
ಆರ್‌ಬಿಐ
ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಎಫೆಕ್ಟ್: ಆರ್‌ಬಿಐ ಬಡ್ಡಿದರ ಯಥಾಸ್ಥಿತಿ, ಶೇ 5.25ರಲ್ಲೇ ಮುಂದುವರಿದ ರೆಪೊ ದರ
ಬ್ಯಾಂಕ್‌ಗಳ ಸ್ಟ್ಯಾಂಡಿಂಗ್ ಡೆಪಾಸಿಟ್ ಫೆಸಿಲಿಟಿ (SDF) ದರ ಶೇ 5ರಷ್ಟು ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (MSF) ಹಾಗೂ ಬ್ಯಾಂಕ್ ದರಗಳು ಶೇ 5.5ರಲ್ಲೇ ಮುಂದುವರಿದಿವೆ.
ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಭೀತಿ ಹಾಗೂ ಜಾಗತಿಕ ಆರ್ಥಿಕ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟಿರುವ ಭಾರತೀಯ ರಿಸರ್ವ್ ಬ್ಯಾಂಕ್ , ತನ್ನ ಪ್ರಮುಖ ಸಾಲದ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿದೆ. ತನ್ನ 'ತಟಸ್ಥ' ನಿಲುವನ್ನು ಮುಂದುವರಿಸಿರುವ ರಿಸರ್ವ್ ಬ್ಯಾಂಕ್, ಸಾಲದ ಮೇಲಿನ ಬಡ್ಡಿದರ ಏರಿಕೆಯ ಬಿಸಿ ತಟ್ಟುವ ಆತಂಕದಲ್ಲಿದ್ದ ಜನಸಾಮಾನ್ಯರಿಗೆ ಸದ್ಯ ಪರಿಹಾರ ಕೊಟ್ಟಿದೆ. .
ಬುಧವಾರ ಪ್ರಕಟಗೊಂಡ ಹಣಕಾಸು ನೀತಿ ಸಮಿತಿಯ ದ್ವೈಮಾಸಿಕ ಸಭೆಯ ನಿರ್ಣಯಗಳನ್ನು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಪ್ರಕಟಿಸಿದರು. "ಮ್ಯಾಕ್ರೊ ಆರ್ಥಿಕ ಬೆಳವಣಿಗೆಗಳು ಮತ್ತು ಭವಿಷ್ಯದ ಆರ್ಥಿಕ ಮುನ್ನೋಟವನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ, ರೆಪೊ ದರವನ್ನು ಶೇ 5.25 ರಲ್ಲೇ ಮುಂದುವರಿಸಲು ಸಮಿತಿಯು ಸರ್ವಾನುಮತದಿಂದ ನಿರ್ಧರಿಸಿದೆ" ಎಂದು ಅವರು ತಿಳಿಸಿದರು. ಡಿಸೆಂಬರ್ 2025ರ ಬಳಿಕ ರೆಪೊ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಇದರೊಂದಿಗೆ, ಬ್ಯಾಂಕ್‌ಗಳ ಸ್ಟ್ಯಾಂಡಿಂಗ್ ಡೆಪಾಸಿಟ್ ಫೆಸಿಲಿಟಿ (SDF) ದರ ಶೇ 5ರಷ್ಟು ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (MSF) ಹಾಗೂ ಬ್ಯಾಂಕ್ ದರಗಳು ಶೇ 5.5ರಲ್ಲೇ ಮುಂದುವರಿದಿವೆ.
ಬಡ್ಡಿದರ ಯಥಾಸ್ಥಿತಿಗೆ ಕಾರಣಗಳೇನು?
ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ಭೌಗೋಳಿಕ-ರಾಜಕೀಯ ಅನಿಶ್ಚಿತತೆಗಳು ತೀವ್ರಗೊಂಡಿರುವುದರಿಂದ ಆರ್‌ಬಿಐ ಕಾದು ನೋಡುವ ತಂತ್ರ ಅನುಸರಿಸಿದೆ. ಪ್ರಸ್ತುತ ಪ್ರಧಾನ ಹಣದುಬ್ಬರ ನಿಗದಿತ ಗುರಿಯೊಳಗೆ ನಿಯಂತ್ರಣದಲ್ಲಿದ್ದರೂ, ಮುಂದಿನ ದಿನಗಳಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಆಹಾರ ಮತ್ತು ಇಂಧನ ಬೆಲೆಗಳು ಹೆಚ್ಚಾಗುವ ಅಪಾಯವಿದೆ ಎಂದು ಗವರ್ನರ್ ಕಳವಳ ವ್ಯಕ್ತಪಡಿಸಿದ್ದಾರೆ.
ಕೋರ್ ಹಣದುಬ್ಬರ (Core inflation) ಸ್ಥಿರವಾಗಿದ್ದರೂ, ಜಾಗತಿಕ ಪೂರೈಕೆ ಸರಪಳಿಯಲ್ಲಿ ಉಂಟಾಗಿರುವ ವ್ಯತ್ಯಯವು ಮುಂದಿನ ದಿನಗಳಲ್ಲಿ ಹಣದುಬ್ಬರದ ಹಾದಿಯನ್ನು ಅನಿಶ್ಚಿತಗೊಳಿಸಬಹುದು ಎಂದು ಅಂದಾಜಿಸಲಾಗಿದೆ.
ಸದೃಢ ಆರ್ಥಿಕತೆ, ಎದುರಾಗಬಹುದಾದ ಸವಾಲುಗಳು
ದೇಶದ ಆರ್ಥಿಕತೆಯು ಬಲವಾದ ಪ್ರಗತಿಯನ್ನು ತೋರಿಸುತ್ತಿದ್ದು, ದೇಶೀಯ ಅನುಭೋಗ ಮತ್ತು ಹೂಡಿಕೆಗಳು ಆರ್ಥಿಕತೆಗೆ ಆಸರೆಯಾಗಿವೆ. ಆದಾಗ್ಯೂ, ಸಂಘರ್ಷದ ಪರಿಣಾಮವಾಗಿ ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಯು ಆಮದು ವೆಚ್ಚವನ್ನು ಹೆಚ್ಚಿಸಿ, 'ಚಾಲ್ತಿ ಖಾತೆ ಕೊರತೆ'ಯನ್ನು ಹಿಗ್ಗಿಸುವ ಸಾಧ್ಯತೆಯಿದೆ ಎಂದು ಆರ್‌ಬಿಐ ಎಚ್ಚರಿಸಿದೆ. ಇಂಧನ ಮತ್ತು ಸರಕು ಮಾರುಕಟ್ಟೆಗಳಲ್ಲಿನ ಅಡೆತಡೆಗಳು ಕೈಗಾರಿಕೆ ಮತ್ತು ಕೃಷಿ ವಲಯದ ಮೇಲೆ ಪ್ರಭಾವ ಬೀರಬಹುದು.
"ಭಾರತೀಯ ಆರ್ಥಿಕತೆಯ ಮೂಲಭೂತ ಅಂಶಗಳು ಅತ್ಯಂತ ಸದೃಢವಾಗಿದ್ದು, ಯಾವುದೇ ಜಾಗತಿಕ ಆರ್ಥಿಕ ಆಘಾತಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿವೆ. ಮುಂಬರುವ ದಿನಗಳಲ್ಲಿ ಜಾಗತಿಕ ಮತ್ತು ದೇಶೀಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ, ಅಗತ್ಯಬಿದ್ದರೆ ಸೂಕ್ತ ಕ್ರಮ ಕೈಗೊಳ್ಳಲು ಆರ್‌ಬಿಐ ಸದಾ ಸಿದ್ಧವಿದೆ" ಎಂದು ಗವರ್ನರ್ ಸಂಜಯ್ ಮಲ್ಹೋತ್ರಾ ಅಭಯ ನೀಡಿದ್ದಾರೆ.

