ಎಲಾನ್‌ ಮಸ್ಕ್ ಎದುರು ಹಲವು ಸವಾಲು

........

ಕಳೆದ ವರ‍್ಷ ಶತಕೋಟ್ಯಧೀಶ ಎಲಾನ್ ಮಸ್ಕ್ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿರುವ ಟ್ವಿಟರ್ ಕಚೇರಿಗೆ ಹೋಗಿದ್ದರು. ಬಿಳಿ ಶೌಚಾಲಯ ಸಿಂಕ್ ಹಿಡಿದು ನಗುತ್ತ ಆಗಮಿಸಿ, ಆನಂತರ ಸಿಇಒ ಮತ್ತು ಕಂಪನಿಯ ಇತರ ಪ್ರಮುಖ ಆಡಳಿತ ಸಿಬ್ಬಂದಿಯನ್ನು ವಜಾ ಮಾಡಿದರು. ಬಳಿಕ, ಟ್ವಿಟರ್‌ನ್ನು ಬದಲಿಸಲು ಪ್ರಾರಂಭಿಸಿದರು. ಈಗ ಅದನ್ನು ʻಎಕ್ಸ್ʼ ಎಂದು ಕರೆಯಲಾಗುತ್ತದೆ.

ಟ್ವಿಟರ್ ಅನ್ನು ಹೋಲುವ ಎಕ್ಸ್‌ ನ್ನು ಬಳಸಿದ ಬಳಿಕ ಅವೆರಡೂ ಒಂದೇ ಅಲ್ಲ ಎಂದು ನಿಮ್ಮ ಅರಿವಿಗೆ ಬರುತ್ತದೆ. ಟ್ವಿಟರ್‌ನ ಹೆಸರು, ನೀಲಿ ಹಕ್ಕಿಯ ಲೋಗೋ, ಪರಿಶೀಲನಾ ವ್ಯವಸ್ಥೆ, ವಿಶ್ವಾಸಾರ‍್ಹತೆ ಮತ್ತು ಸುರಕ್ಷತಾ ಸಲಹಾ ಗುಂಪಿನಂತಹ ಪ್ರಮುಖ ಅಂಶಗಳನ್ನು ಮಸ್ಕ್ ತೆಗೆದುಹಾಕಿದ್ದಾರೆ. ವಿಷಯ ಮಿತಗೊಳಿಸುವಿಕೆ ಹೊರತಾಗಿ, ದ್ವೇಷ ಭಾಷಣದ ವಿರುದ್ಧ ನೀತಿ ಜಾರಿಗೊಳಿಸುವುದಾಗಿ ಹೇಳಿದ್ದಾರೆ. ವ್ಯವಸ್ಥೆಯನ್ನು ನಿರ‍್ವಹಿಸುತ್ತಿದ್ದ ಹೆಚ್ಚಿನ ಉದ್ಯೋಗಿಗಳನ್ನು, ಅಂದರೆ, ಎಂಜಿನಿಯರ್‌ಗಳು, ಮಾಡರೇಟರ್‌ಗಳು ಮತ್ತು ಕಾರ‍್ಯನಿರ‍್ವಾಹಕರನ್ನು ತೆಗೆದು ಹಾಕಿದರು.

ಟ್ವಿಟ್ಟರ್ ಅನ್ನು ದೀರ್ಘ ಕಾಲದಿಂದ ಗಮನಿಸುತ್ತಿದ್ದವರ ಪ್ರಕಾರ, ಸ್ವಲ್ಪಮಟ್ಟಿಗೆ ದೋಷಪೂರಿತ, ಆದರೆ, ಪ್ರಪಂಚದ ಘಟನೆಗಳನ್ನು ದಾಖಲಿಸಲು ನೆರವಾಗುತ್ತಿದ್ದ ವೇದಿಕೆಯೊಂದು ಅಂತ್ಯಗೊಂಡಿದೆ. ಏನಾಗುತ್ತದೆ ಎಂಬುದು ಅಸ್ಪಷ್ಟವಾಗಿದೆ ಮತ್ತು ಎಕ್ಸ್‌ ನ್ನು ಪ್ರತಿಯೊಬ್ಬರೂ ಬಳಸುವ ಜನಪ್ರಿಯ ಸಂವಹನ ಸಾಧನವನ್ನಾಗಿ ಮಾಡುವ ಗುರಿಯನ್ನು ಮಸ್ಕ್ ಸಾಧಿಸಬಹುದೇ? ಗೊತ್ತಿಲ್ಲ.

