
ಸಾಂದರ್ಭಿಕ ಚಿತ್ರ
IPL 2026 : ಕನ್ನಡಿಗರ ಹೆಮ್ಮೆಯು ನಂದಿನಿ ಈಗ ಆರ್‌ಸಿಬಿಗೆ 'ಅಧಿಕೃತ ಡೈರಿ ಪಾರ್ಟ್ನರ್'
ಕರ್ನಾಟಕದಲ್ಲಿ ಮನೆ ಮಾತಾಗಿರುವ ನಂದಿನಿ ಬ್ರಾಂಡ್‌ನೊಂದಿಗೆ ಈ ಸಹಭಾಗಿತ್ವ ಆರ್‌ಸಿಬಿ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಗೆ ಕರ್ನಾಟಕದ ಹೆಮ್ಮೆಯ ಕೆಎಂಎಫ್‌ನ (KMF) 'ನಂದಿನಿ' ಬ್ರ್ಯಾಂಡ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ 'ಅಧಿಕೃತ ಡೈರಿ ಪಾರ್ಟ್ನರ್' (Official Dairy Partner) ಆಗಿ ಅಧಿಕೃತವಾಗಿ ಘೋಷಣೆಯಾಗಿದೆ.
ಕಳೆದ ಆವೃತ್ತಿಯಲ್ಲಿ ಆರ್‌ಸಿಬಿಗೆ ಪ್ರಾಯೋಜಕತ್ವ ವಹಿಸಿದ್ದ 'ಅಮುಲ್' ಬ್ರ್ಯಾಂಡ್ ಅನ್ನು ಹಿಂದಿಕ್ಕಿ, ಇದೀಗ ನಮ್ಮ ರಾಜ್ಯದ ನಂದಿನಿ ಈ ಪ್ರತಿಷ್ಠಿತ ಅವಕಾಶವನ್ನು ತನ್ನದಾಗಿಸಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಈ ಬಗ್ಗೆ ಹರ್ಷ ವ್ಯಕ್ತಪಡಿಸಿ, "ಕರ್ನಾಟಕದ ಹೆಮ್ಮೆಯ ನಂದಿನಿ ಬ್ರ್ಯಾಂಡ್ ಕಳೆದ ಐಪಿಎಲ್ ಸೀಸನ್‌ನ ಚಾಂಪಿಯನ್ ತಂಡ ಆರ್‌ಸಿಬಿಯ ಅಧಿಕೃತ ಡೈರಿ ಪಾಲುದಾರನಾಗಿದೆ. ನಂದಿನಿಯ ವಿಶ್ವಾಸಾರ್ಹತೆ ಮತ್ತು ಆರ್‌ಸಿಬಿಯ ಕ್ರೀಡಾ ಬದ್ಧತೆ ಈ ಬಾರಿಯ ಐಪಿಎಲ್‌ನ ಆಕರ್ಷಣೆಯ ಕೇಂದ್ರಬಿಂದುವಾಗಲಿದೆ" ಎಂದು ಸಂತಸ ವ್ಯುಕ್ತಪಡಿಸಿದ್ದಾರೆ.
ಮಾರುಕಟ್ಟೆ ವಿಸ್ತರಣೆ ಮತ್ತು ಮಾರಾಟದ ಗುರಿ
ಈ ಐತಿಹಾಸಿಕ ಒಪ್ಪಂದವನ್ನು ಕೇವಲ ಪ್ರಾಯೋಜಕತ್ವಕ್ಕೆ ಸೀಮಿತಗೊಳಿಸದೆ, ಬ್ರ್ಯಾಂಡ್‌ನ ಮೌಲ್ಯ (Brand Mileage) ಹೆಚ್ಚಿಸಲು ಮತ್ತು ಗರಿಷ್ಠ ಮಟ್ಟದ ಮಾರಾಟದ ಲಾಭ ಪಡೆಯಲು ಕೆಎಂಎಫ್ ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಸಹಕರಿಸುವಂತೆ ಅಧಿಕಾರಿಗಳು ಮತ್ತು ವಿತರಕರಿಗೆ ಕರೆ ನೀಡಲಾಗಿದೆ. ನಂದಿನಿ ಬ್ರ್ಯಾಂಡ್ ಅನ್ನು ಪ್ರಾದೇಶಿಕ ಮಟ್ಟದಿಂದ ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಲು ಐಪಿಎಲ್‌ನ ಈ ಬೃಹತ್ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುತ್ತಿದ್ದು, ವಿರಾಟ್ ಕೊಹ್ಲಿ ಸೇರಿದಂತೆ ಆರ್‌ಸಿಬಿಯ ತಾರಾ ಆಟಗಾರರು ನಂದಿನಿ ಉತ್ಪನ್ನಗಳ ರಾಷ್ಟ್ರೀಯ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ, ಪಂದ್ಯಗಳ ವೇಳೆ ಕ್ರೀಡಾಂಗಣದಲ್ಲಿ ನಂದಿನಿ ಮಳಿಗೆಗಳು ಮತ್ತು ಡಿಜಿಟಲ್ ಪ್ರಚಾರಗಳು ರಾರಾಜಿಸಲಿವೆ.
