
ಭಾರತದಲ್ಲಿಯೇ ಐಫೋನ್ ಉತ್ಪಾದಿಸಲು ಆ್ಯಪಲ್ ಸಜ್ಜು; ಉದ್ಯೋಗಾವಕಾಶ ಸೃಷ್ಟಿ
ಮಾರ್ಚ್ 2025ರಲ್ಲಿ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಆ್ಯಪಲ್ ಭಾರತದಲ್ಲಿ ಸುಮಾರು 4 ಕೋಟಿ ಐಫೋನ್‌ಗಳನ್ನು ಜೋಡಿಸಿತ್ತು. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಒಂದರಲ್ಲಿಯೇ ಆ್ಯಪಲ್ ಕಂಪನಿಯು ವಾರ್ಷಿಕವಾಗಿ 6 ಕೋಟಿಗಿಂತ ಹೆಚ್ಚು ಐಫೋನ್‌ಗಳನ್ನು ಮಾರಾಟ ಮಾಡುತ್ತದೆ.
ಆ್ಯಪಲ್ ಕಂಪನಿಯು ಭಾರತದಲ್ಲಿ ತನ್ನ ವಾರ್ಷಿಕ ಐಫೋನ್ ಉತ್ಪಾದನೆಯನ್ನು 2026ರ ಅಂತ್ಯದ ವೇಳೆಗೆ ದ್ವಿಗುಣಗೊಳಿಸಿ 8 ಕೋಟಿ ಯೂನಿಟ್ಗಿಂತಲೂ ದಾಟಿಸಲು ಯೋಜನೆ ರೂಪಿಸಿದೆ. ಇದು ಚೀನಾದಿಂದ ಉತ್ಪಾದನೆಯನ್ನು ಕಡಿಮೆ ಮಾಡಿ, ಸುಂಕದ ಅಪಾಯಗಳು ಮತ್ತು ಭೌಗೋಳಿಕ ರಾಜಕೀಯ ಒತ್ತಡಗಳನ್ನು ತಗ್ಗಿಸುವ ಆ್ಯಪಲ್ ಪ್ರಯತ್ನವಾಗಿದೆ. ಈ ಕ್ರಮದಿಂದ, ಮುಂದಿನ ವರ್ಷದ ಅಂತ್ಯದ ವೇಳೆಗೆ, ಆ್ಯಪಲ್ ಅಮೆರಿಕದಲ್ಲಿ ಮಾರಾಟ ಮಾಡುವ ಬಹುತೇಕ ಐಫೋನ್‌ಗಳು ಭಾರತದಲ್ಲೇ ತಯಾರಾಗಲಿವೆ ಎಂದು 'ಬ್ಲೂಮ್‌ಬರ್ಗ್' ವರದಿ ಮಾಡಿದೆ.
ಮಾರ್ಚ್ 2025ರಲ್ಲಿ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಆ್ಯಪಲ್ ಭಾರತದಲ್ಲಿ ಸುಮಾರು 4 ಕೋಟಿ ಐಫೋನ್‌ಗಳನ್ನು ಜೋಡಿಸಿತ್ತು. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಒಂದರಲ್ಲಿಯೇ ಆ್ಯಪಲ್ ಕಂಪನಿಯು ವಾರ್ಷಿಕವಾಗಿ 6 ಕೋಟಿಗಿಂತ ಹೆಚ್ಚು ಐಫೋನ್‌ಗಳನ್ನು ಮಾರಾಟ ಮಾಡುತ್ತದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಚೀನಾದ ಕಠಿಣ ಲಾಕ್‌ಡೌನ್‌ಗಳಿಂದಾಗಿ ಆ್ಯಪಲ್‌ನ ಅತಿದೊಡ್ಡ ಉತ್ಪಾದನಾ ಘಟಕದಲ್ಲಿ ಉತ್ಪಾದನೆ ಕುಸಿತ ಕಂಡಿತ್ತು. ಆ ವೇಳೆಯೇ ಕಂಪನಿಯು ಉತ್ಪಾದನೆಯನ್ನು ನಿಧಾನಕ್ಕೆ ಇತರ ದೇಶಗಳಿಗೆ ವರ್ಗಾಯಿಸಿತ್ತು.