ಅನಿಶ್ಚಿತತೆ ಒಂದು ವರ‍್ಷದ ಹಿಂದೆ ಇದ್ದಂತೆಯೇ ಇದೆ. ಇನ್‌ಸೈಡರ್ ಇಂಟೆಲಿಜೆನ್ಸ್ ವಿಶ್ಲೇಷಕ ಜಾಸ್ಮಿನ್ ಎನ್‌ರ‍್ಗ್ ಪ್ರಕಾರ, ಎಕ್ಸ್‌ ಪ್ಲಾಟ್‌ಫಾ‌ರ್ಮ್‌ ಗೆ ಮಸ್ಕ್‌ ಯಾವುದೇ ಗಮನಾರ‍್ಹ ಸುಧಾರಣೆಗಳನ್ನು ಮಾಡಿಲ್ಲ ಮತ್ತು ಎಲ್ಲವನ್ನೂ ಒಳಗೊಂಡ ಸಾಧನ ಆಗಬೇಕೆನ್ನುವ ಅವರ ಗುರಿ ಮುಟ್ಟಲು ಇನ್ನೂ ದೂರವಿದೆ. ʻಬದಲಿಗೆ, ಬಳಕೆದಾರರು ಮತ್ತು ಜಾಹೀರಾತುದಾರರು ತೊರೆಯುವಂತೆ ಮಾಡಿದೆ ಮತ್ತು ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ ಸುದ್ದಿ ಕೇಂದ್ರವಾಗುವ ತನ್ನ ಉದ್ದೇಶವನ್ನು ಕಳೆದುಕೊಂಡಿದೆ.ʼ

ಕಂಪನಿಯನ್ನು ಖರೀದಿಸುವ ಮೊದಲು ಟ್ವಿಟರ್‌ನ ಬಳಕೆದಾರರಾಗಿದ್ದ ಮಸ್ಕ್, ಬೇರೆಯದೇ ಅನುಭವವನ್ನು ಹೊಂದಿದ್ದರು. ಆದರೆ, ಎಕ್ಸ್‌ ನಲ್ಲಿ ಅವರು ಮಾಡಿದ ಹೆಚ್ಚಿನ ಬದಲಾವಣೆಗಳು ಅವರ ವೈಯಕ್ತಿಕ ಅಭಿಪ್ರಾಯಗಳನ್ನು ಆಧರಿಸಿವೆ. ವಾಸ್ತವವೆಂದರೆ, ವೇದಿಕೆಯನ್ನು ಹೇಗೆ ನಿರ‍್ವಹಿಸಬೇಕು ಎಂಬ ಕುರಿತು ತಮ್ಮ ಲಕ್ಷಾಂತರ ಬೆಂಬಲಿಗರ ಸಲಹೆ ಕೇಳಿದರು. ಹೆಚ್ಚಿನವರು ರಾಜೀನಾಮೆ ನೀಡಬೇಕೆಂದು ಸಲಹೆ ನೀಡಿದ್ದರು!

ʻಜನರು ಮತ್ತು ಜಾಹೀರಾತು ಆದಾಯದಿಂದ ನಡೆಸಲ್ಪಡುವ ಸಾಮಾಜಿಕ ಜಾಲತಾಣದ ಬದಲು ಟ್ವಿಟರ್ ಅನ್ನು ತಂತ್ರಜ್ಞಾನ ಕಂಪನಿಯಾಗಿ ಪರಿವರ‍್ತಿಸುವಲ್ಲಿನ ಮಸ್ಕ್‌ ಪ್ರಯತ್ನಗಳು ಅದರ ಕುಸಿತಕ್ಕೆ ಹೆಚ್ಚು ಕೊಡುಗೆ ನೀಡಿದೆʼ ಎಂದು ಎನ್‌ರ‍್ಗ್ ಹೇಳುತ್ತಾರೆ. ನೀಲಿ ಚೆಕ್‌ ಮಾರ್ಕ್‌ ಎಂದರೆ, ಖಾತೆಯನ್ನು ಹೊಂದಿರುವ ವ್ಯಕ್ತಿ ಅಥವಾ ಸಂಸ್ಥೆಯನ್ನು ಸೆಲೆಬ್ರಿಟಿ, ಕ್ರೀಡಾಪಟು, ಪತ್ರಕರ‍್ತ ಅಥವಾ ಲಾಭೋದ್ದೇಶವಿಲ್ಲದ ಏಜೆನ್ಸಿ ಎಂದು ಪರಿಗಣಿಸಲಾಗಿದೆ.

