Petrol Rate: ಯುದ್ಧದ ಬೆನ್ನಲ್ಲೇ ಭಾರತದಲ್ಲಿ ಇಂಧನ ದರ ಏರಿಕೆ: ಪೆಟ್ರೋಲ್‌ಗೆ 5 ರೂ, ಡೀಸೆಲ್‌ಗೆ 3 ರೂ ಹೆಚ್ಚಳ
x

Petrol Rate: ಯುದ್ಧದ ಬೆನ್ನಲ್ಲೇ ಭಾರತದಲ್ಲಿ ಇಂಧನ ದರ ಏರಿಕೆ: ಪೆಟ್ರೋಲ್‌ಗೆ 5 ರೂ, ಡೀಸೆಲ್‌ಗೆ 3 ರೂ ಹೆಚ್ಚಳ

ಕರ್ನಾಟಕದಲ್ಲೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದ್ದು, ಬೆಂಗಳೂರು ಮೈಸೂರು, ಹುಬ್ಬಳ್ಳಿ ಹಾಗೂ ಮಂಗಳೂರಿನಲ್ಲಿ ವಿಭಿನ್ನ ದರದಲ್ಲಿ ಪೆಟ್ರೋಲ್ ಮಾರಾಟವಾಗುತ್ತಿದೆ.


Click the Play button to hear this message in audio format

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿ ಹಾಗೂ ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆಯ ಪರಿಣಾಮ ಭಾರತದಲ್ಲೂ ಗೋಚರಿಸಲು ಆರಂಭಿಸಿದೆ. ದೇಶದ ಅತಿದೊಡ್ಡ ಖಾಸಗಿ ಇಂಧನ ಚಿಲ್ಲರೆ ಮಾರಾಟ ಸಂಸ್ಥೆಯಾಗಿರುವ ನಾಯರಾ ಎನರ್ಜಿ, ಗುರುವಾರ ಪೆಟ್ರೋಲ್ ದರವನ್ನು ಲೀಟರ್‌ಗೆ 5 ಹಾಗೂ ಡೀಸೆಲ್ ದರವನ್ನು 3 ರೂಪಾಯಿ ಹೆಚ್ಚಿಸಿರುವುದಾಗಿ ವರದಿಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇನ್‌ಪುಟ್ ವೆಚ್ಚ ಏರಿಕೆಯಾಗಿರುವ ಹಿನ್ನೆಲೆ, ಅದರ ಒಂದು ಭಾಗವನ್ನು ಗ್ರಾಹಕರ ಮೇಲೆ ವರ್ಗಾಯಿಸುವ ಅನಿವಾರ್ಯತೆ ಎದುರಾಗಿದೆ ಎಂಬುದಾಗಿ ಮೂಲಗಳು ತಿಳಿಸಿವೆ.

ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ದರಗಳು ಏಪ್ರಿಲ್ 2022ರಿಂದ ಸಾಮಾನ್ಯವಾಗಿ ಸ್ಥಿರವಾಗಿಯೇ ಉಳಿದಿವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸೇರಿದಂತೆ ಸರ್ಕಾರಿ ತೈಲ ಮಾರಾಟ ಕಂಪನಿಗಳು ಇಂಧನ ದರಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿದ್ದರೆ, ಖಾಸಗಿ ವಿತರಕರ ಮೇಲೆ ಹೆಚ್ಚುವರಿ ಆರ್ಥಿಕ ಒತ್ತಡ ನಿರ್ಮಾಣವಾಗಿದೆ. ಸರ್ಕಾರದಿಂದ ನೇರ ಪರಿಹಾರ ಸಿಗದೆ ನಷ್ಟವನ್ನು ತಡೆಯಲು ಖಾಸಗಿ ಸಂಸ್ಥೆಗಳು ದರ ಏರಿಕೆಯ ಹೆಜ್ಜೆ ಇಡಬೇಕಾದ ಪರಿಸ್ಥಿತಿ ಬಂದಿದೆ ಎಂಬ ವಾದ ಕೇಳಿಬರುತ್ತಿದೆ.

ಯುದ್ಧದ ಪರಿಣಾಮ ಏನು?

ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ಸೈನಿಕ ದಾಳಿಗಳನ್ನು ಆರಂಭಿಸಿದ ಬಳಿಕ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ಅಶಾಂತಿ ಉಂಟಾಯಿತು. ಅದರ ಪ್ರತಿಯಾಗಿ ತೆಹ್ರಾನ್ ಕೈಗೊಂಡ ಕ್ರಮಗಳು ಪಶ್ಚಿಮ ಏಷ್ಯಾದ ಸಾಗಾಟ ಮಾರ್ಗಗಳ ಮೇಲೆ ಆತಂಕ ಹೆಚ್ಚಿಸಿವೆ. ಪರಿಣಾಮವಾಗಿ ಅಂತರರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಸುಮಾರು 50 ಶೇಕಡಾ ಏರಿಕೆ ಕಂಡಿದ್ದು, ಈ ತಿಂಗಳ ಆರಂಭದಲ್ಲಿ ಬ್ಯಾರೆಲ್‌ಗೆ 119 ಡಾಲರ್ ಮಟ್ಟವರೆಗೂ ಮುಟ್ಟಿದ ಬಳಿಕ ಈಗ ಸುಮಾರು 100 ಡಾಲರ್ ಸುತ್ತ ತಿರುಗುತ್ತಿದೆ. ಭಾರತ ತನ್ನ ಕಚ್ಚಾ ತೈಲ ಅವಶ್ಯಕತೆಯ ಸುಮಾರು 88 ಶೇಕಡಾವನ್ನು ಆಮದು ಮಾಡುವುದರಿಂದ, ಇಂತಹ ಜಾಗತಿಕ ಅಲೆಮಾರಿ ದೇಶೀಯ ಮಾರುಕಟ್ಟೆಯ ಮೇಲೂ ತಕ್ಷಣದ ಒತ್ತಡ ತರುತ್ತಿದೆ.

ರಾಜ್ಯಾವಾರು ದರ ಬದಲಾವಣೆ, ತೆರಿಗೆಯೂ ಕಾರಣ

ನಾಯರಾ ಎನರ್ಜಿ ದೇಶದ 1,02,075 ಪೆಟ್ರೋಲ್ ಬಂಕ್‌ಗಳಲ್ಲಿ 6,967 ಔಟ್‌ಲೆಟ್‌ಗಳನ್ನು ನಡೆಸುತ್ತಿರುವ ಪ್ರಮುಖ ಖಾಸಗಿ ಕಂಪನಿ. ಸಂಸ್ಥೆ ಪೆಟ್ರೋಲ್‌ಗೆ 5 ಮತ್ತು ಡೀಸೆಲ್‌ಗೆ 3 ಹೆಚ್ಚಳ ಘೋಷಿಸಿದ್ದರೂ, ಪ್ರತಿ ರಾಜ್ಯದಲ್ಲಿ ವ್ಯಾಟ್‌ ಸೇರಿದಂತೆ ಸ್ಥಳೀಯ ತೆರಿಗೆಗಳು ವಿಭಿನ್ನವಾಗಿರುವುದರಿಂದ ಗ್ರಾಹಕರು ಭರಿಸಬೇಕಾದ ನಿಜವಾದ ಹೆಚ್ಚಳ ಬೇರೆಬೇರೆ ಆಗಲಿದೆ. ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ದರ ಏರಿಕೆ ಲೀಟರ್‌ಗೆ 5.30ರವರೆಗೂ ತಲುಪಬಹುದು ಎಂದು ಹೇಳಲಾಗಿದೆ.