ಟ್ರಂಪ್ ಸುಂಕಗಳು ಮತ್ತು ಒತ್ತಡ
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ವಿಧಿಸಿರುವ ಭಾರೀ ಸುಂಕಗಳು ಮತ್ತು ಬೀಜಿಂಗ್-ವಾಷಿಂಗ್ಟನ್ ನಡುವಿನ ವಾಣಿಜ್ಯ ಒತ್ತಡಗಳು ಆ್ಯಪಲ್‌ನ ಈ ನಿರ್ಧಾರಕ್ಕೆ ಕಾರಣ. ಚೀನಾದಿಂದ ಆಮದಾಗುವ ಸರಕುಗಳ ಮೇಲಿನ ಒಟ್ಟು ಸುಂಕವು ಶೇಕಡಾ 145ರಷ್ಟಿರುವುದರಿಂದ, ಚೀನಾದಲ್ಲಿ ಉತ್ಪಾದನೆಯು ಆ್ಯಪಲ್ಗೆ ದುಬಾರಿಯಾಗುತ್ತದೆ. ಇದೇ ವೇಳೆ ಇತರ ದೇಶಗಳಿಗೆ. ಸ್ಮಾರ್ಟ್‌ಫೋನ್‌ಗಳು ಮತ್ತು ಕಂಪ್ಯೂಟರ್‌ಗಳಂತಹ ಎಲೆಕ್ಟ್ರಾನಿಕ್ ಸರಕುಗಳಿಗೆ ಗರಿಷ್ಠ ಸುಂಕದ ವಿಭಾಗದಿಂದ ವಿನಾಯಿತಿಯನ್ನು ಟ್ರಂಪ್ ನೀಡಿದ್ದಾರೆ. ಹೀಗಾಗಿ ಭಾರತದಲ್ಲಿ ತಯಾರಾದ ಐಫೋನ್‌ಗಳಿಗೆ ಸುಂಕವಿಲ್ಲ. ಈ ನಿಟ್ಟಿನಲ್ಲಿ ಆ್ಯಪಲ್ಗೆ ಭಾರತದೇ ಅತ್ಯುತ್ತಮ ತಾಣವಾಗಿದೆ.
ಭಾರತದಲ್ಲಿ ಉತ್ಪಾದನೆಯ ವಿಸ್ತರಣೆ
ಮಾರ್ಚ್ 2025ರಲ್ಲಿ ಕೊನೆಗೊಂಡ 12 ತಿಂಗಳ ಅವಧಿಯಲ್ಲಿ ಆ್ಯಪಲ್ ಕಂಪನಿಯು, ಭಾರತದಲ್ಲಿ 2.2 ಕೋಟಿ ಡಾಲರ್ ಮೌಲ್ಯದ ಐಫೋನ್‌ಗಳನ್ನು ಜೋಡಿಸಿದ್ದು, ಇದು ಹಿಂದಿನ ವರ್ಷಕ್ಕಿಂತ ಶೇಕಡಾ 60ರಷ್ಟು ಏರಿಕೆ. ಪ್ರಸ್ತುತ, ಆ್ಯಪಲ್‌ನ ಒಟ್ಟು ಐಫೋನ್ ಉತ್ಪಾದನೆಯ ಶೇಕಡಾ 20ರಷ್ಟು, ಅಂದರೆ ಪ್ರತಿ ಐದರಲ್ಲಿ ಒಂದು ಐಫೋನ್, ಭಾರತದಲ್ಲಿ ತಯಾರಾಗುತ್ತಿದೆ. ಅಂದರೆ, ಚೀನಾವೇ ಇನ್ನೂ ಆ್ಯಪಲ್‌ನ ಅತಿದೊಡ್ಡ ಉತ್ಪಾದನಾ ದೇಶವಾಗಿಯೇ ಉಳಿದಿದೆ.
ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್, ಭಾರತದಲ್ಲಿ ತಯಾರಾಗುವ ಬಹುತೇಕ ಐಫೋನ್‌ಗಳನ್ನು ಜೋಡಿಸುತ್ತದೆ. ಇದರ ಜೊತೆಗೆ, ಟಾಟಾ ಗ್ರೂಪ್‌ನ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಿಭಾಗವೂ ಪ್ರಮುಖ ಪೂರೈಕೆದಾರ. ಫಾಕ್ಸ್‌ಕಾನ್ ಮತ್ತು ಟಾಟಾ ಗ್ರೂಪ್ ದಕ್ಷಿಣ ಭಾರತದಲ್ಲಿ ಹೊಸ ಉತ್ಪಾದನಾ ಘಟಕಗಳನ್ನು ನಿರ್ಮಿಸುತ್ತಿದ್ದು, ಉತ್ಪಾದನಾ ಸಾಮರ್ಥ್ಯ ವಿಸ್ತರಿಸುತ್ತಿದೆ. ಉದಾಹರಣೆಗೆ, ಟಾಟಾ ಗ್ರೂಪ್ ತಮಿಳುನಾಡಿನ ಹೊಸೂರಿನಲ್ಲಿ 40,000 ಕಾರ್ಮಿಕರನ್ನು ಒಳಗೊಂಡ ಹೊಸ ಐಫೋನ್ ಉತ್ಪಾದನಾ ಘಟಕ ತೆರೆಯಲು ಯೋಜಿಸಿದೆ.