ಆದರೆ, ತಮ್ಮ ಪೋಸ್ಟ್‌ಗಳನ್ನು ಪರಿಶೀಲಿಸದ ಬಳಕೆದಾರರಿಗಿಂತ ಹೆಚ್ಚು ಪ್ರಚಾರ ಪಡೆಯಲು ಇಚ್ಛಿಸುವವರು ಮಾಸಿಕ 8 ಡಾಲರ್‌ ಚಂದಾದಾರಿಕೆ ಶುಲ್ಕ ಪಾವತಿಸಬೇಕಿದೆ.

ಪ್ಲಾಟ್‌ಫಾರ‍್ಮ್‌ನ ಅಲ್ಗರಿದಮ್‌ಗಳಿಂದ ತಪ್ಪು ಮಾಹಿತಿ ಹೆಚ್ಚು ವ್ಯಾಪಕವಾಗಿ ಹರಡುತ್ತದೆ. ಮೀಡಿಯಾ ಮ್ಯಾಟರ್ಸ್‌ ಎಂಬ ಲಾಭೋದ್ದೇಶವಿಲ್ಲದ ಸಂಸ್ಥೆಯ ವರದಿ ಪ್ರಕಾರ, ಪರಿಶೀಲಿಸಿದ ನೀಲಿ ಚೆಕ್‌ ಮಾರ್ಕ್‌ಗಳನ್ನು ಹೊಂದಿರುವ ಅನೇಕ ಟ್ವಿಟರ್ ಖಾತೆಗಳು ಮತ್ತು ಸಾವಿರಾರು ಅನುಯಾಯಿಗಳು ಪಿತೂರಿ ಸಿದ್ಧಾಂತವನ್ನು ಹರಡಿವೆ. ಮೈನ್‌ನಲ್ಲಿ ಇತ್ತೀಚೆಗೆ ನಡೆದ ಸಾಮೂಹಿಕ ಗುಂಡಿನ ದಾಳಿಯು ಸರ‍್ಕಾರದ ಯೋಜಿತ ಘಟನೆಯಾಗಿದೆ. ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಸುಳ್ಳು ಮತ್ತು ತಪ್ಪು ಮಾಹಿತಿ ಹರಡುತ್ತಿದೆ ಎಂದು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಈ ಖಾತೆಗಳು ಅಪಪ್ರಚಾರ ಮಾಡುತ್ತಿದ್ದವು. ಈ ಬಗ್ಗೆ ಕಾಳಜಿ ವಹಿಸಿದ ಯುರೋಪಿಯನ್ ಕಮಿಷನ್, ಯುದ್ಧಕ್ಕೆ ಸಂಬಂಧಿಸಿದ ದ್ವೇಷದ ಮಾತು, ತಪ್ಪು ಮಾಹಿತಿ ಮತ್ತು ಹಿಂಸಾತ್ಮಕ ಭಯೋತ್ಪಾದಕ ವಿಷಯಗಳಿಗೆ ಸಂಬಂಧಿಸಿದಂತೆ ಎಕ್ಸ್‌ ಹೇಗೆ ವ್ಯವಹರಿಸುತ್ತದೆ ಎಂಬ ಕುರಿತು ಮಾಹಿತಿ ನೀಡುವಂತೆ ಕೋರಿದರು.

ವಿದೇಶಾಂಗ ನೀತಿ ಪರಿಣತ ಇಯಾನ್ ಬ್ರೆಮ್ಮರ್ ಎಕ್ಸ್‌ನಲ್ಲಿ ಹಂಚಿಕೊಂಡಿರುವಂತೆ, ಅಲ್ಗರಿದಮ್‌ಗಳ ಮೂಲಕ ವೇದಿಕೆಯು ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಹಬ್ಬಿಸುತ್ತಿರುವ ಸುಳ್ಳು ಮಾಹಿತಿಯ ಪ್ರಮಾಣವು ಅಗಾಧವಾಗಿದೆ. ತಮ್ಮ ವೃತ್ತಿಜೀವನದಲ್ಲಿ ಇಷ್ಟು ಪ್ರಮಾಣದ ತಪ್ಪು ಮಾಹಿತಿಗಳನ್ನು ಎದುರಿಸಿಲ್ಲ ಎಂದು ಹೇಳಿದ್ದರು.

