ಬೆಂಗಳೂರಿನಲ್ಲಿ ಹೆಚ್ಚು ಮೌಲ್ಯಯುತ ಕಂಪನಿಗಳು: ವರದಿ

ಬೆಂಗಳೂರಿನಲ್ಲಿ ಅತ್ಯಂತ ಹೆಚ್ಚು ಮೌಲ್ಯಯುತ ಕಂಪನಿಗಳಿವೆ ಎಂದು ಐಡಿಎಫ್‌ಸಿ ಫರ್ಸ್ಟ್‌ ಬ್ಯಾಂಕ್‌ ಮತ್ತು ಹುರೂನ್‌ ಇಂಡಿಯ ವರದಿ ಹೇಳಿದೆ.

ರಾಜಧಾನಿಯಲ್ಲಿ ಅಂಥ 129 ಕಂಪನಿಗಳಿದ್ದು, ನಂತರದ ಸ್ಥಾನ ಮುಂಬೈ (78)ಗೆ ಲಭ್ಯವಾಗಿದೆ. ಗುರುಗ್ರಾಮ್ ಮತ್ತು ನವದೆಹಲಿ (49) ಮೂರನೇ ಸ್ಥಾನದಲ್ಲಿದೆ ಎಂದು ಹುರುನ್ ಇಂಡಿಯಾ ಹೇಳಿದೆ.

ಭಾರತದ ಸಿಲಿಕಾನ್ ವ್ಯಾಲಿ ಎಂದೇ ಜನಪ್ರಿಯವಾಗಿರುವ ಬೆಂಗಳೂರಿನಲ್ಲಿ 2000ದ ಬಳಿಕ ಸ್ಟಾರ್ಟ್‌ ಅಪ್‌ಗಳ ಯುಗ ಆರಂಭವಾಗಿದೆ. ದೇಶದಲ್ಲಿ ಇಂಥ 200 ಕಂಪನಿಗಳನ್ನು ಆರಂಭಿಸಿದ 405 ಮಂದಿ ಪಟ್ಟಿಯಲ್ಲಿದ್ದಾರೆ. ಅವುಗಳ ಸಂಚಿತ ಮೌಲ್ಯ 30 ಲಕ್ಷ ಕೋಟಿ ರೂ. ಹಣಕಾಸು ಸೇವಾ ವಲಯದಲ್ಲಿ ಅತಿ ಹೆಚ್ಚು 46, ಚಿಲ್ಲರೆ ಮಾರಾಟದಲ್ಲಿ 30 ಮತ್ತು ಆರೋಗ್ಯ ಕ್ಷೇತ್ರದಲ್ಲಿ 26 ಕಂಪನಿಗಳು ಇವೆ.

ಡಿ-ಮಾರ್ಟ್‌ ಅಗ್ರ ಸ್ಥಾನದಲ್ಲಿದೆ. ಕಂಪನಿಯನ್ನು ಮುನ್ನಡೆಸುತ್ತಿರುವವರು ಅವೆನ್ಯೂ ಸೂಪರ್‌ ಮಾರ್ಕೆಟ್‌ನ ರಾಧಾಕಿಶನ್ ದಮಾನಿ. 2000 ರಲ್ಲಿ ಆರಂಭವಾದ ಕಂಪನಿಯ ಸೆಪ್ಟೆಂಬರ್‌ 2023ರ ಮಾರುಕಟ್ಟೆ ಮೌಲ್ಯ 2.38 ಲಕ್ಷ ಕೋಟಿ ರೂ.

ಬೆಂಗಳೂರಿನಲ್ಲಿ ಬಿನ್ನಿ ಬನ್ಸಾಲ್ ಮತ್ತು ಸಚಿನ್ ಬನ್ಸಾಲ್ ಸ್ಥಾಪಿಸಿದ ಫ್ಲಿಪ್‌ಕಾರ‍್ಟ್‌ ಎರಡನೇ ಸ್ಥಾನದಲ್ಲಿದ್ದು,1.19 ಲಕ್ಷ ಕೋಟಿ ರೂ. ಈಕ್ವಿಟಿ ಮೌಲ್ಯವನ್ನು ಹೊಂದಿದೆ. ದೀಪಿಂದರ್ ಗೋಯಲ್ ಸ್ಥಾಪಿಸಿದ ಗುರುಗ್ರಾಮ್ ಮೂಲದ ಝೊಮಾಟೊ ಮೂರನೇ ಸ್ಥಾನದಲ್ಲಿದೆ ಮತ್ತು ಇದರ ಮಾರುಕಟ್ಟೆ ಮೌಲ್ಯ 86,835 ಕೋಟಿ ರೂ. ಮುಂಬೈ ಮೂಲದ ಝರೋಧಾ 50,630 ಕೋಟಿ ರೂ. ಮೌಲ್ಯ ದೊಂದಿಗೆ 10 ನೇ ಸ್ಥಾನದಲ್ಲಿದೆ. ಪಟ್ಟಿಯಲ್ಲಿ 20 ಮಹಿಳಾ ಉದ್ಯಮಿಗಳಿದ್ದು, ನೈಕಾ ಸಂಸ್ಥಾಪಕಿ ಫಲ್ಗುಣಿ ನಾಯರ್ ಮುಂಚೂಣಿಯಲ್ಲಿದ್ದಾರೆ.

ಹುರುನ್ ಇಂಡಿಯಾದ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ‍್ದೇಶಕ ಅನಸ್ ರೆಹಮಾನ್ ಜುನೈದ್ ಪ್ರಕಾರ, ಸಾರ್ವಜನಿಕವಾಗಿ ಪಟ್ಟಿ ಮಾಡಲಾದ ಮತ್ತು ಪಟ್ಟಿಯಲ್ಲಿ ಇಲ್ಲದೆ ಇರುವ ಕಂಪನಿಗಳು ಇವೆ. ಪಟ್ಟಿಯಲ್ಲಿರುವ ಅತಿ ಹಿರಿಯರು, ಹ್ಯಾಪಿಯೆಸ್ಟ್ ಮೈಂಡ್ಸ್‌ನ ಅಶೋಕ್ ಸೂಟ (80 ವರ್ಷ) ಮತ್ತು ಅತಿ ಕಿರಿಯ ಜೆಪ್ಟೊದ ಕೈವಲ್ಯ ವೋಹ್ರಾ(21 ವರ‍್ಷ).

ಪಟ್ಟಿಯಲ್ಲಿರುವ ಇತರ ಕಂಪನಿಗಳೆಂದರೆ, ಸ್ವಿಗ್ಗಿ, ಡ್ರೀಮ್‌ ಟೀಮ್‌ 11,ರೇಜರ್‌ ಪೇ, ಮ್ಯಾಕ್ಸ್‌ ಹೆ‌ಲ್ತ್‌ ಕೇರ್‌, ಕ್ರೆಡ್‌, ಸ್ವಿಗ್ಗಿ, ಡೈಲಿಹಂಟ್‌, ಪಾಲಿಗಾನ್‌, ಅಕ್ಕೊ ಜನರಲ್‌ ಇನ್ಷೂರೆನ್ಸ್‌, ಓಪನ್‌, ಕ್ರೆಡಿಟ್‌ ಬೀ, ಬೌನ್ಸ್‌, ಹೋಮ್‌ ಲೇನ್, ಕ್ಯಾಪ್ಟನ್‌ ಫ್ರೆಶ್.


Next Story