ಜಿಯೋ-ಬಿಪಿ ಸ್ಥಿರ, ಪ್ರೀಮಿಯಂ ಇಂಧನದ ಮೇಲೆ ಈಗಾಗಲೇ ಏರಿಕೆ

ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಬಿಪಿ ಜಂಟಿ ಹೂಡಿಕೆಯಲ್ಲಿ ಕಾರ್ಯನಿರ್ವಹಿಸುವ ಜಿಯೋ-ಬಿಪಿ ಸಂಸ್ಥೆ ಸದ್ಯಕ್ಕೆ ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಹೆಚ್ಚಿಸಿಲ್ಲ ಎನ್ನಲಾಗಿದೆ. ಆದರೆ, ಕಳೆದ ವಾರ ಸರ್ಕಾರಿ ತೈಲ ಕಂಪನಿಗಳು ಪ್ರೀಮಿಯಂ ಅಥವಾ ಹೈಯರ್-ಗ್ರೇಡ್ ಪೆಟ್ರೋಲ್ ದರವನ್ನು ಲೀಟರ್‌ಗೆ 2 ಹೆಚ್ಚಿಸಿದ್ದವು. ಜೊತೆಗೆ ಕೈಗಾರಿಕಾ ಬಳಕೆಗೆ ಮಾರಾಟವಾಗುವ ಬಲ್ಕ್ ಡೀಸೆಲ್ ದರವನ್ನೂ ಗಣನೀಯವಾಗಿ ಏರಿಸಲಾಗಿತ್ತು. ದೆಹಲಿಯಲ್ಲಿ ಪ್ರೀಮಿಯಂ 95-ಆಕ್ಟೇನ್ ಪೆಟ್ರೋಲ್ ದರ 99.89 ರೂಪಾಯಿಯಿಂದ 101.89ಕ್ಕೆ ಏರಿದರೆ, ಬಲ್ಕ್ ಡೀಸೆಲ್ 87.67ರಿಂದ 109.59ಕ್ಕೆ ರೂಪಾಯಿಗೆ ಹೆಚ್ಚಳ ಕಂಡಿದೆ. ಆದರೆ ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಇನ್ನೂ ಕ್ರಮವಾಗಿ 94.77 ಮತ್ತು 87.67ರಲ್ಲೇ ಉಳಿದಿವೆ.

ಬೆಂಗಳೂರಿನಲ್ಲಿ ಎಷ್ಟು?

ಕರ್ನಾಟಕದ ನಾನಾ ನಗರದಲ್ಲಿ ವಿಭಿನ್ನ ರೀತಿಯಲ್ಲಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ಸುಮಾರು 107.90 ರಿಂದ 108.30 ರೂಪಾಯಿಯಷ್ಟಿದೆ. ಮೈಸೂರು, ಮಂಗಳೂರು ಮತ್ತು ಬೆಳಗಾವಿಯಂತಹ ನಗರಗಳಲ್ಲಿ ಸ್ಥಳೀಯ ತೆರಿಗೆಗಳಿಗೆ ಅನುಗುಣವಾಗಿ ಪೆಟ್ರೋಲ್ ಬೆಲೆ ತಲಾ 107.10 ರಿಂದ 108.60 ರೂಪಾಯಿ ನಡುವೆ ಹಾಗೂ ಡೀಸೆಲ್ ಬೆಲೆ 93.10 ರಿಂದ 94.80 ರೂಪಾಯಿ ಆಸುಪಾಸಿನಲ್ಲಿದೆ.

ಹೋರ್ಮುಝ್ ಜಲಸಂಧಿಯ ಆತಂಕ

ಭಾರತಕ್ಕೆ ಬೇಕಾಗಿರುವ ಕಚ್ಚಾ ತೈಲದ ದೊಡ್ಡ ಭಾಗ ಹಾಗೂ ನೈಸರ್ಗಿಕ ಅನಿಲದ ಸುಮಾರು ಅರ್ಧದಷ್ಟು ಪಶ್ಚಿಮ ಏಷ್ಯಾ ಮಾರ್ಗದಿಂದ ಬರುತ್ತದೆ. ಇದರಲ್ಲಿ ಹೋರ್ಮುಝ್ ಜಲಸಂಧಿ ಅತ್ಯಂತ ನಿರ್ಣಾಯಕ ದಾರಿ. ಇರಾನ್ ನೀಡಿದ ಎಚ್ಚರಿಕೆಗಳು ಮತ್ತು ವಿಮಾ ಸಂಸ್ಥೆಗಳು ವಿಮೆ ನೀಡುವ ಭರವಸೆ ಹಿಂಪಡೆದ ಪರಿಣಾಮ ಈ ಮಾರ್ಗದ ಟ್ಯಾಂಕರ್ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಇಂಧನ ಮಾರಾಟ ಸಂಸ್ಥೆಗಳು ದರ ಏರಿಕೆಯ ಮೂಲಕ ನಷ್ಟದ ಒತ್ತಡವನ್ನು ತಗ್ಗಿಸಿಕೊಳ್ಳಲು ಯತ್ನಿಸುತ್ತಿವೆ.

Read More
Next Story