ಕನ್ನಡಿಗರ ಎರಡು ಐಕಾನಿಕ್ ಬ್ರ್ಯಾಂಡ್‌ಗಳ ಮಿಲನ
ಈ ಒಪ್ಪಂದದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಆರ್‌ಸಿಬಿ ಮುಖ್ಯ ಕಾರ್ಯಾಚರಣಾ ಅಧಿಕಾರಿ ರಾಜೇಶ್ ಮೆನನ್, "ಈ ಋತುವಿನಲ್ಲಿ ಕೆಎಂಎಫ್ ಜೊತೆ ಪಾಲುದಾರಿಕೆ ಹೊಂದಿರುವುದು ನಮಗೆ ಅತೀವ ಸಂತಸ ತಂದಿದೆ. ಕರ್ನಾಟಕದ ಎರಡು ಐಕಾನಿಕ್ ಬ್ರ್ಯಾಂಡ್‌ಗಳಾದ ಆರ್‌ಸಿಬಿ ಮತ್ತು ನಂದಿನಿ, ತಮ್ಮ ಶ್ರೇಷ್ಠತೆ, ನಂಬಿಕೆ ಮತ್ತು ಸಮುದಾಯದೊಂದಿಗಿನ ಆಳವಾದ ಸಂಪರ್ಕದ ಮೌಲ್ಯಗಳ ಆಧಾರದ ಮೇಲೆ ಈ ಸಹಭಾಗಿತ್ವವನ್ನು ನಿರ್ಮಿಸಿವೆ. ಇದು ಅಭಿಮಾನಿಗಳಿಗೆ ಅರ್ಥಪೂರ್ಣ ಕ್ಷಣಗಳನ್ನು ಸೃಷ್ಟಿಸಲಿದೆ" ಎಂದು ಬಣ್ಣಿಸಿದ್ದಾರೆ.
ಕ್ರೀಡಾ ಪ್ರಾಯೋಜಕತ್ವಗಳು
ಐಸಿಸಿ ಟಿ20 ವಿಶ್ವಕಪ್ 2024 ರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸಲು ನಂದಿನಿ, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡುವ ಮೂಲಕ ಇತಿಹಾಸ ನಿರ್ಮಿಸಿತ್ತು. ಭಾರತದ ಪ್ರಮುಖ ಫುಟ್‌ಬಾಲ್ ಲೀಗ್ ಆದ ಐಎಸ್‌ಎಲ್‌ನ 2024-25ರ ಸೀಸನ್‌ಗೆ ನಂದಿನಿ ಕೇಂದ್ರೀಯ ಪ್ರಾಯೋಜಕತ್ವವಹಿಸಿತ್ತು. ಕಬಡ್ಡಿ ಕ್ರೀಡೆಯನ್ನು ಉತ್ತೇಜಿಸಲು 2024ರ 11ನೇ ಸೀಸನ್‌ನಲ್ಲಿ ಕೇಂದ್ರ ಪ್ರಾಯೋಜಕತ್ವದ ಜೊತೆಗೆ, ಬೆಂಗಳೂರು ಬುಲ್ಸ್ ತಂಡಕ್ಕೆ ಸಹ-ಪ್ರಾಯೋಜಕನಾಗಿ ಕಾರ್ಯನಿರ್ವಹಿಸಿದೆ.