ಯುಎಸ್‌ಗೆ ರಫ್ತು ಏರಿಕೆ
ಫೆಬ್ರವರಿಯಲ್ಲಿ ಟ್ರಂಪ್ "ಪರಸ್ಪರ ಸುಂಕ" ಯೋಜನೆಗಳನ್ನು ಘೋಷಿಸಿದ ನಂತರ, ಭಾರತದಿಂದ ಯುಎಸ್‌ಗೆ ಐಫೋನ್ ಸರಬರಾಜು ಗಣನೀಯವಾಗಿ ಏರಿಕೆಯಾಗಿದೆ. ಉದಾಹರಣೆಗೆ, ಫಾಕ್ಸ್‌ಕಾನ್ ಒಂದೇ ಕಂಪನಿ ಮಾರ್ಚ್ ತಿಂಗಳಲ್ಲಿ 1.31 ಬಿಲಿಯನ್ ಡಾಲರ್ ಮೌಲ್ಯದ ಆ್ಯಪಲ್ ಉಪಕರಣಗಳನ್ನು ಅಮರಿಕಕ್ಕೆ ರಫ್ತು ಮಾಡಿದೆ. ಒಟ್ಟಾರೆಯಾಗಿ, ಈ ವರ್ಷ ಫಾಕ್ಸ್‌ಕಾನ್ 5.3 ಬಿಲಿಯನ್ ಡಾಲರ್ ಮೌಲ್ಯದ ಐಫೋನ್‌ಗಳನ್ನು ರವಾನಿಸಿದೆ, ಇದರಲ್ಲಿ ಐಫೋನ್ 13, 14, 16 ಮತ್ತು 16e ಮಾದರಿಗಳು ಸೇರಿವೆ.
ಉದ್ಯೋಗಾವಕಾಶ
ಆ್ಯಪಲ್ ಈಗ ಭಾರತದಲ್ಲಿ ತನ್ನ ಸಂಪೂರ್ಣ ಐಫೋನ್ ಶ್ರೇಣಿ ಜೋಡಿಸುತ್ತಿದೆ, ಇದರಲ್ಲಿ ದುಬಾರಿ ಟೈಟಾನಿಯಂ ಪ್ರೊ ಮಾದರಿಗಳೂ ಸೇರಿವೆ. ಇದು, ಭಾರತದ ಉತ್ಪಾದನಾ ಸಾಮರ್ಥ್ಯದ ಮೇಲಿನ ಆ್ಯಪಲ್‌ನ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಜೊತೆಗೆ, ಆ್ಯಪಲ್ ಭಾರತದಲ್ಲಿ ತನ್ನ ರೀಟೇಲ್ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದ್ದು, ಬೆಂಗಳೂರು, ಪುಣೆ, ದೆಹಲಿ-ಎನ್‌ಸಿಆರ್ ಮತ್ತು ಮುಂಬೈನಲ್ಲಿ ನಾಲ್ಕು ಹೊಸ ಮಳಿಗೆಗಳನ್ನು ತೆರೆಯಲು ಯೋಜಿಸಿದೆ. ಕಂಪನಿಯು ಭಾರತದಲ್ಲಿ ಈಗಾಗಲೇ 3,000ಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದ್ದು, ಉತ್ಪಾದನೆ ಮತ್ತು ರೀಟೆಲ್ ವಿಭಾಗಗಳಲ್ಲಿ ನೂರಾರು ಹೊಸ ಉದ್ಯೋಗಗಳಿಗೆ ನೇಮಕಗಳು ನಡೆಯುತ್ತಿವೆ.
