಸೆನ್ಸೆಕ್ಸ್ 1,700, ನಿಫ್ಟಿ 500 ಪಾಯಿಂಟ್ಸ್ ಡೌನ್!
Stock Market|ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಸಂಭವಿಸಿದೆ. ಸೆನ್ಸೆಕ್ಸ್ 1700 ಪಾಯಿಂಟ್ಸ್ ಹಾಗೂ ನಿಫ್ಟಿ 500 ಪಾಯಿಂಟ್ಸ್ ಇಳಿಕೆಯಾಗಿದೆ.
ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಇರಾನ್ ಯುದ್ಧದ ಭೀತಿಯು ಜಾಗತಿಕ ಮಾರುಕಟ್ಟೆಯನ್ನು ನಡುಗಿಸಿದೆ. ಇದರ ನೇರ ಪರಿಣಾಮ ಬುಧವಾರದಂದು ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಬೀರಿದ್ದು, ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರೀ ಕುಸಿತ ಕಂಡಿವೆ.
ಹೋಳಿ ರಜೆಯ ಬಳಿಕ ಮಾರುಕಟ್ಟೆಗೆ ಬಿಗ್ ಶಾಕ್
ಮಾರ್ಚ್ 3 ರಂದು ಹೋಳಿ ಹಬ್ಬದ ಪ್ರಯುಕ್ತ ಮಾರುಕಟ್ಟೆಗೆ ರಜೆ ಇತ್ತು. ಇಂದು ವಹಿವಾಟು ಆರಂಭವಾಗುತ್ತಿದ್ದಂತೆ ಹೂಡಿಕೆದಾರರಲ್ಲಿ ಆತಂಕ ಮನೆ ಮಾಡಿದೆ. ಬೆಳಗ್ಗೆ 9:17ರ ಸುಮಾರಿಗೆ ಸೆನ್ಸೆಕ್ಸ್ 1,700.08 ಪಾಯಿಂಟ್ಸ್ (2.17%) ಕುಸಿದು 78,596.45 ಮಟ್ಟಕ್ಕೆ ತಲುಪಿದರೆ, ನಿಫ್ಟಿ 517.30 ಪಾಯಿಂಟ್ಸ್ (2.06%) ಇಳಿಕೆಯಾಗಿ 24,344.05 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ.
ರೂಪಾಯಿ ಮೌಲ್ಯ ಪಾತಾಳಕ್ಕೆ, ತೈಲ ಬೆಲೆ ಏರಿಕೆ
ಯುದ್ಧದ ಆತಂಕದಿಂದಾಗಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ದಾಖಲೆಯ ಕುಸಿತ ಕಂಡಿದೆ. ರೂಪಾಯಿ 55 ಪೈಸೆ ಇಳಿಕೆಯಾಗಿ 92.02 ಕ್ಕೆ ತಲುಪಿದೆ. ಇತ್ತ ಕಚ್ಚಾ ತೈಲದ ಬೆಲೆಯೂ ಗಗನಕ್ಕೇರುತ್ತಿದ್ದು, ಬ್ರೆಂಟ್ ಕ್ರೂಡ್ ಬೆಲೆ ಪ್ರತಿ ಬ್ಯಾರೆಲ್‌ಗೆ 82.77 ಡಾಲರ್ ತಲುಪಿದೆ. ಇದು ಜುಲೈ 2024ರ ನಂತರದ ಗರಿಷ್ಠ ಮಟ್ಟವಾಗಿದೆ. ಭಾರತವು ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ದೇಶವಾಗಿರುವುದರಿಂದ, ಈ ಬೆಲೆ ಏರಿಕೆ ದೇಶದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ.
ಜಾಗತಿಕ ಮಾರುಕಟ್ಟೆಯಲ್ಲೂ ನಡುಕ
ಕೇವಲ ಭಾರತ ಮಾತ್ರವಲ್ಲದೆ ಇಡೀ ಏಷ್ಯಾದ ಮಾರುಕಟ್ಟೆಗಳು ರಕ್ತಪಾತ ಕಂಡಿದ್ದು, ದಕ್ಷಿಣ ಕೊರಿಯಾದ ಕೋಸ್ಪಿ (Kospi) ಶೇ. 7 ರಷ್ಟು ಭಾರಿ ಕುಸಿತ ಕಂಡರೆ, ಜಪಾನ್‌ನ ನಿಕ್ಕಿ 225 (Nikkei 225) ಶೇ. 3.23 ರಷ್ಟು ಹಾಗೂ ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ (Hang Seng) ಶೇ. 1.5 ರಷ್ಟು ಇಳಿಕೆಯಾಗಿದೆ; ಇನ್ನು ಅಮೆರಿಕದ ಡೌ ಜೋನ್ಸ್ ಕೂಡ 400 ಪಾಯಿಂಟ್ಸ್‌ಗಳ ಕುಸಿತದೊಂದಿಗೆ ವಹಿವಾಟು ಮುಗಿಸಿರುವುದು ಜಾಗತಿಕ ಮಾರುಕಟ್ಟೆಯ ಆತಂಕವನ್ನು ಪ್ರತಿಬಿಂಬಿಸುತ್ತಿದೆ.
ಹೂಡಿಕೆದಾರರಿಗೆ ಆತಂಕ ತಂದ ವಲಯಗಳು
ಮಾರುಕಟ್ಟೆಯ ಕುಸಿತಕ್ಕೆ ಪ್ರಮುಖವಾಗಿ ಫೈನಾನ್ಷಿಯಲ್ಸ್, ಆಟೋ ಮತ್ತು ಕನ್ಸ್ಯೂಮರ್ ಸ್ಟಾಕ್‌ಗಳಲ್ಲಿ ಕಂಡುಬಂದ ಭಾರಿ ಮಾರಾಟದ ಒತ್ತಡವೇ ಕಾರಣವಾಗಿದೆ. ಯುದ್ಧದ ತೀವ್ರತೆ ಹೆಚ್ಚಾದಲ್ಲಿ ಮಾರುಕಟ್ಟೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

