ಫ್ಲ್ಯಾಟ್ಫಾರ್ಮ್ ಅನ್ನು ನಾಲ್ಕು ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ಸಂಪೂರ್ಣವಾಗಿ ಕಾರ್ಯಾರಂಭವಾದ ನಂತರ, ಸರ್ಕಾರಿ ಇಲಾಖೆಗಳು ಟೆಂಡರ್ ಆಹ್ವಾನಿಸದೆ ತಮ್ಮ ಲೇಖನ ಸಾಮಗ್ರಿ ಮತ್ತು ಇತರ ಅಗತ್ಯಗಳನ್ನು ಖರೀದಿಸಬಹುದು.
ಕರ್ನಾಟಕ ಸರ್ಕಾರದ ಉದ್ಯಮವಾದ ಎಂಎಸ್‌ಐಎಲ್ (ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್) ತನ್ನದೇ ಆದ ಇ-ಕಾಮರ್ಸ್ ಫ್ಲ್ಯಾಟ್ಫಾರ್ಮ್ ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ಈ ಉಪಕ್ರಮವು ಸರ್ಕಾರಿ ಮತ್ತು ಖಾಸಗಿ ಉತ್ಪಾದಕರಿಗೆ ಮಾರುಕಟ್ಟೆ ಸೃಷ್ಟಿಸುವ ಗುರಿಯನ್ನು ಹೊಂದಿದ್ದು, ಕೇಂದ್ರ ಸರ್ಕಾರದ ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ (ಜಿಇಎಂ) ಪೋರ್ಟಲ್‌ನಂತೆಯೇ ಕೆಲಸ ಮಾಡಲಿದೆ.
ಶನಿವಾರ (ಮಾರ್ಚ್ 29)ರಂದು ದೊಡ್ಡ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್ ಅವರು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಯೋಜನೆ ಬಗ್ಗೆ ವಿವರವಾದ ಚರ್ಚೆ ನಡೆಸಿದ್ದಾರೆ. ಇದನ್ನು ಪ್ರಗತಿಪರ ಹೆಜ್ಜೆ ಎಂದು ಬಣ್ಣಿಸಿದ ಸಚಿವರು, ಅದರ ಅನುಷ್ಠಾನಕ್ಕಾಗಿ ಸಮಗ್ರ ನಕ್ಷೆ ರಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
"ಈ ಫ್ಲ್ಯಾಟ್ಫಾರ್ಮ್ ಅನ್ನು ನಾಲ್ಕು ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ಸಂಪೂರ್ಣವಾಗಿ ಕಾರ್ಯಾರಂಭವಾದ ನಂತರ, ಸರ್ಕಾರಿ ಇಲಾಖೆಗಳು ಟೆಂಡರ್ ಆಹ್ವಾನಿಸದೆ ತಮ್ಮ ಲೇಖನ ಸಾಮಗ್ರಿ ಮತ್ತು ಇತರ ಅಗತ್ಯಗಳನ್ನು ಖರೀದಿಸಬಹುದು. ಅಲ್ಲದೆ, ಅವರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಹ ಈ ಪ್ಲ್ಯಾಟ್ಫಾರ್ಮ್ ಬಳಸಬಹುದು. ಇದು ಕೇಂದ್ರ ಸರ್ಕಾರದ ಜಿಇಎಂ ಪೋರ್ಟಲ್‌ನಂತೆ ಕಾರ್ಯನಿರ್ವಹಿಸುತ್ತದೆ," ಎಂದು ಪಾಟೀಲ್ ಮಾಹಿತಿ ನೀಡಿದ್ದಾರೆ.
ಮೊದಲ ಹಂತದಲ್ಲಿ ಎಂಎಸ್‌ಐಎಲ್ ಉತ್ಪನ್ನಗಳು
ಮೊದಲ ಹಂತದಲ್ಲಿ, ಕೇವಲ ಎಂಎಸ್‌ಐಎಲ್ ಉತ್ಪನ್ನಗಳು ಮಾತ್ರ ಈ ವೇದಿಕೆಯಲ್ಲಿ ಲಭ್ಯವಿರುತ್ತವೆ. ಎರಡನೇ ಹಂತದಲ್ಲಿ ಮೈಸೂರು ಸ್ಯಾಂಡಲ್ ಸೋಪ್, ಲಿಡ್ಕರ್ ಉತ್ಪನ್ನಗಳು, ಮೈಸೂರು ಸಿಲ್ಕ್, ಕಾವೇರಿ ಎಂಪೋರಿಯಂ, ಮತ್ತು ನಂದಿನಿ ಸೇರಿದಂತೆ ವಿವಿಧ ಸರ್ಕಾರಿ ಉದ್ಯಮಗಳ ಉತ್ಪನ್ನಗಳನ್ನು ಮಾರಲಾಗುತ್ತದೆ. ವೇದಿಕೆಯು ಎಂಎಸ್‌ಎಂಇಗಳು (ಸಣ್ಣ ಮತ್ತು ಮಧ್ಯಮ ಉದ್ಯಮಗಳು) ಮತ್ತು ಮಹಿಳಾ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ಮಾರಾಟವನ್ನು ಮಾಡಲಿದೆ.
ಎಲೆಕ್ಟ್ರಾನಿಕ್ ಉತ್ಪನ್ನಗಳು
ಮೂರನೇ ಹಂತದಲ್ಲಿ ಗ್ರಾಹಕ ಉತ್ಪನ್ನಗಳು ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಮಾರಾಟದ ಸಾಲಿಗೆ ಸೇರಿಸಲಾಗುವುದು. ಆದರೆ ಅಂತಿಮ ಹಂತದಲ್ಲಿ ತಾಜಾ ಉತ್ಪನ್ನಗಳನ್ನು ಸೇರಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಇ-ಕಾಮರ್ಸ್ ಕ್ಷೇತ್ರದ ಬೃಹತ್ ಸಾಮರ್ಥ್ಯವನ್ನು ಎತ್ತಿ ತೋರಿಸಿದ ಪಾಟೀಲ್, ಭಾರತದ ವಾರ್ಷಿಕ ಇ-ಕಾಮರ್ಸ್ ವಹಿವಾಟು ಪ್ರಸ್ತುತ 75 ಬಿಲಿಯನ್ ಡಾಲರ್‌ಗಳಷ್ಟಿದ್ದು, 2030 ರ ವೇಳೆಗೆ ಇದು 350 ಬಿಲಿಯನ್ ಡಾಲರ್‌ಗಳಿಗೆ ಏರಲಿದೆ ಎಂದು ಹೇಳಿದರು. ದೇಶದಲ್ಲಿ ಸುಮಾರು 900 ಮಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದು, ಇ-ಕಾಮರ್ಸ್ ಬೆಳವಣಿಗೆಗೆ ಮಾರುಕಟ್ಟೆ ಪರಿಸ್ಥಿತಿಗಳು ಅತ್ಯಂತ ಅನುಕೂಲಕರವಾಗಿವೆ ಎಂದು ಅವರು ವಿವರಿಸಿದ್ದಾರೆ.
ಸಭೆಯಲ್ಲಿ ಎಂಎಸ್‌ಐಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್, ನಿರ್ದೇಶಕ ಚಂದ್ರಪ್ಪ ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.