ಸ್ಟಾರ್‌ಬಕ್ಸ್​ನ 900 ಉದ್ಯೋಗಿಗಳು ವಜಾ, ಹಲವು ಮಳಿಗೆಗಳು ಬಂದ್
x

ಸ್ಟಾರ್‌ಬಕ್ಸ್​ನ 900 ಉದ್ಯೋಗಿಗಳು ವಜಾ, ಹಲವು ಮಳಿಗೆಗಳು ಬಂದ್

ಮುಂಬರುವ ದಿನಗಳಲ್ಲಿ ಉತ್ತರ ಅಮೆರಿಕದಲ್ಲಿ ಎಷ್ಟು ಮಳಿಗೆಗಳನ್ನು ಮುಚ್ಚಲಾಗುವುದು ಎಂಬುದರ ಬಗ್ಗೆ ನಿಖರ ಸಂಖ್ಯೆಯನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.


ಜಾಗತಿಕ ಕಾಫಿ ದೈತ್ಯ ಸ್ಟಾರ್‌ಬಕ್ಸ್, ತನ್ನ ವ್ಯವಹಾರದಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಭಾಗವಾಗಿ ಸುಮಾರು 900 ಚಿಲ್ಲರೆ-ಯೇತರ (non-retail) ಮಳಿಗೆಗಳಲ್ಲಿಕೆಲಸ ಮಾಡುತ್ತಿರುವ ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಜೊತೆಗೆ, ಅಮೆರಿಕ ಮತ್ತು ಕೆನಡಾದಲ್ಲಿನ ಕೆಲವು ಮಳಿಗೆಗಳನ್ನು ಮುಚ್ಚಲು ತೀರ್ಮಾನಿಸಿದೆ.

ಶುಕ್ರವಾರ ಮುಂಜಾನೆ, ಹುದ್ದೆ ಕಳೆದುಕೊಳ್ಳುವ ಉದ್ಯೋಗಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಸಿಯಾಟಲ್ ಮೂಲದ ಕಂಪನಿ ತಿಳಿಸಿದೆ. ಮುಂಬರುವ ದಿನಗಳಲ್ಲಿ ಉತ್ತರ ಅಮೆರಿಕದಲ್ಲಿ ಎಷ್ಟು ಮಳಿಗೆಗಳನ್ನು ಮುಚ್ಚಲಾಗುವುದು ಎಂಬುದರ ಬಗ್ಗೆ ನಿಖರ ಸಂಖ್ಯೆಯನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.

ಸ್ಟಾರ್‌ಬಕ್ಸ್ ಸಿಇಒ ಬ್ರಿಯಾನ್ ನಿಕ್ಕೋಲ್ ಅವರು ಗುರುವಾರ ಉದ್ಯೋಗಿಗಳಿಗೆ ಕಳುಹಿಸಿದ ಪತ್ರದಲ್ಲಿ, "ಕಂಪನಿಯ ಹಲವು ಮಳಿಗೆಗಳು ನಿರೀಕ್ಷಿತ ಆರ್ಥಿಕ ಗುರಿಗಳನ್ನು ತಲುಪುವಲ್ಲಿ ವಿಫಲವಾಗಿವೆ ಅಥವಾ ಗ್ರಾಹಕರು ನಿರೀಕ್ಷಿಸುವಂತಹ ವಾತಾವರಣವನ್ನು ಸೃಷ್ಟಿಸುವಲ್ಲಿ ಹಿಂದೆ ಬಿದ್ದಿವೆ," ಎಂದು ತಿಳಿಸಿದ್ದಾರೆ.

"ಪ್ರತಿ ವರ್ಷ ನಾವು ಆರ್ಥಿಕ ಕಾರ್ಯಕ್ಷಮತೆ, ಗುತ್ತಿಗೆಯ ಅವಧಿ ಮುಕ್ತಾಯದಂತಹ ಹಲವು ಕಾರಣಗಳಿಗಾಗಿ ಮಳಿಗೆಗಳನ್ನು ತೆರೆಯುತ್ತೇವೆ ಮತ್ತು ಮುಚ್ಚುತ್ತೇವೆ. ಆದರೆ, ಈ ಬಾರಿಯ ಕ್ರಮವು ನಮ್ಮ ಪಾಲುದಾರರು (ಉದ್ಯೋಗಿಗಳು) ಮತ್ತು ಗ್ರಾಹಕರ ಮೇಲೆ ಪರಿಣಾಮ ಬೀರುವಂತಹ ಒಂದು ಮಹತ್ವದ ನಿರ್ಧಾರವಾಗಿದೆ. ನಮ್ಮ ಕಾಫಿಹೌಸ್‌ಗಳು ಸಮುದಾಯದ ಕೇಂದ್ರಗಳಾಗಿದ್ದು, ಯಾವುದೇ ಮಳಿಗೆಯನ್ನು ಮುಚ್ಚುವುದು ಕಷ್ಟದಾಯಕ," ಎಂದು ನಿಕ್ಕೋಲ್ ಬರೆದಿದ್ದಾರೆ.

ಈ ಆರ್ಥಿಕ ವರ್ಷದ ಅಂತ್ಯಕ್ಕೆ ಉತ್ತರ ಅಮೆರಿಕದಲ್ಲಿ 18,300 ಮಳಿಗೆಗಳಿರಲಿದ್ದು, ಇದು ಕಳೆದ ವರ್ಷಕ್ಕಿಂತ 124 ಕಡಿಮೆ ಎಂದು ಸ್ಟಾರ್‌ಬಕ್ಸ್ ಹೇಳಿದೆ. ಒಂದೇ ಆರ್ಥಿಕ ವರ್ಷದಲ್ಲಿ ಸ್ಟಾರ್‌ಬಕ್ಸ್ ತನ್ನ ಮಳಿಗೆಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಬಹಳ ಅಪರೂಪ.

ಒಂದು ವರ್ಷದ ಹಿಂದೆ ಸ್ಟಾರ್‌ಬಕ್ಸ್‌ಗೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಬ್ರಿಯಾನ್ ನಿಕ್ಕೋಲ್ ಅವರನ್ನು ಸಿಇಒ ಆಗಿ ನೇಮಿಸಲಾಗಿತ್ತು. ಅವರು ಈ ಹಿಂದೆ ಸುಮಾರು 6 ವರ್ಷಗಳ ಕಾಲ 'ಚಿಪೋಟ್ಲೆ' ಕಂಪನಿಯ ಸಿಇಒ ಆಗಿದ್ದು, ಅದರ ಆದಾಯ ಮತ್ತು ಲಾಭವನ್ನು ದ್ವಿಗುಣಗೊಳಿಸಿ, ಷೇರು ಮೌಲ್ಯವನ್ನು ಗಣನೀಯವಾಗಿ ಹೆಚ್ಚಿಸಿದ್ದರು.

ವಜಾಗೊಂಡ ಉದ್ಯೋಗಿಗಳಿಗೆ ಪರಿಹಾರ ಪ್ಯಾಕೇಜ್ ಮತ್ತು ಅಗತ್ಯ ಬೆಂಬಲ ನೀಡುವುದಾಗಿ ಸ್ಟಾರ್‌ಬಕ್ಸ್ ಭರವಸೆ ನೀಡಿದೆ.

Read More
Next Story