ಎಕ್ಸ್‌ ನ ಆರ‍್ಥಿಕ ಸ್ಥಿತಿ ಅನಿಶ್ಚಿತವಾಗಿರುವುದು ಮಾತ್ರವಲ್ಲದೆ, ಅದರ ನಿಜವಾದ ಸ್ವರೂಪದ ಬಗ್ಗೆಯೂ ಅನುಮಾನಗಳಿವೆ. ಅಕ್ಟೋಬರ್ 27, 2022 ರಂದು ಟ್ವಿಟರ್ ಅನ್ನು 44 ಶತಕೋಟಿ ಡಾಲರ್‌ಗೆ ಖರೀದಿಸಿದಾಗ, ಅದು ಆರ‍್ಥಿಕ ತೊಂದರೆಗಳನ್ನು ಎದುರಿಸುತ್ತಿತ್ತು. ಈಗ ಪರಿಸ್ಥಿತಿ ಇನ್ನಷ್ಟು ಕೆಟ್ಟದಾಗಿದೆ. ಮಸ್ಕ್ ಕಂಪನಿಯನ್ನು ಖಾಸಗಿ ಸಂಸ್ಥೆಯಾಗಿ ಮಾಡಿದರು. ಆದ್ದರಿಂದ ಅದರ ಹಣಕಾಸಿನ ಮಾಹಿತಿ ಇನ್ನು ಮುಂದೆ ಸಾರ‍್ವಜನಿಕರಿಗೆ ಲಭ್ಯವಿರುವುದಿಲ್ಲ. ಆದರೆ, ಜುಲೈ ೨೦೨೩ರಲ್ಲಿ ಟೆಸ್ಲಾ ಸಿಇಒ, ʻಕಂಪನಿ ಜಾಹೀರಾತು ಆದಾಯದಲ್ಲಿ ಅರ‍್ಧದಷ್ಟು ಕಳೆದುಕೊಂಡಿದೆ; ಗಮನಾರ‍್ಹ ಪ್ರಮಾಣದ ಸಾಲವನ್ನು ಹೊಂದಿದೆʼ ಎಂದು ಹೇಳಿದ್ದರು.

ಜುಲೈ 14 ರಂದು ಅವರು ʻನಾವು ಹಣವನ್ನು ಕಳೆದುಕೊಳ್ಳುತ್ತಿದ್ದೇವೆʼ ಎಂದು ವೆಬ್‌ಸೈಟ್‌ನಲ್ಲಿ ಬರೆದಿದ್ದರು. ʻನಮ್ಮ ಜಾಹೀರಾತು ಆದಾಯ ಸುಮಾರು ಶೇ.50 ರಷ್ಟು ಕುಸಿದಿದೆ ಮತ್ತು ಸಾಕಷ್ಟು ಸಾಲವಿದೆ. ನಾವು ಬೇರೆ ಏನನ್ನಾದರೂ ಮಾಡುವ ಮೊದಲು ಖರ‍್ಚು ಮಾಡುತ್ತಿರುವುದಕ್ಕಿಂತ ಹೆಚ್ಚು ಹಣ ಗಳಿಸಲು ಪ್ರಾರಂಭಿಸಬೇಕುʼ ಎಂದಿದ್ದರು.

ಜನಪ್ರಿಯ ಬ್ರ‍್ಯಾಂಡ್‌ಗಳ ಮನವೊಲಿಸಲು ಎನ್‌ಬಿಸಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಜಾಹೀರಾತು ಉದ್ಯಮದಲ್ಲಿ ಸಂಪರ‍್ಕಗಳನ್ನು ಹೊಂದಿರುವ ಲಿಂಡಾ ಯಾಕರಿನೊ ಅವರನ್ನು ಮೇ ತಿಂಗಳಲ್ಲಿ ನೇಮಿಸಿಕೊಂಡರು. ಆದರೆ, ಈ ಕಾರ‍್ಯತಂತ್ರ ಯಶಸ್ವಿಯಾಗಲಿಲ್ಲ. ಕೆಲವು ಜಾಹೀರಾತುದಾರರು ಎಕ್ಸ್‌ಗೆ ವಾಪಸಾದರೂ, ಮೊದಲಿನಷ್ಟು ಆದಾಯ ಬರುತ್ತಿಲ್ಲ. ಆನ್‌ಲೈನ್ ಜಾಹೀರಾತು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದಿದ್ದರೂ, ಎಕ್ಸ್‌ ಗೆ ಬೇಡಿಕೆ ಹೆಚ್ಚಿಲ್ಲ.