ಭಾರತಕ್ಕೆ ಆರ್ಥಿಕ ಪ್ರಯೋಜನಗಳು
ಆ್ಯಪಲ್‌ನ ಈ ನಿರ್ಧಾರವು ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರಕ್ಕೆ ಭಾರೀ ಉತ್ತೇಜನ ನೀಡಲಿದೆ. ಈಗಾಗಲೇ ಆ್ಯಪಲ್‌ನ ಭಾರತದ ಉತ್ಪಾದನೆಯು ಸುಮಾರು 2,00,000 ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಅಂದಾಜಿಸಲಾಗಿದೆ. 2026-27ರ ವೇಳೆಗೆ ಭಾರತವು ಆ್ಯಪಲ್‌ನ ಜಾಗತಿಕ ಐಫೋನ್ ಉತ್ಪಾದನೆಯ ಶೇಕಡಾ 32 ಮತ್ತು ಉತ್ಪಾದನಾ ಮೌಲ್ಯದ ಶೇಕಡಾ 26ರಷ್ಟನ್ನು ಒಳಗೊಂಡಿರಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ಇದು ಭಾರತದ ಐಫೋನ್ ಉತ್ಪಾದನಾ ಮೌಲ್ಯವನ್ನು 34 ಬಿಲಿಯನ್ ಡಾಲರ್‌ಗಿಂತಲೂ ಮೀರಿಸಬಹುದು.
ಭಾರತಕ್ಕೆ ಸವಾಲುಗಳು
ಆ್ಯಪಲ್‌ನ ಈ ಯೋಜನೆಯ ಯಶಸ್ಸು ಭಾರತದಲ್ಲಿ ಕೆಲವು ಸವಾಲುಗಳನ್ನು ಎದುರಿಸುವುದರ ಮೇಲೆ ಅವಲಂಬಿತವಾಗಿದೆ. ಚೀನಾದಂತಹ ಇತರ ಉತ್ಪಾದನಾ ಕೇಂದ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಉತ್ಪಾದನಾ ವೆಚ್ಚ ಕಡಿಮೆ ಮಾಡುವುದು, ಘಟಕಗಳ ಮೇಲಿನ ಸುಂಕವನ್ನು ತಗ್ಗಿಸುವುದು, ಕಾರ್ಮಿಕ ಕಾನೂನುಗಳನ್ನು ಸುಧಾರಿಸುವುದು ಮತ್ತು ಲಾಜಿಸ್ಟಿಕ್ಸ್ ಸರಳೀಕರಣದಂತಹ ಕ್ರಮಗಳು ಅಗತ್ಯವಾಗಿವೆ. ವಿಯೆಟ್ನಾಂನಂತಹ ಇತರ ದೇಶಗಳು ಸಹ ಆ್ಯಪಲ್ಗೆ ಆಕರ್ಷಕ ಪರ್ಯಾಯಗಳಾಗಿರುವುದರಿಂದ, ಭಾರತ ಸರ್ಕಾರವು ಈ ಸವಾಲುಗಳನ್ನು ಪರಿಹರಿಸಲು ತಕ್ಷಣದ ಸುಧಾರಣೆಗಳನ್ನು ಕೈಗೊಳ್ಳಬೇಕಾಗಿದೆ.
ಇತರ ಟೆಕ್ ಕಂಪನಿಗಳ ಆಸಕ್ತಿ
ಆ್ಯಪಲ್ ಒಂದೇ ಅಲ್ಲ, ಸ್ಯಾಮ್‌ಸಂಗ್ ಮತ್ತು ಗೂಗಲ್‌ನ ಮೂಲ ಕಂಪನಿಯಾದ ಆಲ್ಫಾಬೆಟ್ ಇಂಕ್ ಕೂಡ ಭಾರತದಲ್ಲಿ ತಮ್ಮ ಸ್ಮಾರ್ಟ್‌ಫೋನ್ ಉತ್ಪಾದನೆ ವಿಸ್ತರಿಸಲು ಯೋಜಿಸುತ್ತಿವೆ. ಸ್ಯಾಮ್‌ಸಂಗ್ ವಿಯೆಟ್ನಾಂನಿಂದ ತನ್ನ ಉತ್ಪಾದನೆಯನ್ನು ಭಾರತಕ್ಕೆ ಸ್ಥಳಾಂತರಿಸಲು ಚಿಂತಿಸುತ್ತಿದ್ದರೆ, ಗೂಗಲ್ ಡಿಕ್ಸನ್ ಟೆಕ್ನಾಲಜೀಸ್ ಮತ್ತು ಫಾಕ್ಸ್‌ಕಾನ್‌ನಂತಹ ಪಾಲುದಾರರೊಂದಿಗೆ ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಯ ಭಾಗವನ್ನು ಭಾರತಕ್ಕೆ ವರ್ಗಾಯಿಸಲು ಚರ್ಚೆ ನಡೆಸುತ್ತಿದೆ.