ಫೇಸ್‌ಬುಕ್‌ನ ಮೂಲ ಕಂಪನಿಯಾದ ಮೆಟಾ ಮತ್ತು ಗೂಗಲ್‌ನ ಮೂಲ ಕಂಪನಿಯಾದ ಆಲ್ಫಾಬೆಟ್‌ಗೆ ಹೆಚ್ಚು ಲಾಭ ಬರುತ್ತಿದೆ. ಎಕ್ಸ್‌ ಜಾಹೀರಾತುಗಳಿಂದ 1.89 ಶತಕೋಟಿ ಡಾಲರ್‌ ಗಳಿಸುತ್ತದೆ ಎಂದು ಇನ್ಸೈಡರ್ ಇಂಟೆಲಿಜೆನ್ಸ್ ಅಂದಾಜಿಸಿದೆ. ಇದು ಕಂಪನಿ 2022ರಲ್ಲಿ ಗಳಿಸಿದ್ದಕ್ಕಿಂತ ಶೇ.54ರಷ್ಟು ಕಡಿಮೆ. 2015 ರಲ್ಲಿ ಅದರ ಜಾಹೀರಾತು ಆದಾಯ ಗರಿಷ್ಠ ಎಂದರೆ, 1.99 ಶತಕೋಟಿ ಡಾಲರ್‌ ಗಳಿಸಿತು.

ಎಕ್ಸ್‌ ಬಳಕೆದಾರರ ಸಂಖ್ಯೆ ಕಡಿಮೆಯಾಗಿದೆ ಎಂಬುದಕ್ಕೆ ಪುರಾವೆಗಳಿವೆ. ಸಿಮಿಲರ್‌ವೆಬ್(SimilarWeb)‌ ಸಂಶೋಧನಾ ಸಂಸ್ಥೆ ಪ್ರಕಾರ, ಕಳೆದ ವರ‍್ಷಕ್ಕೆ ಹೋಲಿಸಿದರೆ ಟ್ವಿಟರ್‌.ಕಾಂ ಭೇಟಿ ನೀಡುವವರ ಸಂಖ್ಯೆ ಶೇ. 14 ರಷ್ಟು ಕಡಿಮೆಯಾಗಿದೆ. ಜೊತೆಗೆ, ಜಾಹೀರಾತುದಾರರು ಬಳಸುವ ವೆಬ್‌ಸೈಟ್‌ಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಶೇ.16.5 ಇಳಿಕೆ ಕಂಡುಬಂದಿದೆ.

ʻಕಂಪನಿ ಮಸ್ಕ್‌ ಹಸ್ತಗತವಾಗುವ ಮುನ್ನವೇ ಟ್ವಿಟರ್ ನ ಸಾಂಸ್ಕೃತಿಕ ಪ್ರಾಮುಖ್ಯತೆ ಕಡಿಮೆಯಾಗಿತ್ತು. ಆದರೆ ಈಗ ವೇದಿಕೆ ಅಸ್ತಿತ್ವದಲ್ಲೇ ಇಲ್ಲ ಎನ್ನಿಸುತ್ತಿದೆ. ಇದು ನಿಧಾನವಾದ ಮತ್ತು ಕ್ರಮೇಣ ನಡೆಯುವ ಕುಸಿತʼ ಎಂದು ಬ್ರೆಮರ್‌ ಹೇಳುತ್ತಾರೆ.

ʻಆಸಕ್ತಿದಾಯಕ ಸಂಗತಿಯೆಂದರೆ, ಹೆಚ್ಚಿನ ಗಾಯಗಳು ಅವರಿಂದಲೇ ಉಂಟಾಗುತ್ತಿವೆʼ. ಸಾಮಾಜಿಕ ವೇದಿಕೆಯೊಂದು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಾಗ, ಅದಕ್ಕೆ ಕಾರಣಗಳು ಹೊರಗಿನ ಅಂಶಗಳನ್ನು ಒಳಗೊಂಡಿರುತ್ತವೆ. ಆದರೆ, ಈ ಪ್ರಕರಣದಲ್ಲಿ ಪರಿಸ್ಥಿತಿ ಹಾಗಿಲ್ಲ. ಮಸ್ಕ್‌ ತಮ್ಮದೇ ಕಂಪನಿಗೆ ಧಕ್ಕೆಯುಂಟು ಮಾಡುತ್ತಿದ್ದಾರೆ.


Next Story